ದೆಹಲಿ(ಮೇ.16): ತೌಕ್ಟೇ ಚಂಡಮಾರುತವು ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ತೀವ್ರವಾದ ಚಂಡಮಾರುತವಾಗಿ ಬದಲಾಗಿದೆ. ಮುಂದಿನ 12 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ಎಚ್ಚರಿಸಿದೆ.
ಚಂಡಮಾರುತವು ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ಡಿಯು ಹಾಗೂ ದಾದ್ರಾ ಮತ್ತು ಹವೇಲಿಯ ಮೂಲಕ ಹಾದುಹೋಗುತ್ತದೆ. ಮೇ 18 ರ ಬೆಳಗ್ಗೆ ಗುಜರಾತ್ ಕರಾವಳಿಯಲ್ಲಿ ಇದರ ಇಫೆಕ್ಟ್ ಕಾಣಿಸಲಿದೆ.
ಈಗಾಗಲೇ ಸೈಕ್ಲೋನ್ ಪ್ರಭಾವದಿಂದ ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ತೀವ್ರ ಮಳೆಯಾಗಿದೆ. ಈ ರಾಜ್ಯಗಳಲ್ಲಿ ತುರ್ತು ಮತ್ತು ಪರಿಹಾರ ತಂಡಗಳು ಹೆಚ್ಚಿನ ಪರಿಣಾಮಗಳನ್ನೆದುರಿಸಲು ಸಜ್ಜಾಗುತ್ತಿವೆ.
ಚಂಡಮಾರುತ ಎಫೆಕ್ಟ್: ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ
ಕೇರಳದಲ್ಲಿ ಧಾರಾಕಾರ ಮಳೆಯಾಗಿದ್ದು ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡಗಳ ಸಂಖ್ಯೆಯನ್ನು 53 ರಿಂದ 100 ಕ್ಕೆ ಹೆಚ್ಚಿಸಿದೆ. ಈ ತಂಡಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರಗಳಿಗೆ ಸಜ್ಜುಗೊಳಿಸಲಾಗಿದೆ. ಈ ಪೈಕಿ 48ನ್ನು ಮೊದಲೇ ನಿಯೋಜಿಸಲಾಗಿದ್ದು, 20ನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ. ಹೆಚ್ಚುವರಿ 32 ತಂಡಗಳನ್ನು ಬ್ಯಾಕಪ್ ಆಗಿ ಇರಿಸಲಾಗುತ್ತಿದೆ.
ಭಾರತೀಯ ವಾಯುಪಡೆಯು 16 ಸಾರಿಗೆ ವಿಮಾನಗಳು ಮತ್ತು 18 ಹೆಲಿಕಾಪ್ಟರ್‌ಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ. ಕರಾವಳಿ ಪ್ರದೇಶಗಳಲ್ಲಿ ಕೋವಿಡ್ ಪರಿಹಾರ ಕಾರ್ಯಾಚರಣೆಗಳತ್ತ ಗಮನ ಹರಿಸುವುದಾಗಿಯೂ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಪರಿಸ್ಥಿತಿಯನ್ನು ಪರಿಶೀಲಿಸಿದ್ದು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.