ಉಪ್ಪಿನಂಗಡಿ ಶಾಲೆಯಂತೆ, ತಮಿಳುನಾಡಲ್ಲೂ ವಿದ್ಯಾರ್ಥಿಗಳಿಗೆ 'ವಾಟರ್ ಬ್ರೇಕ್'!

By Web DeskFirst Published Nov 26, 2019, 3:32 PM IST
Highlights

ತಮಿಳುನಾಡಿನಲ್ಲಿನ್ನು ವಿದ್ಯಾರ್ಥಿಗಳಿಗೆ ನೀರು ಕುಡಿಯಲು ಮೂರು ಬ್ರೇಕ್| ಉಪ್ಪಿನಂಗಡಿಯ ಶಾಲೆಯಂತಹ ಯೋಜನೆ ಜಾರಿಗೊಳಿಸಿದ ತಮಿಳುನಾಡಿನ ಶಿಕ್ಷಣ ಇಲಾಖೆ| ಮಕ್ಕಳು ಬೇಕಾದಷ್ಟು ನೀರು ಕುಡಿಯುತ್ತಾರಾ? ಖಾತ್ರಿಪಡಿಸಿಕೊಳ್ಳಲು ನೂತನ ಯೋಜನೆ

ಚೆನ್ನೈ[ನ.26]: ಶಾಲಾ ಮಕ್ಕಳು ನಿಯಮ ಬದ್ಧವಾಗಿ ನೀರು ಕುಡಿಯುತ್ತಾರಾ ಎಂದು ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಪ್ರಾಥಮಿಕ ಶಿಕ್ಷಣ ಇಲಾಖೆಯು ನೂತನ ಯೋಜನೆಯನ್ನು ಜಾರಿಗೊಳಿಸಿದೆ. ಶಾಲೆಯ ಅವಧಿಯಲ್ಲಿ ಒಟ್ಟು ಮೂರು ಬಾರಿ ನೀರು ಕುಡಿಯುವ ಉದ್ದೇಶದಿಂದಲೇ ವಾಟರ್‌ ಬ್ರೇಕ್ ನೀಡುತ್ತಿದ್ದು, 'ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ನೀರು ಕುಡಿಯಲೆಂದೇ ನೀಡಲಾಗುವ ಬ್ರೇಕ್ ನಲ್ಲಿ ಮಕ್ಕಳು ಬೇಕಾದಷ್ಟು ನೀರು ಕುಡಿಯುತ್ತಾರಾ ಎಂದು ಶಿಕ್ಷಕರು ಪರಿಶೀಲಿಸಬೇಕು' ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ನವೆಂಬರ್ 25ರಂದು ತಮಿಳುನಾಡಿನ ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಕಟಣೆಯೊಂದನ್ನು ಹೊರಡಿಸಿದೆ. 'ಪ್ರಸ್ತುತ ನಮ್ಮ ವ್ಯಾಪ್ತಿಗೊಳಪಡುವ ಎಲ್ಲಾ ಶಾಲೆಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಎರಡು 10 ನಿಮಿಷದ ಬ್ರೇಕ್ ನೀಡುತ್ತಾರೆ. ಇದನ್ನು ಹೊರತುಪಡಿಸಿ 45 ನಿಮಿಷಗಳ ಊಟದ ಬ್ರೇಕ್ ನೀಡುತ್ತಾರೆ. ಪ್ರತಿದಿನ ಮಕ್ಕಳು ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕು. ಇಲ್ಲದಿದ್ದರೆ ನಿರ್ಜಲೀಕರಣದಿಂದಾಗಿ ಆಯಾಸ, ತಲೆನೋವು ಹಾಗೂ ಕಡಿಮೆ ಸಹಿಷ್ಣುತೆಯಂತಹ ಸಮಸ್ಯೆ ಕಾಡುತ್ತದೆ' ಎಂಬುವುದು ಶಿಕ್ಷಣ ಮಂಡಳಿಯ ಅಧಿಕಾರಿಯೊಬ್ಬರ ಮಾತಾಗಿದೆ.

ಮಕ್ಕಳು ನೀರು ಕುಡಿಯದೇ ಬಾಟಲ್ ವಾಪಸ್ ತರ್ತಾರ..? ಈ ಶಾಲೆಯಲ್ಲಿದೆ ಹೊಸ ಐಡಿಯಾ..!

'ಹಲವಾರು ಮಕ್ಕಳು ಸಮಸ್ಯೆಗಳ ಬಗ್ಗೆ ತಿಳಿಯದೆ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದಿಲ್ಲ. ನೀರು ಸೇವಿಸುವುದರಿಂದ ಮಕ್ಕಳು ಲವಲವಿಕೆ ಹಾಗೂ ಆರೋಗ್ಯವಂತರಾಗಿತ್ತಾರೆ. ಅಲ್ಲದೇ ಇದು ಮೂತ್ರಕೋಶ ಸಂಬಂಧಿತ ಸಮಸ್ಯೆಗಳನ್ನೂ ತಡೆಯುತ್ತದೆ ' ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಇನ್ನು ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ನೀರು ಹಾಗೂ ಶೌಚಾಲಯಗಳು ಇದೆಯೇ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ನೀಡಬೇಕೆಂದು ವೈದ್ಯರು ಹಾಗೂ ಶಿಕ್ಷಕರಿಗೆ ಆದೇಶಿಸಿದೆ. 

ಶಾಲೆಯಲ್ಲಿ ಮಕ್ಕಳಿಗೆ ನೀರು ಕುಡಿಯುವ ಸಲುವಾಗಿ ಮೂರು ಬ್ರೇಕ್ ನೀಡುತ್ತಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದಷ್ಟೇ ರಾಜ್ಯದ ದಕ್ಷಿಣ ಕನ್ನಡದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಇಂತಹ ಯೋಜನೆ ಜಾರಿಗೊಳಿಸಿದ್ದರು. ವಾಟರ್ ಬೆಲ್ ಎಂಬ ಹೆಸರಿನಡಿ ಜಾರಿಯಾದ ಈ ಯೋಜನೆಗೆ ಭಾರೀ ಶ್ಲಾಘನೆ ವ್ಯಕ್ತವಾಗಿತ್ತು. 

click me!