ಅಣ್ಣಾದೊರೈನಿಂದ ವಿಜಯ್‌ವರೆಗೆ.. ತಮಿಳು ನಾಡು ರಾಜಕೀಯಕ್ಕೆ ಸಿನಿಮಾವೇ ಹೆದ್ದಾರಿ ಅನ್ನೋದು ಮತ್ತೊಮ್ಮೆ ಸಾಬೀತಾಯ್ತು!

Published : May 04, 2026, 10:41 AM IST
Tamil Nadu

ಸಾರಾಂಶ

ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ತಾರೆಯರ ಪ್ರಭಾವ ಮೊದಲಿನಿಂದಲೂ ಇದೆ. ಎಂಜಿಆರ್, ಜಯಲಲಿತಾ ಯಶಸ್ಸು ಕಂಡರೆ, ಶಿವಾಜಿ, ಕಮಲ್, ರಜನಿ ವಿಫಲರಾದರು. ಇದೀಗ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 2026ರ ಚುನಾವಣಾ ಟ್ರೆಂಡ್‌ಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಹೊಸ ರಾಜಕೀಯ ಶಕೆಯ ಸೂಚನೆ ನೀಡಿದೆ.

ಬೆಂಗಳೂರು (ಮೇ.4) ತಮಿಳುನಾಡಿನ ರಾಜಕೀಯ ಇತಿಹಾಸವು ಬಣ್ಣದ ಲೋಕದೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ದ್ರಾವಿಡ ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯದ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸಿನಿಮಾ ಇಲ್ಲಿ ಪ್ರಬಲ ಮಾಧ್ಯಮವಾಗಿದೆ. ಈಗ 2026ರ ವಿಧಾನಸಭಾ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್‌ಗಳಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಅಚ್ಚರಿಯ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ಸಿನಿಮಾದಿಂದ ರಾಜಕೀಯಕ್ಕೆ ಬಂದ ದಿಗ್ಗಜರ ಯಶೋಗಾಥೆ ಮತ್ತು ವೈಫಲ್ಯಗಳತ್ತ ನೋಟ ಇಲ್ಲಿದೆ.

ಯಶಸ್ಸಿನ ಶಿಖರ ಏರಿದವರು: ಅಣ್ಣಾ, ಕರುಣಾನಿಧಿ, ಎಂಜಿಆರ್ ಮತ್ತು ಅಮ್ಮ

ಸಿ.ಎನ್. ಅಣ್ಣಾದೊರೈ (ಅಣ್ಣಾ): ಚಿತ್ರಕಥೆಗಾರರಾಗಿದ್ದ ಅಣ್ಣಾದೊರೈ ಅವರು ಸಿನಿಮಾ ಮೂಲಕ ದ್ರಾವಿಡ ಸಿದ್ಧಾಂತ ಬಿತ್ತಿದವರು. 1967ರಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಮುರಿದು ತಮಿಳುನಾಡಿನ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದರು.

ಎಂ. ಕರುಣಾನಿಧಿ: ಪ್ರಖ್ಯಾತ ಸಂಭಾಷಣೆಗಾರರಾಗಿದ್ದ ಇವರು ಐದು ಬಾರಿ ಮುಖ್ಯಮಂತ್ರಿಯಾಗಿ ಐದು ದಶಕಗಳ ಕಾಲ ತಮಿಳು ರಾಜಕೀಯವನ್ನು ಆಳಿದರು. ಸಾಹಿತ್ಯಿಕ ವರ್ಚಸ್ಸು ಮತ್ತು ರಾಜಕೀಯ ಚಾಣಾಕ್ಷತನ ಇವರ ಯಶಸ್ಸಿನ ಗುಟ್ಟಾಗಿತ್ತು.

ಎಂ.ಜಿ. ರಾಮಚಂದ್ರನ್ (ಎಂಜಿಆರ್): ತಮಿಳುನಾಡಿನ ಮೊದಲ ಸೂಪರ್ ಸ್ಟಾರ್ ಸಿಎಂ. ಬಡವರ ರಕ್ಷಕನ ಬಿಂಬವನ್ನೇ ಮತಗಳನ್ನಾಗಿ ಪರಿವರ್ತಿಸಿದ ಇವರು, 1977 ರಿಂದ 1987ರಲ್ಲಿ ತಮ್ಮ ಸಾವಿನವರೆಗೂ ಆಡಳಿತ ನಡೆಸಿದರು. ಅವರ ಮಧ್ಯಾಹ್ನದ ಬಿಸಿಯೂಟ ಯೋಜನೆ ಇಂದಿಗೂ ಜನಮಾನಸದಲ್ಲಿದೆ.

ಜೆ. ಜಯಲಲಿತಾ : ಎಂಜಿಆರ್ ಅವರ ಉತ್ತರಾಧಿಕಾರಿಯಾಗಿ ಬಂದ ಇವರು, ಉಕ್ಕಿನ ಮಹಿಳೆಯಾಗಿ ನಾಲ್ಕು ಬಾರಿ ಅಧಿಕಾರ ನಡೆಸಿದರು. ಪುರುಷ ಪ್ರಧಾನ ರಾಜಕೀಯದಲ್ಲಿ ಸಿನಿಮಾ ಇಮೇಜ್ ಅನ್ನು ಪ್ರಬಲ ಆಡಳಿತವನ್ನಾಗಿ ಪರಿವರ್ತಿಸಿದ ಶಕ್ತಿ ಇವರದ್ದು.

ಸ್ಟಾರ್ ಪವರ್ ಇದ್ದರೂ ಮಂಕಾದವರು: ಶಿವಾಜಿ, ಕಮಲ್ ಮತ್ತು ರಜನಿ

ಸಿನಿಮಾದಲ್ಲಿ ಅಧಿಪತಿಗಳಾಗಿದ್ದರೂ ರಾಜಕೀಯದಲ್ಲಿ ಸೋತವರ ಪಟ್ಟಿ ದೊಡ್ಡದಿದೆ. ಶಿವಾಜಿ ಗಣೇಶನ್‌, ವಿಜಯಕಾಂತ್‌, ರಜನಿಕಾಂತ್‌ ಹಾಗೂ ಕಮಲ್‌ ಹಾಸನ್‌ಗೆ ಎಂದಿಗೂ ಸ್ಟಾರ್‌ಗಿರಿ ರಾಜಕೀಯದಲ್ಲಿ ಯಶಸ್ಸು ತಂದುಕೊಡಲಿಲ್ಲ.

ಶಿವಾಜಿ ಗಣೇಶನ್: ನಟನೆಯಲ್ಲಿ ದಂತಕಥೆಯಾಗಿದ್ದರೂ, ರಾಜಕೀಯದಲ್ಲಿ ಇವರಿಗೆ ಒಂದು ಸೀಟು ಗೆಲ್ಲಲೂ ಸಾಧ್ಯವಾಗಲಿಲ್ಲ.

ವಿಜಯಕಾಂತ್ : 2011ರಲ್ಲಿ ಪ್ರತಿಪಕ್ಷ ನಾಯಕರಾಗುವ ಮಟ್ಟಕ್ಕೆ ಬೆಳೆದರೂ, ನಂತರದ ದಿನಗಳಲ್ಲಿ ಸಂಘಟನಾತ್ಮಕ ವೈಫಲ್ಯದಿಂದ ಅವರ ಪಕ್ಷ ಅಸ್ತಿತ್ವ ಕಳೆದುಕೊಂಡಿತು.

ಕಮಲ್ ಹಾಸನ್: 'ಮಕ್ಕಳ್ ನೀಧಿ ಮೈಯಂ' ಮೂಲಕ ಬುದ್ಧಿಜೀವಿಗಳ ಗಮನ ಸೆಳೆದರೂ, ನೆಲಮಟ್ಟದ ಸಂಘಟನೆಯಿಲ್ಲದೆ ಚುನಾವಣಾ ಕಣದಲ್ಲಿ ಶೂನ್ಯ ಸುತ್ತಿದರು.

ರಜನಿಕಾಂತ್: ದಶಕಗಳ ಕಾಲ ರಾಜಕೀಯ ಎಂಟ್ರಿಯ ಬಗ್ಗೆ ಚರ್ಚೆ ನಡೆಸಿದರೂ, ಅಂತಿಮವಾಗಿ ಆರೋಗ್ಯದ ಕಾರಣ ನೀಡಿ ಹಿಂದೆ ಸರಿದರು.

ಎಂಜಿಆರ್‌ ಬಳಿಕ ತಮಿಳಿನ ಸ್ಟಾರ್‌ ವಿಜಯ್‌

ಪ್ರಸ್ತುತ ಪೆರಂಬೂರ್‌ನಂತಹ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವ ನಟ ಜೋಸೆಫ್‌ ವಿಜಯ್, ಈ ಹಿಂದಿನ ಸ್ಟಾರ್‌ಗಳಿಗಿಂತ ಭಿನ್ನವಾದ ಹಾದಿ ತುಳಿಯುತ್ತಿದ್ದಾರೆ.

ಯುವ ಮತದಾರರ ದೊಡ್ಡ ಪಡೆ, ಕ್ಲೀನ್ ಇಮೇಜ್ ಮತ್ತು ದ್ರಾವಿಡ-ತಮಿಳು ರಾಷ್ಟ್ರೀಯತೆಯ ಮಿಶ್ರ ಸಿದ್ಧಾಂತದೊಂದಿಗೆ ಚುನಾವಣಾ ಕಣಕ್ಕೆ ಕಾಲಿಟ್ಟಿದ್ದರು. 2026ರ ಚುನಾವಣೆಗೆ ಮೊದಲೇ ಸಿನಿಮಾರಂಗಕ್ಕೆ ನಿವೃತ್ತಿ ಘೋಷಿಸಿ, 2 ಕೋಟಿ ಸದಸ್ಯತ್ವದ ಗುರಿ ಹೊಂದಿರುವುದು ಅವರ ಗಂಭೀರತೆಯನ್ನು ತೋರಿಸಿತ್ತು. ಅದರೊಂದಿಗೆ ಡಿಎಂಕೆ ಮತ್ತು ಎಐಎಡಿಎಂಕೆಯಂತಹ ದಶಕಗಳ ಇತಿಹಾಸವಿರುವ ಪಕ್ಷಗಳನ್ನು ಎದುರಿಸಿ ಅಧಿಕಾರ ಹಿಡಿಯುವುದು ಅಂದುಕೊಂಡಷ್ಟು ಸುಲಭವೂ ಆಗಿರಲಿಲ್ಲ. ಕೊನೆಗೆ ಸಾಲು ಸಾಲು ಮೆರವಣಿಗೆ ಪ್ರಚಾರ ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಅವರು ಭಾಗವಹಿಸಿ ಪಕ್ಷದ ಇಮೇಜ್‌ಅನ್ನು ಸೃಷ್ಟಿಸಿದರು. ಈಗ ತಮಿಳುನಾಡಿನಲ್ಲಿ ಟಿವಿಕೆ ಮುನ್ನಡೆ ಸಾಧಿಸುತ್ತಿರುವುದು ದ್ರಾವಿಡ ರಾಜ್ಯದಲ್ಲಿ ರಾಜಕೀಯದ ಹೊಸ ಶಕೆ ಆರಂಭವಾಗುತ್ತಿದೆ ಅನ್ನೋದನ್ನು ತೋರಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Tamil nadu Election results 2026: ಸಿಎಂ, ಡಿಸಿಎಂ ಸೇರಿ 31 ಸಚಿವರಿಗೆ ಹಿನ್ನಡೆ, ಕೇವಲ 3 ಸಚಿವರು ಮಾತ್ರ ಮುನ್ನಡೆ! ತಮಿಳುನಾಡಲ್ಲಿ ಏನಾಗುತ್ತಿದೆ?
ತಮಿಳುನಾಡಿನಲ್ಲಿ ದಳಪತಿಯೇ ಅಧಿಪತಿ? ಟಿವಿಕೆ ಪಕ್ಷವೇ ಕಿಂಗ್! ಅಧಿಕಾರ ಗದ್ದುಗೆಗೆ ಮ್ಯಾಜಿಕ್ ನಂಬರ್ ಎಷ್ಟು ಬೇಕು?