ಒಂಟಿ ತೋಳ ದಾಳಿಗೆ ಸಜ್ಜಾಗಿದ್ದ ಶಂಕಿತ ಐಸಿಸ್‌ ಉಗ್ರ ಸೆರೆ; 2 ಕುಕ್ಕರ್‌ ಬಾಂಬ್‌ ವಶ!

By Kannadaprabha NewsFirst Published Aug 24, 2020, 7:27 AM IST
Highlights

ಶಂಕಿತ ಐಸಿಸ್‌ ಉಗ್ರ ಸೆರೆ; 2 ಕುಕ್ಕರ್‌ ಬಾಂಬ್‌ ವಶ| ದಿಲ್ಲಿ ಪೊಲೀಸರಿಂದ ಬಂಧನ; ತಪ್ಪಿದ ದುರಂತ| ಉತ್ತರಪ್ರದೇಶದ ಅಬು ಯೂಸೆಫ್‌ ಸಿಕ್ಕಿಬಿದ್ದ ಉಗ್ರ| ಒಂಟಿ ತೋಳ ದಾಳಿಗೆ ಸಜ್ಜಾಗಿದ್ದ ಐಸಿಸ್‌ ಉಗ್ರ| ಆತ್ಮಾಹುತಿ ಜಾಕೆಟ್‌, ಸ್ಫೋಟಕ, ವೈರ್‌ ವಶ

ನವದೆಹಲಿ(ಆ.24): ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿಯಲ್ಲಿ ಭಾರಿ ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಐಸಿಸ್‌ ಶಂಕಿತ ಉಗ್ರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅದರೊಂದಿಗೆ ದೊಡ್ಡ ಅನಾಹುತ ತಪ್ಪಿದಂತಾಗಿದ್ದು, ದೆಹಲಿಯ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ಹಳ್ಳಿಯೊಂದರ ನಿವಾಸಿ ಮುಸ್ತಾಕೀನ್‌ ಖಾನ್‌ ಅಲಿಯಾಸ್‌ ಅಬು ಯೂಸುಫ್‌ ಬಂಧಿತ. ಶನಿವಾರ ಈತ ದೆಹಲಿಯಲ್ಲಿ ಬೈಕ್‌ನಲ್ಲಿ 2 ತೀವ್ರ ಸ್ಫೋಟ ಸಾಮರ್ಥ್ಯದ ಪ್ರೆಷರ್‌ ಕುಕ್ಕರ್‌ ಬಾಂಬ್‌ಗಳನ್ನು ಒಯ್ಯುತ್ತಿದ್ದಾಗ ದೆಹಲಿ ಪೊಲೀಸರು ರೆಡ್‌ ಹ್ಯಾಂಡ್‌ ಆಗಿ ಬಂಧಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಜನನಿಬಿಡ ಸ್ಥಳದಲ್ಲಿ ‘ಒಂಟಿ ತೋಳ’ದ (ಏಕಾಂಗಿ) ದಾಳಿ ನಡೆಸಲು ಈತ ಹೊಂಚು ಹಾಕುತ್ತಿದ್ದ. ಅವನಿಂದ ಎರಡು ಸಜೀವ ಬಾಂಬ್‌ಗಳ ಜೊತೆಗೆ ಒಂದು ಪಿಸ್ತೂಲ್‌ ಹಾಗೂ ಗುಂಡುಗಳು ಮತ್ತು ಮೋಟರ್‌ಸೈಕಲ್‌ ವಶಪಡಿಸಿಕೊಳ್ಳಲಾಗಿದೆ.

‘ಆ.15ರಂದು ಸ್ವಾತಂತ್ರ್ಯೋತ್ಸವದ ವೇಳೆ ಈತ ದೆಹಲಿಯಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದ್ದ. ಆದರೆ ಭಾರಿ ಭದ್ರತೆ ಇದ್ದುದರಿಂದ ಸಾಧ್ಯವಾಗಿರಲಿಲ್ಲ. ಈಗ ಭದ್ರತೆ ಕಡಿಮೆಯಿರಬಹುದು ಎಂದು ಭಾವಿಸಿ ದಾಳಿ ನಡೆಸಲು ಬಂದಿದ್ದಾನೆ. ಈತನ ಬಳಿಯಿರುವ ಬಾಂಬ್‌ಗಳು ಸ್ಫೋಟಕ್ಕೆ ಸಿದ್ಧ ಸ್ಥಿತಿಯಲ್ಲಿದ್ದವು. ಕೇವಲ ಟೈಮರ್‌ ಅಳವಡಿಸುವುದು ಮಾತ್ರ ಬಾಕಿಯಿತ್ತು. ಒಂದು ವರ್ಷದಿಂದ ಈತನ ಮೇಲೆ ಕಣ್ಣಿಟ್ಟಿದ್ದೆವು. ಈಗ ಬಾಂಬ್‌ನೊಂದಿಗೇ ಹಿಡಿದಿದ್ದೇವೆ. ಈಗಿನ ಬಾಂಬ್‌ ದಾಳಿ ಯಶಸ್ವಿಯಾದ ಮೇಲೆ ಆತ್ಮಾಹುತಿ ದಾಳಿ ನಡೆಸಲು ಈತ ನಿರ್ಧರಿಸಿದ್ದ’ ಎಂದು ವಿಶೇಷ ಘಟಕದ ಡಿಸಿಪಿ ಪಿ.ಎಸ್‌.ಕುಶ್ವಾಹ ತಿಳಿಸಿದ್ದಾರೆ.

ಮೊದಲಿಗೆ ಐಸಿಸ್‌ನ ಯೂಸುಫ್‌ ಅಲ್‌ ಹಿಂದಿ ಎಂಬಾತ ಈತನಿಗೆ ಆದೇಶಗಳನ್ನು ನೀಡುತ್ತಿದ್ದ. ನಂತರ ಆತ ಸಿರಿಯಾದಲ್ಲಿ ಹತ್ಯೆಯಾದ. ನಂತರ ಅಬು ಹುಜೇಫಾ ಎಂಬ ಪಾಕಿಸ್ತಾನಿ ಈತನಿಗೆ ಆದೇಶಗಳನ್ನು ನೀಡುತ್ತಿದ್ದ. ಅವನು ಆಷ್ಘಾನಿಸ್ತಾನದಲ್ಲಿ ಡ್ರೋನ್‌ ದಾಳಿಯಲ್ಲಿ ಹತ್ಯೆಯಾದ. ನಂತರ ಈತನನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ‘ಒಂಟಿ ತೋಳ’ದ ದಾಳಿ ನಡೆಸುವಂತೆ ಸೂಚಿಸಿದ್ದ. ಅದೇ ಉದ್ದೇಶಕ್ಕಾಗಿ ಈತ ದೆಹಲಿಗೆ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ನಂತರ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಕೃತ್ಯ ಬಿಡು ಎಂದಿದ್ದಕ್ಕೆ ಪತ್ನಿ ಬೆದರಿಸಿದ್ದ ಉಗ್ರ:

ತನ್ನ ಪತಿ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವ ಯೂಸುಫ್‌ನ ಪತ್ನಿಗೆ ಗೊತ್ತಿತ್ತು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಸೋಮವಾರ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅಬು ಪತ್ನಿ, ಹಿಂಸಾ ಕೃತ್ಯದಲ್ಲಿ ಭಾಗಿಯಾಗುವುದನ್ನು ಬಿಟ್ಟುಬಿಡು ಎಂದು ವಿನಂತಿಸಿಕೊಂಡಿದ್ದೆ. ಆದರೆ, ಆತ ನನ್ನ ಮಾತು ಕೇಳದೆ ಆ ವಿಚಾರದಲ್ಲಿ ತಾನು ತಲೆ ಹಾಕದಂತೆ ಎಚ್ಚರಿಕೆ ನೀಡಿದ್ದ. ಇದೀಗ ಪೊಲೀಸರು ಪತಿಯನ್ನು ಕರೆದೊಯ್ದಿದ್ದಾರೆ. ನನ್ನ ಮಕ್ಕಳನ್ನು ಕಟ್ಟಿಕೊಂಡು ಇದೀಗ ನಾನು ಏನು ಮಾಡಲಿ ಎಂದು ಆಕೆ ಗೋಳು ತೋಡಿಕೊಂಡಿದ್ದಾಳೆ.

ಉಗ್ರನ ಮನೆಯಲ್ಲಿ ಭಾರೀ ಸ್ಫೋಟಕ ಪತ್ತೆ:

ಉಗ್ರನ ಉತ್ತರಪ್ರದೇಶದ ಮನೆಯಲ್ಲಿ ದೆಹಲಿ ಪೊಲೀಸರು ಶೋಧ ನಡೆಸಿ ಅಪಾರ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆತನ ಮನೆಯಲ್ಲಿ 2 ಆತ್ಮಾಹುತಿ ಜಾಕೆಟ್‌, ಚರ್ಮದ ಬೆಲ್ಟ್‌, 8-9 ಕೇಜಿ ಸ್ಫೋಟಕ, ಸಿಲಿಂಡರ್‌ ರೀತಿಯ 3 ಲೋಹದ ಡಬ್ಬಿ , ದಾಳಿಗೆ ಅಗತ್ಯವಿರುವ ಬಾಕ್ಸ್‌, ಐಸಿಸ್‌ ಬಾವುಟ, ವಿವಿಧ ರೀತಿಯ 30 ಲೋಹದ ಬೇರಿಂಗ್‌, ಬಾಲ್‌ಬೇರಿಂಗ್‌ ಹೊಂದಿರುವ 12 ಸಣ್ಣ ಬಾಕ್ಸ್‌ಗಳು, 3 ಲೀಥಿಯಂ ಬ್ಯಾಟರಿ, ಹ್ಯಾಂಪರ್‌ ಮೀಟರ್‌, ವಿದ್ಯುತ್‌ ಪ್ರವಹಿಸುವ ವೈರ್‌ನ ತುದಿಗಳಿಗೆ ಜೋಡಣೆ ಮಾಡಿರುವ 2 ಕಬ್ಬಿಣದ ಬ್ಲೇಡ್‌, ವೈರ್‌ ಕಟ್ಟರ್‌, 2 ಮೊಬೈಲ್‌ ಚಾರ್ಜರ್‌, ವಿದ್ಯುತ್‌ ಕಾಂತೀಯ ವೈರ್‌ಗಳ ಜೊತೆ ಜೋಡಿಸಲಾದ ಟೇಬಲ್‌ ಅಲಾರಂ ವಾಚ್‌ಗಳು, 1 ಕಪ್ಪು ಬಣ್ಣದ ಟೇಪ್‌ ಹಾಗೂ 2 ಪ್ರೆಷರ್‌ ಕುಕರ್‌ಗಳಲ್ಲಿ ಅಡಗಿಸಿಡಲಾಗಿದ್ದ 15 ಕೇಜಿಯ 2 ಸುಧಾರಿತ ಸ್ಫೋಟಕ ಸಾಧನ(ಐಇಡಿಗಳು)ಗಳನ್ನು ಸಹ ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

click me!