ಶಿಕ್ಷೆಯಿಂದ ಪಾರಾಗಲು ಪ್ರಶಾಂತ್‌ ಭೂಷಣ್‌ಗೆ ಸುಪ್ರೀಂನಿಂದ ಮತ್ತೊಂದು ಚಾನ್ಸ್!

By Suvarna NewsFirst Published Aug 21, 2020, 9:10 AM IST
Highlights

ಶಿಕ್ಷೆಯಿಂದ ಪಾರಾಗಲು ಪ್ರಶಾಂತ್‌ ಭೂಷಣ್‌ಗೆ ಸುಪ್ರೀಂನಿಂದ 1 ಚಾನ್ಸ್‌| ಕ್ಷಮಾಪಣೆ ಕೇಳಲ್ಲ ಎಂಬ ಹೇಳಿಕೆ ಮರುಪರಿಶೀಲಿಸಿ| 2 ದಿನ ಸಮಯಾವಕಾಶ ನೀಡಿದ ನ್ಯಾಯಾಲಯ| ಶಿಕ್ಷೆಯನ್ನು ಬೇರೆ ಪೀಠ ನಿಗದಿ ಮಾಡಲಿ ಎಂದ ಭೂಷಣ್‌!

ನವದೆಹಲಿ(ಆ.21): ಸುಪ್ರೀಂಕೋರ್ಟ್‌ ಹಾಗೂ ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಆಕ್ಷೇಪಾರ್ಹ ಟ್ವೀಟ್‌ ಮಾಡಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ವಕೀಲ ಮತ್ತು ಹೋರಾಟಗಾರ ಪ್ರಶಾಂತ್‌ ಭೂಷಣ್‌ಗೆ ಶಿಕ್ಷೆಯಿಂದ ಪಾರಾಗಲು ಸರ್ವೋಚ್ಚ ನ್ಯಾಯಾಲಯ ಒಂದು ಅವಕಾಶ ನೀಡಿದೆ. ನಿಂದನಾತ್ಮಕ ಟ್ವೀಟ್‌ಗಳ ಕುರಿತು ಕ್ಷಮೆ ಕೇಳುವುದೇ ಇಲ್ಲ ಎಂದು ಉದ್ಧಟತನದ ಹೇಳಿಕೆ ನೀಡಿದ್ದ ಭೂಷಣ್‌ ಅವರಿಗೆ ಆ ವಿಚಾರವಾಗಿ ಮರುಪರಿಶೀಲಿಸಲು 2 ದಿನಗಳ ಸಮಯಾವಕಾಶ ನೀಡಿದೆ.

ನ್ಯಾಯಾಲಯ ನೀಡಿರುವ ಸಲಹೆ ಕುರಿತು ವಕೀಲರ ಜತೆ ಚರ್ಚಿಸುತ್ತೇನೆ ಎಂದು ಪ್ರಶಾಂತ್‌ ಭೂಷಣ್‌ ಅವರು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ತಿಳಿಸಿದ್ದಾರೆ.

ಭೂಷಣ್‌ ಅವರಿಗೆ ಶಿಕ್ಷೆ ವಿಧಿಸಲು ಹೋಗಬೇಡಿ. ಈಗಾಗಲೇ ಅವರು ದೋಷಿ ಎಂದು ತೀರ್ಪು ನೀಡಿಯಾಗಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಇದೇ ವೇಳೆ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಭೂಷಣ್‌ ಅವರು ತಾವು ಮಾಡಿದ್ದ ಟ್ವೀಟ್‌ಗಳ ಕುರಿತು ಕ್ಷಮಾಪಣೆ ಕೇಳುವುದಿಲ್ಲ ಎಂಬ ನಿಲುವನ್ನು ಮರುಪರಿಶೀಲಿಸದೇ ಇದ್ದರೆ ಈ ಕೋರಿಕೆಯನ್ನು ಪರಿಗಣಿಸಲು ಆಗುವುದೇ ಇಲ್ಲ. ತಪ್ಪನ್ನು ಒಪ್ಪಿಕೊಂಡರೆ ಉದಾರತೆ ತೋರಬಹುದು ಎಂದು ಹೇಳಿತು. ವಿಚಾರಣೆಯನ್ನು ಆ.24ಕ್ಕೆ ಮುಂದೂಡಿತು.

ಇದೇ ವೇಳೆ, ಶಿಕ್ಷೆ ನಿಗದಿ ಕುರಿತ ವಿಚಾರಣೆಯನ್ನು ಬೇರೊಂದು ಪೀಠಕ್ಕೆ ಹಸ್ತಾಂತರಿಸಿ ಎಂದು ಭೂಷಣ್‌ ಪರ ವಕೀಲರು ಮನವಿ ಮಾಡಿದರು. ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಿದ್ದೇವೆ. ಅಲ್ಲಿವರೆಗೂ ಶಿಕ್ಷೆ ನಿಗದಿ ಮಾಡಬೇಡಿ. ಅಷ್ಟರಲ್ಲಿ ಆಕಾಶವೇನು ಬಿದ್ದು ಹೋಗುವುದಿಲ್ಲ ಎಂದು ಹೇಳಿದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಪೀಠ, ಎಂದಾದರೂ ಈ ರೀತಿ ಆಗಿದೆಯೇ? ಮಾಡಬಾರದ್ದನ್ನು ಮಾಡಲು ಹೇಳುತ್ತಿದ್ದೀರಿ ಎಂದು ಕಿಡಿಕಾರಿತು.

ಏನಿದು ಕೇಸ್‌?:

ಕಳೆದ 6 ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಹಾಳು ಮಾಡುವುದರಲ್ಲಿ ಹಿಂದಿನ ನಾಲ್ಕು ಸಿಜೆಗಳು ಪಾತ್ರ ವಹಿಸಿದ್ದಾರೆ ಎಂದು ಭೂಷಣ್‌ ಟ್ವೀಟ್‌ ಮಾಡಿದ್ದರು. ಅಲ್ಲದೆ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ಅವರು ಹಾರ್ಲೆ ಡೇವಿಡ್‌ಸನ್‌ ಬೈಕ್‌ ಅನ್ನು ಹೆಲ್ಮೆಟ್‌, ಮಾಸ್ಕ್‌ ಇಲ್ಲದೆ ಓಡಿಸುತ್ತಿದ್ದನ್ನು ಟೀಕಿಸಿದ್ದರು. ಈ ಸಂಬಂಧ ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸಿದ್ದ ಸುಪ್ರೀಂಕೋರ್ಟ್‌, ಆ.14ರಂದು ಭೂಷಣ್‌ ದೋಷಿ ಎಂದು ತೀರ್ಪು ನೀಡಿತ್ತು. ಭೂಷಣ್‌ ಅವರಿಗೆ ಗರಿಷ್ಠ 6 ತಿಂಗಳು ಸಜೆ ಅಥವಾ 2 ಸಾವಿರ ರು. ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶ ನ್ಯಾಯಾಲಯಕ್ಕಿದೆ.

click me!