ಟೀವಿ ಚಾನಲ್‌ಗಳಲ್ಲಿ ದ್ವೇಷ ಭಾಷಣ: ಸುಪ್ರೀಂಕೋರ್ಟ್‌ ಕಿಡಿ

By Kannadaprabha NewsFirst Published Sep 22, 2022, 5:00 AM IST
Highlights

ಕ್ರಮ ಕೈಗೊಳ್ಳಿ, ಕೇಂದ್ರ ಸರ್ಕಾರ ಏಕೆ ಮೂಕ ಪ್ರೇಕ್ಷಕನಂತಿದೆ?, ದ್ವೇಷದ ಚರ್ಚೆಗೆ ತಡೆ ಆ್ಯಂಕರ್‌ಗಳ ಕರ್ತವ್ಯ

ನವದೆಹಲಿ(ಸೆ.22):  ಸುದ್ದಿ ವಾಹಿನಿಗಳಲ್ಲಿ ದ್ವೇಷಪೂರಿತ ಚರ್ಚೆಗಳು ಹೆಚ್ಚಾಗುತ್ತಿವೆ. ಇದನ್ನು ನಿಯಂತ್ರಿಸುವಲ್ಲಿ ಆ್ಯಂಕರ್‌ಗಳ ಪಾತ್ರ ಬಹಳ ಮುಖ್ಯವಾದುದು.ಇಂತಹ ದ್ವೇಷಭಾಷಣ ನಿಯಂತ್ರಿಸಲು ಕ್ರಮ ಕೈಗೊಳ್ಳುವುದರ ಬದಲು ಕೇಂದ್ರ ಸರ್ಕಾರ ಕೂಡಾ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಸುಪ್ರೀಂಕೋರ್ಟ್‌ ಕಿಡಿಕಾರಿದೆ. ಅಲ್ಲದೆ ಈ ಬಗ್ಗೆ ಕಾನೂನು ಆಯೋಗ ಮಾಡಿರುವ ಶಿಫಾರಸಿನ ಅನ್ವಯ ಯಾವುದೇ ಕಾನೂನು ಜಾರಿಯ ಉದ್ದೇಶವನ್ನು ಸರ್ಕಾರ ಹೊಂದಿದೆಯೇ ಎಂದು ಪ್ರಶ್ನಿಸಿರುವ ನ್ಯಾಯಾಲಯ, ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಿದೆ.

ಸುದ್ದಿ ವಾಹಿನಿಗಳಲ್ಲಿನ ದ್ವೇಷದ ಭಾಷಣಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿರುವ ಹಲವು ಅರ್ಜಿಗಳನ್ನು ಒಗ್ಗೂಡಿಸಿ ಬುಧವಾರ ವಿಚಾರಣೆ ನಡೆಸಿದ ನ್ಯಾ. ಕೆ.ಎಂ.ಜೋಸೆಫ್‌ ಮತ್ತು ನ್ಯಾ. ಹೃಷಿಕೇಶ್‌ ರಾಯ್‌ ಅವರಿದ್ದ ಪೀಠ, ‘ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಬಹುತೇಕ ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಹೀಗಾಗಿ ದೃಶ್ಯ ಮಾಧ್ಯಮದಲ್ಲಿ ಆ್ಯಂಕರ್‌ಗಳ ಪಾತ್ರ ಅತ್ಯಂತ ಮಹತ್ವದ್ದು. ಟೀವಿ ಚರ್ಚೆಗಳ ವೇಳೆ ದ್ವೇಷದ ಭಾಷಣಗಳು ಆಗದಂತೆ ನೋಡಿಕೊಳ್ಳುವ ಹೊಣೆ ಆ್ಯಂಕರ್‌ಗಳದ್ದಾಗಿರುತ್ತದೆ’ ಎಂದು ಹೇಳಿತು.

Hijab Case: ಹಿಂದುಗಳು ಬಂದು ಕೋರ್ಟ್‌, ಇಂಡಿಯಾಗೇಟ್‌ನಲ್ಲಿ ಹೋಮ ಮಾಡ್ತೀನಿ ಅಂದ್ರೆ ಏನಾಗಬಹುದು?

‘ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಇರುವುದು ನಿಜ. ಆದರೆ ನಮ್ಮಲ್ಲಿ ಅಮೆರಿಕದ ಮಟ್ಟಿಗಿನ ಸ್ವಾತಂತ್ರ್ಯ ಇಲ್ಲ. ಎಲ್ಲಿ ಗೆರೆ ಎಳೆಯಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ದ್ವೇಷದ ಭಾಷಣಗಳು ಹಲವು ಮಾದರಿಯದ್ದಾಗಿವೆ. ಅವು ಯಾರನ್ನೋ ಕೊಲ್ಲುವ ರೀತಿಯಲ್ಲಿ ಇರುತ್ತವೆ. ಅದನ್ನು ನಾವು ಹಲವು ರೀತಿಯಲ್ಲಿ ಮಾಡಬಹುದು, ಅಂದರೆ ನಿಧಾನವಾಗಿ ಕೊಲ್ಲಬಹುದು ಅಥವಾ ಇನ್ನೊಂದು ರೀತಿಯಲ್ಲಿ. ಅವರು ಕೆಲವೊಂದು ಅಂಶಗಳನ್ನು ಮುಂದಿಟ್ಟುಕೊಂಡು ನಮ್ಮನ್ನು ಅದರ ಭಾಗ ಮಾಡಿಬಿಡುತ್ತಾರೆ. ಹೀಗಾಗಿಯೇ ಇಂಥ ದ್ವೇಷದ ಭಾಷಣಗಳು ಜನರ ಗಮನ ಸೆಳೆಯುತ್ತವೆ. ಇವುಗಳನ್ನು ನಿಗ್ರಹಿಸಲು ಸಾಂಸ್ಥಿಕ ವ್ಯವಸ್ಥೆಯ ಅಗತ್ಯವಿದೆ’ ಎಂದು ನ್ಯಾಯಪೀಠ ಹೇಳಿತು.

‘ಆದರೆ ಇಷ್ಟೆಲ್ಲಾ ಆಗುತ್ತಿದ್ದರೂ ಸರ್ಕಾರ ಮೂಕಪ್ರೇಕ್ಷಕನಂತೆ ಸುಮ್ಮನೆ ಕೂರುವುದು ಸರಿಯಲ್ಲ. ಇಂಥ ದ್ವೇಷದ ಭಾಷಣ ತಡೆಯಲು ಏನು ಮಾಡಬಹುದು ಎಂದು ಈಗಾಗಲೇ ಕಾನೂನು ಆಯೋಗ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ. ಈ ಬಗ್ಗೆ ಸರ್ಕಾರದ ಅಭಿಪ್ರಾಯ ಏನು ಎಂಬುದನ್ನು ನಮಗೆ ತಿಳಿಸಿ. ನಾವು ಅದನ್ನು ಮುಂದಿನ ವಿಚಾರಣೆ ವೇಳೆ ಪರಿಶೀಲಿಸುತ್ತೇವೆ’ ಎಂದು ಹೇಳಿದ ನ್ಯಾಯಪೀಠ ವಿಚಾರಣೆಯನ್ನು ನ.23ಕ್ಕೆ ಮುಂದೂಡಿತು.

ಕೋರ್ಟ್‌ ಹೇಳಿದ್ದೇನು?

- ಮುಖ್ಯವಾಹಿನಿ ಸುದ್ದಿ ವಾಹಿನಿಗಳು ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲ
- ಅಲ್ಲಿ ದ್ವೇಷಭಾಷಣ ನಡೆಯದಂತೆ ನೋಡಿಕೊಳ್ಳುವ ಹೊಣೆ ಆ್ಯಂಕರ್‌ಗಳದು
- ಯಾರಾದರೂ ದ್ವೇಷ ಭಾಷಣ ಆರಂಭಿಸಿದರೆ ತಕ್ಷಣ ಅದನ್ನು ತಡೆಯಬೇಕು
- ನಮ್ಮಲ್ಲಿ ಪತ್ರಿಕಾ ಸ್ವಾತಂತ್ರ್ಯ ಇದೆ, ಆದರೆ ಅಮೆರಿದಲ್ಲಿರುವಷ್ಟುಇಲ್ಲಿಲ್ಲ
- ದ್ವೇಷಭಾಷಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಉದ್ದೇಶ ಸರ್ಕಾರಕ್ಕಿದೆಯೇ?
 

click me!