ಅಹಮದಾಬಾದ್ ಏರ್ ಇಂಡಿಯಾ ದುರಂತ, ಪೈಲೆಟ್‌ಗಳ ದೋಷವೆಂಬ ವರದಿಯನ್ನು ಖಂಡಿಸಿದ ಸುಪ್ರೀಂ, ಸ್ವತಂತ್ರ ತನಿಖೆಗೆ ನೋಟಿಸ್

Published : Sep 22, 2025, 07:59 PM IST
plane Crash

ಸಾರಾಂಶ

ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದ ತನಿಖೆ ಕುರಿತು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ಡಿಜಿಸಿಎಗೆ ನೋಟಿಸ್ ಜಾರಿ ಮಾಡಿದೆ. ಪೈಲಟ್‌ಗಳ ದೋಷವೇ ಕಾರಣ ಎಂದು ಹೇಳಿದ್ದ AAIBಯ ಪ್ರಾಥಮಿಕ ವರದಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ,  ನ್ಯಾಯಯುತ ತನಿಖೆಯ ಅಗತ್ಯವನ್ನು ಒತ್ತಿಹೇಳಿದೆ.

ನವದೆಹಲಿ: ಈ ವರ್ಷದ ಜೂನ್ 12, 2025 ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ ಬೋಯಿಂಗ್ ಡ್ರೀಮ್‌ಲೈನರ್ (AI171) ದುರಂತದಲ್ಲಿ 260 ಮಂದಿ ಪ್ರಾಣ ಕಳೆದುಕೊಂಡ ಘಟನೆಗೆ ಸಂಬಂಧಿಸಿದಂತೆ ಸ್ವತಂತ್ರ, ನ್ಯಾಯಯುತ ಮತ್ತು ತ್ವರಿತ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಒಳಗೊಂಡ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ (DGCA) ನೋಟಿಸ್ ಜಾರಿ ಮಾಡಿದೆ. ಜೊತೆಗೆ AAIB ಪ್ರಾಥಮಿಕ ವರದಿಯ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಗಂಭೀರ ಕಳವಳ ವ್ಯಕ್ತಪಡಿಸಿದೆ. ಏರ್‌ ಇಂಡಿಯಾ ದುರಂತಕ್ಕೆ ಫೈಲೆಟ್‌ಗಳ ದೋಷ ಕಾರಣ ಎಂಬ ವರದಿಯನ್ನು ಖಂಡಿಸಿದ್ದು, ಈ ರೀತಿಯಾಗಿ ದೂಷಣೆ ಮಾಡುವುದು ದುರದೃಷ್ಟಕರ ಎಂದಿದೆ.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರ ಪೀಠ, ಅಪಘಾತ ತನಿಖಾ ಬ್ಯೂರೋ (AAIB) ಸಲ್ಲಿಸಿದ ಪ್ರಾಥಮಿಕ ವರದಿ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿ ಗರಂ ಆಯ್ತು. ವರದಿಯಲ್ಲಿರುವ ಕೆಲವು ಅಂಶಗಳನ್ನು ನ್ಯಾಯಾಲಯವು "ಬೇಜವಾಬ್ದಾರಿ" ಎಂದು ಛೀಮಾರಿ ಹಾಕಿತು. ಮತ್ತು ಪೀಠವು ಕೇಂದ್ರ ಸರ್ಕಾರ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ (DGCA) ನೋಟಿಸ್ ಜಾರಿ ಮಾಡಿತು.

ಪೈಲಟ್ ದೋಷದ ಆರೋಪ ಮತ್ತು ವರದಿಯ ವಿವಾದ

ಜುಲೈ 12ರಂದು ಸಲ್ಲಿಸಲಾದ ಪ್ರಾಥಮಿಕ ವರದಿಯ ಪ್ರಕಾರ, ಪೈಲಟ್‌ಗಳು ಇಂಧನ ಕಟ್‌ಆಫ್ ಸ್ವಿಚ್‌ಗಳನ್ನು ತಪ್ಪಾಗಿ ನಿರ್ವಹಿಸಿದ್ದು ಅಪಘಾತಕ್ಕೆ ಕಾರಣವಾಯಿತು ಎಂದು ಸೂಚಿಸಲಾಗಿದೆ. ಇದರಿಂದ ಪೈಲಟ್ ದೋಷವೇ ಪ್ರಮುಖ ಕಾರಣ ಎಂಬ ನಿರ್ಣಯಕ್ಕೆ ಬರಲಾಯ್ತು. ಆದರೆ, ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್ ಎಂಬ ವಿಮಾನಯಾನ ಸುರಕ್ಷತಾ ಎನ್‌ಜಿಒ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಾದಿಸಿ, ತನಿಖಾ ಸಮಿತಿಯ ಮೂವರು ಸದಸ್ಯರು ನಾಗರಿಕ ವಿಮಾನಯಾನ ನಿಯಂತ್ರಕರಿಂದ ಬಂದಿರುವುದು ಹಿತಾಸಕ್ತಿ ಸಂಘರ್ಷ (conflict of interest) ಉಂಟು ಮಾಡುತ್ತದೆ ಎಂದು ವಾದಿಸಿದರು.

ವಕೀಲ ಪ್ರಶಾಂತ್ ಭೂಷಣ್ ಅವರು, ವಿಮಾನ ದತ್ತಾಂಶ ರೆಕಾರ್ಡರ್ (FDR), ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಸಂಪೂರ್ಣ ಪ್ರತಿಲಿಪಿ, ಹಾಗೂ ಎಲೆಕ್ಟ್ರಾನಿಕ್ ಏರ್‌ಕ್ರಾಫ್ಟ್ ಫಾಲ್ಟ್ ರೆಕಾರ್ಡಿಂಗ್ (EAFR) ಮಾಹಿತಿಯನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.

ಪಾರದರ್ಶಕತೆ ಕೊರತೆ ಎಂಬ ಆರೋಪ

  • ಅರ್ಜಿಯಲ್ಲಿ AAIB ವರದಿ “ಅಪೂರ್ಣ, ಆಯ್ದ ಮತ್ತು ಪಾರದರ್ಶಕತೆಯ ಕೊರತೆ ಹೊಂದಿದೆ” ಎಂದು ಗಂಭೀರ ಆರೋಪ ಮಾಡಲಾಗಿದೆ.
  • ವರದಿಯಲ್ಲಿ ಸಂಪೂರ್ಣ ಡೇಟಾವನ್ನು ಸೇರಿಸದೆ, ಕೇವಲ ಭಾಗಶಃ ಮಾಹಿತಿ ನೀಡಲಾಗಿದೆ. ಉದಾಹರಣೆಗೆ:
  • ಟೈಮ್‌ಸ್ಟ್ಯಾಂಪ್‌ಗಳಿಲ್ಲದ ಕಾಕ್‌ಪಿಟ್ ಸಂಭಾಷಣೆ
  • ಪರಿಶೀಲಿಸದ ಸಾರಾಂಶ ಉಲ್ಲೇಖಗಳು

ದೃಢೀಕರಣವಿಲ್ಲದ ದಾಖಲೆಗಳು

ಇಂತಹ ಆಯ್ದ ಮಾಹಿತಿ ಬಿಡುಗಡೆ, ಸಾರ್ವಜನಿಕರಲ್ಲಿ ಪೈಲಟ್ ದೋಷವೇ ಕಾರಣ ಎಂಬ ತಪ್ಪು ಮನೋಭಾವವನ್ನು ಸೃಷ್ಟಿಸುತ್ತದೆ. ಇದರಿಂದ ವಿಮಾನ ತಯಾರಕರು ಮತ್ತು ಏರ್ ಇಂಡಿಯಾ ಸಂಸ್ಥೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಪ್ರತಿಷ್ಠಾನ ವಾದಿಸಿದೆ.

ಸುಪ್ರೀಂ ಕೋರ್ಟ್ ಎಚ್ಚರಿಕೆ

ನ್ಯಾಯಮೂರ್ತಿಗಳ ಪೀಠವು, “ಪೂರ್ಣ ತನಿಖೆಯ ಮೊದಲು ಭಾಗಶಃ ಮಾಹಿತಿ ಹಂಚಿಕೊಳ್ಳುವುದರಿಂದ ಸಾರ್ವಜನಿಕ ಅಭಿಪ್ರಾಯ ದಾರಿ ತಪ್ಪಬಹುದು” ಎಂದು ಎಚ್ಚರಿಸಿದೆ. ವಿಮಾನಯಾನ ಅಪಘಾತ ತನಿಖೆಗಳು ಪಾರದರ್ಶಕತೆ, ನಿಷ್ಪಕ್ಷಪಾತ ಮತ್ತು ಸಾರ್ವಜನಿಕ ಹೊಣೆಗಾರಿಕೆ ಆಧಾರವಾಗಿರಬೇಕು ಎಂಬುದನ್ನು ತಿಳಿ ಹೇಳಿದೆ. ಆದರೆ, ಗೌಪ್ಯತೆ ಮತ್ತು ಸುರಕ್ಷತೆ ಕಾರಣಕ್ಕಾಗಿ ಎಲ್ಲ ಮಾಹಿತಿಯನ್ನು ತಕ್ಷಣ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬುದನ್ನೂ ಕೋರ್ಟ್ ತಿಳಿಸಿದೆ. ಅಂತಿಮ ತನಿಖಾ ವರದಿ ಬರುವವರೆಗೆ, ಪ್ರತಿಸ್ಪರ್ಧಿ ವಿಮಾನಯಾನ ಸಂಸ್ಥೆಗಳು ಅಥವಾ ಇತರರು ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಎಚ್ಚರಿಕೆ ಕೂಡ ನೀಡಿದೆ.

ಕೇಂದ್ರ ಸರ್ಕಾರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಹಾಗೂ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರತಿವಾದಿಗಳಾಗಿ ನೋಟಿಸ್ ಸ್ವೀಕರಿಸಿವೆ. ಸ್ವತಂತ್ರ ಮತ್ತು ತಜ್ಞ ಸಂಸ್ಥೆಯಿಂದ ನಿಷ್ಪಕ್ಷಪಾತ ತನಿಖೆ ಖಚಿತಪಡಿಸಿಕೊಳ್ಳಬೇಕು ಎಂಬುದೇ ಸುಪ್ರೀಂ ಕೋರ್ಟ್ ಆದೇಶದ ಸಾರವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್