ಖಾಸಗಿ ಕಂಪನಿಗಳು ಇವಿಎಂ ರೆಡಿ ಮಾಡಿದ್ರೆ ನಿಮಗೆ ಖುಷಿನಾ? ವಕೀಲ ಪ್ರಶಾಂತ್ ಭೂಷಣ್‌ಗೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್‌!

By Santosh NaikFirst Published Apr 16, 2024, 7:50 PM IST
Highlights

supreme court on evm machine ಸರ್ಕಾರಿ ಕಂಪನಿಗಳು ತಯಾರಿಸುವ ಇವಿಎಂ ಮೇಲೆ ನಿಮಗೆ ನಂಬಿಕೆ ಇಲ್ಲ. ಖಾಸಗಿ ಕಂಪನಿಗಳು ಇವಿಎಂ ರೆಡಿ ಮಾಡಿದ್ರೆ ನಿಮಗೆ ಖುಷಿನಾ? ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ವಕೀಲ ಪ್ರಶಾಂತ್‌ ಭೂಷಣ್‌ಗೆ ಪ್ರಶ್ನೆ ಮಾಡಿದೆ.

ನವದೆಹಲಿ (ಏ.16): ವೋಟರ್-ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ)ಯಿಂದ ಹೊರಬರುವ ಎಲ್ಲಾ ಸ್ಲಿಪ್‌ಗಳನ್ನು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಮೂಲಕ ಚಲಾಯಿಸಿದ ಮತಗಳೊಂದಿಗೆ ಮ್ಯಾಚ್‌ ಮಾಡುವಂತೆ ಒತ್ತಾಯಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು. ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಮುಂದಿನ ವಿಚಾರಣೆಯನ್ನು ಏಪ್ರಿಲ್ 18 ಕ್ಕೆ ಮುಂದೂಡಿದೆ. ಲೋಕಸಭೆ ಚುನಾವಣೆ 2024 ರ ಮೊದಲ ಹಂತದ ಮತದಾನವನ್ನು ಏಪ್ರಿಲ್ 19 ರಂದು ನಿಗದಿಪಡಿಸಲಾಗಿದೆ. ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ಅವರು ಇವಿಎಂ ಮತಗಳು ಮತ್ತು ವಿವಿಪ್ಯಾಟ್ ಸ್ಲಿಪ್‌ಗಳನ್ನು ಶೇಕಡಾ 100 ರಷ್ಟು ಮ್ಯಾಚ್‌ ಮಾಡಬೇಕೆಂದು ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಎಡಿಆರ್ (ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ತಮ್ಮ ವಾದದ ಸಮಯದಲ್ಲಿ ಹೆಚ್ಚಿನ ಮತದಾರರು ಇವಿಎಂಗಳನ್ನು ನಂಬೋದೇ ಇಲ್ಲ ಎಂದು ಹೇಳಿದರು. ಇದಕ್ಕೆ ಅಡ್ಡಿಪಡಿಸಿದ ನ್ಯಾಯಮೂರ್ತಿ ದೀಪಂಕರ್‌ ದತ್ತಾ, ಹೆಚ್ಚಿನ ಮತದಾರರು ಇವಿಎಂಗಳನ್ನು ನಂಬೋದಿಲ್ಲ ಎಂದು ನೀವು ಹೇಳುತ್ತಿದ್ದೀರಿ. ನೀವು ಈ ಡೇಟಾವನ್ನು ಹೇಗೆ ಮತ್ತು ಎಲ್ಲಿ ಪಡೆದುಕೊಂಡಿದ್ದೀರಿ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್‌ ಭೂಷಣ್‌ ಈ ಬಗ್ಗೆ ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿ ನ್ಯಾಯಪೀಠ, ಖಾಸಗಿ ಸಮೀಕ್ಷೆಗಳನ್ನು ನಾವು ನಂಬೋದಿಲ್ಲ ಎಂದಿತು.

ಬ್ಯಾಲೆಟ್‌ ಪೇಪರ್‌ ವೋಟಿಂಗ್‌ ವೇಳೆ ಏನಾಗಿತ್ತು ಅನ್ನೋದನ್ನ ನಾವು ಮರೆತಿಲ್ಲ: ಇವಿಎಂ ಮತದಾನಕ್ಕೆ ಆಯ್ಕೆಯಾಗಿದ್ದ ಬಹುತೇಕ ಯುರೋಪಿಯನ್ ರಾಷ್ಟ್ರಗಳು ಬ್ಯಾಲೆಟ್ ಪೇಪರ್‌ಗೆ ಮರಳಿವೆ ಎಂದು ಪ್ರಶಾಂತ್ ಭೂಷಣ್ ವಾದ ಮಾಡಿದರು. ಈ ಕುರಿತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, 'ನಾವು ನಮ್ಮ ಜೀವನದ ಆರನೇ ದಶಕದಲ್ಲಿದ್ದೇವೆ ಮತ್ತು ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡುವಾಗ ಯಾವ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದು ತಿಳಿದಿದೆ. ನಿಮಗೆ ನೆನಪಿಲ್ಲದಿರಬಹುದು, ಆದರೆ ನಾವು ಮರೆತಿಲ್ಲ' ಎಂದು ಹೇಳುವ ಮೂಲಕ ಬ್ಯಾಲೆಟ್‌ ಪೇಪರ್‌ ಮತದಾನದ ವೇಳೆ ಆಗುತ್ತಿದ್ದ ಹಿಂಸಾಚಾರದ ಘಟನೆಗಳನ್ನು ನೆನಪಿಸಿದರು.

ಖಾಸಗಿ ಕಂಪನಿಗಳು ಇವಿಎಂ ತಯಾರಿಸಿದರೆ ನಿಮಗೆ ಖುಷಿಯೇ?: ಅರ್ಜಿದಾರರ ಪರ ಹಾಜರಾದ ವಕೀಲರು ಇವಿಎಂಗಳನ್ನು ಸರ್ಕಾರದ ನಿಯಂತ್ರಣದಲ್ಲಿರುವ ಸಾರ್ವಜನಿಕ ವಲಯದ ಘಟಕಗಳ ಕಂಪನಿಗಳು ತಯಾರಿಸುತ್ತವೆ ಎಂದು ಆರೋಪಿಸಿದರು. ಈ ಬಗ್ಗೆ ಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್‌, ಹಾಗಿದ್ದರೆ, ಖಾಸಗಿ ಕಂಪನಿಗಳು ಇವಿಎಂ ತಯಾರಿಸಿದರೆ ನೀವು ಸಂತೋಷಪಡುತ್ತೀರಾ? ಎಂದು ಕೇಳಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಂಜಯ್ ಹೆಗ್ಡೆ, ಇವಿಎಂಗಳಲ್ಲಿ ದಾಖಲಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್‌ಗಳೊಂದಿಗೆ ಶೇ 100 ರಷ್ಟು ತಾಳೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದರು. ಈ ಕುರಿತು ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿ, 60 ಕೋಟಿ ವಿವಿ ಪ್ಯಾಟ್‌ ಸ್ಲಿಪ್‌ಗಳನ್ನು ಎಣಿಕೆ ಮಾಡಬೇಕು ಎಂದು ಹೇಳುತ್ತೀರಾ? ಎಂದು ಕೇಳಿದರು.

ಈ ವೇಳೆ ಚುನಾವಣಾ ಆಯೋಗದ ಪರ ವಕೀಲ ಗೋಪಾಲ್‌ ಶಂಕರ್‌ ನಾರಾಯಣ್,‌  ಎಲ್ಲಾ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಸಲು ಕನಿಷ್ಠ 12 ದಿನಗಳು ಬೇಕು ಎಂದು ಚುನಾವಣಾ ಆಯೋಗ ಹೇಳುತ್ತದೆ ಎಂದರು. ಇದೇ ವೇಳೆ ಮತದಾನಕ್ಕೆ ಬಾರ್‌ಕೋಡ್‌ಗಳ ಬಳಕೆಯನ್ನೂ ವಕೀಲರೊಬ್ಬರು ಸೂಚಿಸಿದರು. ಅದಕ್ಕೆ ಉತ್ತರಿಸಿದ ನ್ಯಾಯಪೀಠ,  'ನೀವು ಅಂಗಡಿಗೆ ಹೋದರೆ, ಅಲ್ಲಿ ಬಾರ್‌ಕೋಡ್ ಇರುತ್ತದೆ. ಪ್ರತಿ ಅಭ್ಯರ್ಥಿ ಅಥವಾ ಪಕ್ಷಕ್ಕೆ ಬಾರ್‌ಕೋಡ್ ನೀಡದ ಹೊರತು ಬಾರ್‌ಕೋಡ್‌ಗಳು ಮತ ಎಣಿಕೆಗೆ ಸಹಾಯ ಮಾಡುವುದಿಲ್ಲ ಮತ್ತು ಇದು ಕೂಡ ದೊಡ್ಡ ಸಮಸ್ಯೆಯಾಗಿದೆ. ಸಾಫ್ಟ್‌ವೇರ್ ಅಥವಾ ಯಂತ್ರಕ್ಕೆ ಅನಧಿಕೃತ ಬದಲಾವಣೆಗಳನ್ನು ಮಾಡಿದಾಗ ಮಾನವ ಹಸ್ತಕ್ಷೇಪದಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಇದನ್ನು ನಿಲ್ಲಿಸಲು ನೀವು ಯಾವುದೇ ಸಲಹೆಯನ್ನು ಹೊಂದಿದ್ದರೆ, ನೀವು ನಮಗೆ ತಿಳಿಸಬಹುದು ಎಂದು ಹೇಳಿತು.

ಇವಿಎಂ, ಇಡಿ, ಸಿಬಿಐ ಇಲ್ಲದೇ ಮೋದಿ ಚುನಾವಣೆ ಗೆಲ್ಲಲ್ಲ: ರಾಹುಲ್‌ ಗಾಂಧಿ

ಇವಿಎಂ ಹೇಗೆ ಕಾರ್ಯನಿರ್ವಹಿಸುತ್ತದೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಬೇಕು: ಪ್ರಶಾಂತ್ ಭೂಷಣ್ ವಾದದ ವೇಳೆ, 'ವಿವಿಪ್ಯಾಟ್‌ನಿಂದ ಮತದಾರರಿಗೆ ಚೀಟಿ ನೀಡುವುದು ಉತ್ತಮ ಮಾರ್ಗವಾಗಿದೆ ಮತ್ತು ಅದನ್ನು ನೋಡಿದ ನಂತರ ಅವರೇ ಅದನ್ನು ಪೆಟ್ಟಿಗೆಯಲ್ಲಿ ಇರಿಸಿ ನಂತರ ಅದನ್ನು ಇವಿಎಂಗೆ ಹೊಂದಿಸುತ್ತಾರೆ. ಪ್ರಸ್ತುತ ಚುನಾವಣಾ ಆಯೋಗವು ಪ್ರತಿ ವಿಧಾನಸಭೆಗೆ ಕೇವಲ 5 ವಿವಿಪ್ಯಾಟ್ ಯಂತ್ರಗಳನ್ನು ಎಣಿಸುತ್ತಿದ್ದರೆ, ಅಂತಹ 200 ಯಂತ್ರಗಳಿವೆ. ಇದು ಕೇವಲ 5 ಪ್ರತಿಶತವಾಗಿದೆ. ವಿವಿಪ್ಯಾಟ್‌ನಿಂದ ನೀಡಲಾದ ಚೀಟಿಯನ್ನು ತೆಗೆದುಕೊಂಡು ಮತಪೆಟ್ಟಿಗೆಯಲ್ಲಿ ಹಾಕಲು ಮತದಾರರಿಗೆ ಅವಕಾಶ ನೀಡಬಹುದು ಎಂದು ಹೇಳಿದರು. ಇದೇ ವೇಳೆ ಸುಪ್ರೀಂ ಕೋರ್ಟ್‌, ಇವಿಎಂ ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದರ ಬಗ್ಗೆ ಚುನಾವಣಾ ಆಯೋಗ ನಮಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಿಳಿಸಿದೆ.

Video 10.5 ಲಕ್ಷ ಮತಗಟ್ಟೆ, 55 ಲಕ್ಷ ಇವಿಎಂ: ಏ.19ರಿಂದ ಜೂ.1ರ ವರೆಗೆ ಲೋಕಸಭಾ ಚುನಾವಣೆ!

click me!