
ನವದೆಹಲಿ(ಮಾ.31): ಕರ್ನಾಟಕ ಕಬ್ಬಿಣದ ಗಣಿಗಳಿಂದ ಹೊರತೆಗೆದು ಬಳಸದೇ ಹಾಗೆಯೇ ಇಟ್ಟಿರುವ ಅದಿರನ್ನು ರಫ್ತು ಮಾಡುವ ಕುರಿತು ಏ.8ರೊಳಗೆ ಸ್ಪಷ್ಟನಿಲುವು ತಿಳಿಸುವಂತೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಬುಧವಾರ ಸೂಚಿಸಿದೆ. ಅಲ್ಲದೆ ಗಣಿಯಿಂದ ಹೊರತೆಗೆಯಲಾದ ಅದಿರಿನ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ವರದಿ ನೀಡುವಂತೆ ಕೇಂದ್ರೀಯ ಉನ್ನತಾಧಿಕಾರವುಳ್ಳ ಸಮಿತಿಗೆ ಸೂಚಿಸಿದೆ.
ಗಣಿಯಿಂದ ಹೊರತೆಗೆದ ಕಬ್ಬಿಣದ ಅದಿರನ್ನು ಹಾಗೆಯೇ ಇಟ್ಟುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ, ಒಂದೋ ಅದನ್ನು ಬಳಸಬೇಕು, ಇಲ್ಲವೇ ಮಾರಾಟ ಮಾಡಬೇಕು. ಹೀಗಾಗಿ ಮೊದಲು ಹೊರತೆಗೆಯಲಾದ ಅದಿರನ್ನು ಖಾಲಿ ಮಾಡೋಣ. ನಂತರ ಮುಂದಿನ ವಿಷಯ ಪರಿಶೀಲಿಸಬಹುದು. ಕಬ್ಬಿಣದ ಅದಿರು ಮಾರಾಟ ಮಾಡಿದರೆ ರಾಜ್ಯ ಸರ್ಕಾರ ಮತ್ತು ಅಭಿವೃದ್ಧಿ ನಿಧಿಗೆ ಒಂದಷ್ಟುಹಣವಾದರೂ ಬರುತ್ತದೆ ಎಂದು ನ್ಯಾ. ಕೃಷ್ಣ ಮುರಾರಿ ಮತ್ತು ನ್ಯಾ. ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.
ಈ ಹಿಂದೆ ಸುಪ್ರೀಂಕೋರ್ಟ್ ಕರ್ನಾಟಕದ ಗಣಿಗಳಿಂದ ಹೊರತೆಗೆದ ಕಬ್ಬಿಣದರ ಅದಿರನ್ನು ರಫ್ತು ಮಾಡಲು ಅವಕಾಶ ನಿರಾಕರಿಸಿತ್ತು. ಖಾಸಗಿ ಗಣಿಗಳ ಮಾಲೀಕರು ರಫ್ತಿನ ಮೇಲೆ ಹೇರಲಾಗಿದ್ದ ನಿಷೇಧ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುತ್ತಿದ್ದರೆ, ಸುಪ್ರೀಂಕೋರ್ಟ್‌ನಿಂದ ರಚಿತವಾಗಿರುವ ಕೇಂದ್ರೀಯ ಉನ್ನತಾಧಿಕಾರವುಳ್ಳ ಸಮಿತಿಯು, ಕರ್ನಾಟಕದಿಂದ ಯಾವುದೇ ಅದಿರು ರಫ್ತಿಗೆ ಅನುಮತಿ ನೀಡಬಾರದು ಎಂದು ಖಡಾಖಂಡಿತವಾಗಿ ತನ್ನ ಅಭಿಪ್ರಾಯ ತಿಳಿಸಿತ್ತು.
ಕರ್ನಾಟಕ ಕಬ್ಬಿಣದ ಗಣಿಗಳಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ 2009ಲ್ಲಿ ಸಮಾಜ ಪರಿವರ್ತನ ಸಮುದಾಯ ಎಂಬ ಎನ್‌ಜಿಒ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಅಂದಿನಿಂದಲೂ ಈ ವಿಷಯದಲ್ಲಿ ಹಲವು ತೀರ್ಪು ನೀಡಿಕೊಂಡೇ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ