
ಕೇಪ್ ಕೆನವರೆಲ್ (ಮಾ.19): 9 ತಿಂಗಳಿನಿಂದ ಬಾಹ್ಯಾಕಾಶದಲ್ಲೇ ಸಿಕ್ಕಿಬಿದಿದ್ದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಅಮೆರಿಕದ ಬುಚ್ ವಿಲ್ಮೋರ್ ಮಂಗಳವಾರ ಬೆಳಗ್ಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯ ಕಡೆಗೆ ಪ್ರಯಾಣ ಆರಂಭಿಸಿದ್ದಾರೆ. ಎಲ್ಲವೂ ಪೂರ್ವ ನಿಗದಿಯಂತೆ ನಡೆದರೆ ಬುಧವಾರ ಮುಂಜಾವಿನ 3.27 ಗಂಟೆ ವೇಳೆಗೆ ನಾಲ್ವರು ಬಾಹ್ಯಾಕಾಶ ಯಾನಿಗಳು ಅಮೆರಿಕದ ಫ್ಲೋರಿಡಾದಲ್ಲಿ ಬಂದಿಳಿಯಲಿದ್ದಾರೆ.
ಸುನಿತಾ ವಿಲಿಯನ್ಸ್, ಬುಚ್ ವಿಲ್ಮೋರ್, ರಷ್ಯಾದ ಅಲೆಕ್ಸಾಂಡರ್ ಗೋರ್ಬುನೋವ್ ಮತ್ತು ಅಮೆರಿಕದ ನಿಕ್ ಹೇಗ್ ಅವರನ್ನು ಹೊತ್ತ ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್ ನೌಕೆ ಭಾರತೀಯ ಕಾಲಮಾನ ಮಂಗಳವಾರ 10 ಗಂಟೆ ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಬೇರ್ಪಟ್ಟು ಭೂಮಿಯತ್ತ ಪ್ರಯಾಣ ಬೆಳೆಸಿದೆ. ಅಲ್ಲಿಂದ ಹೊರಟ 15 ಗಂಟೆಗಳ ಬಳಿಕ ಅಂದರೆ ಬುಧವಾರ ಮುಂಜಾವಿನ 3 ಗಂಟೆ ವೇಳೆಗೆ ನೌಕೆಯು, ಫ್ಲೋರಿಡಾ ಸಮುದ್ರದ ಮೇಲೆ ಬಂದು ಅಪ್ಪಳಿಸಲಿದೆ. ಬಳಿಕ ಎಲ್ಲಾ ನಾಲ್ವರು ಯಾತ್ರಿಗಳನ್ನು ಬೋಟ್‌ಗಳ ಮೂಲಕ ದಡಕ್ಕೆ ತರೆತಂದು ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಕೆಲ ಕಾಲ ನಿಗಾದಲ್ಲಿ ಇಡಲಾಗುವುದು.ಹೊಸ ದಾಖಲೆ:
ಇದನ್ನೂ ಓದಿ: Sunita Williams: 9 ತಿಂಗಳ ಬಾಹ್ಯಾಕಾಶ ಯಾತ್ರೆ ನಂತರ ಸುರಕ್ಷಿತವಾಗಿ ಬಂದಿಳಿದ ಸುನೀತಾ ವಿಲಿಯಮ್ಸ್, ಅಪಾಯಗಳೇನಿದ್ದವು?
8 ದಿನಗಳ ತುರ್ತು ಕೆಲಸಕ್ಕೆಂದು ಕಳೆದ ವರ್ಷ ಐಎಸ್‌ಎಸ್‌ಗೆ ತೆರಳಿದ್ದ ಸುನಿತಾ ಮತ್ತು ಬುಚ್ ಭೂಮಿಗೆ ಮರಳಲು ಸೂಕ್ತ ನೌಕೆಯ ಕೊರತೆಯಿಂದಾಗಿ 9 ತಿಂಗಳು ಅಲ್ಲೇ ಉಳಿದಿದ್ದರು.
ಈ ಅವಧಿಯಲ್ಲಿ ಸುನಿತಾ 9 ಸಲ ಒಟ್ಟು 62 ಗಂಟೆಗಳ ಅವಧಿಯಷ್ಟು ಬಾಹ್ಯಾಕಾಶ ನಡಿಗೆ ಮಾಡಿ ಹಲವು ದುರಸ್ತಿ ಕಾರ್ಯ ಮಾಡಿದ್ದರು. ಈ ಮೂಲಕ ಅತ್ಯಂತ ಹೆಚ್ಚಿನ ಅವಧಿಯ ಬಾಹ್ಯಾಕಾಶ ನಡಿಗೆ ಮಾಡಿದ ಮಹಿಳೆ ಎಂಬ ದಾಖಲೆಗೂ ಸುನಿತಾ ಪಾತ್ರರಾಗಿದ್ದಾರೆ.
ಭಾರತದ ಪುತ್ರಿ ಬಗ್ಗೆ ನಮಗೆ ಹೆಮ್ಮೆ: ಸುನಿತಾಗೆ ಮೋದಿ ಪತ್ರ
ನಿಮಗಾಗಿ 140 ಕೋಟಿ ಹಾರೈಕೆ- ಭಾರತಕ್ಕೆ ಭೇಟಿ ನೀಡಿ: ಪ್ರಧಾನಿ==ನವದೆಹಲಿ: ಒಂಬತ್ತು ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಕಳೆದು ಇದೀಗ ಬುಧವಾರ ಭೂಮಿಗೆ ವಾಪಸಾಗುತ್ತಿರುವ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ಗೆ ಪ್ರಧಾನಿ ಮೋದಿ ಅವರು ಭಾವನಾತ್ಮಕ ಪತ್ರ ಬರೆದಿದ್ದಾರೆ.
ಸುನಿತಾರನ್ನು ಭಾರತದ ಹೆಮ್ಮೆಯ ಪುತ್ರಿ ಎಂದು ಬಣ್ಣಿಸಿರುವ ಮೋದಿ, ಭಾರತಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ.ಮಾ.1ರಂದು ಬರೆದಿರುವ ಈ ಪತ್ರವನ್ನು ನಾಸಾದ ಮಾಜಿ ಗಗನಯಾತ್ರಿ ಮೈಕ್ ಮೆಸ್ಸಿಮಿನೋ ಅವರ ಮೂಲಕ ಮೋದಿ ಅವರು ಕಳುಹಿಸಿಕೊಟ್ಟಿದ್ದಾರೆ.
ಈ ಪತ್ರವನ್ನು ಇದೀಗ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.ಪತ್ರದಲ್ಲಿ ‘ನೀವು ನಮ್ಮಿಂದ ಸಾವಿರಾರು ಕಿ.ಮೀ. ದೂರದಲ್ಲಿದ್ದರೂ ನಮ್ಮ ಹೃದಯಕ್ಕೆ ಹತ್ತಿರವಾಗಿದ್ದೀರಿ. ಭಾರತೀಯರು ನಿಮ್ಮ ಉತ್ತಮ ಆರೋಗ್ಯ ಮತ್ತು ನಿಮ್ಮ ಯೋಜನೆ ಯಶಸ್ವಿಗೆ ಪ್ರಾರ್ಥಿಸುತ್ತಿದ್ದಾರೆ. ನೀವು ಯಶಸ್ವಿಯಾಗಿ ವಾಪಸಾದ ನಂತರ ನಾವು ನಿಮ್ಮನ್ನು ಭಾರತದಲ್ಲಿ ಭೇಟಿಯಾಗಲು ಎದುರು ನೋಡುತ್ತಿದ್ದೇವೆ.
ಭಾರತದ ಪ್ರಸಿದ್ಧ ಮಗಳೊಬ್ಬಳನ್ನು ಸತ್ಕರಿಸುವುದು ನನ್ನ ಪಾಲಿಗೆ ಖುಷಿಯ ವಿಚಾರ ॐ ಎಂದು ಮೋದಿ ಹೇಳಿಕೊಂಡಿದ್ದಾರೆ.ಇದೇ ವೇಳೆ, 2016ರಲ್ಲಿ ಅಮೆರಿಕದಲ್ಲಿ ಸುನಿತಾ ವಿಲಿಯಮ್ಸ್ ಹಾಗೂ ಅವರ ದಿ.ತಂದೆ ದೀಪಕ್ ಪಾಂಡ್ಯಾ ಅವರ ಭೇಟಿಯನ್ನೂ ಮೋದಿ ಪತ್ರದಲ್ಲಿ ಸ್ಮರಿಸಿಕೊಂಡಿದ್ದಾರೆ.
‘ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಾಸಾದ ಮಾಜಿ ಗಗನಯಾತ್ರಿ ಮೆಸ್ಸಿಮಿನೋ ಅವರನ್ನು ಭೇಟಿಯಾಗಿದ್ದೆ. ಮಾತುಕತೆ ವೇಳೆ ನಿಮ್ಮ ವಿಚಾರ ಪ್ರಸ್ತಾಪಕ್ಕೆ ಬಂತು. ನೀವು ಮತ್ತು ನಿಮ್ಮ ಕೆಲಸಗಳ ಕುರಿತು ನಾವು ತುಂಬಾ ಹೆಮ್ಮೆ ಪಟ್ಟುಕೊಂಡೆವು. ಈ ಮಾತುಕತೆ ಬಳಿಕ ನಿಮಗೆ ಪತ್ರ ಬರೆಯದೆ ಇರಲು ಸಾಧ್ಯವಾಗಲಿಲ್ಲ’ ಎಂದು ಮೋದಿ ತಿಳಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡೆನ್ ಮತ್ತು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ವೇಳೆಯೂ ಸುನಿತಾ ವಿಚಾರ ಪ್ರಸ್ತಾಪಿಸಿದ್ದಾಗಿ ಹೇಳಿರುವ ಮೋದಿ, ಭಾರತದ 140 ಕೋಟಿ ಭಾರತೀಯರು ಸುನಿತಾರ ಸಾಧನೆಗೆ ಹೆಮ್ಮೆ ಪಡುತ್ತಾರೆ ಎಂದ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ತಂದೆ ದಿ.ದೀಪಕ್ ಪಾಂಡೆ ಅವರ ಆಶೀರ್ವಾದ ಯಾವತ್ತಿಗೂ ಸುನಿತಾ ಅವರ ಮೇಲಿರುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Sunita Williams: 9 ತಿಂಗಳ ಬಾಹ್ಯಾಕಾಶ ಯಾತ್ರೆ ನಂತರ ಸುರಕ್ಷಿತವಾಗಿ ಬಂದಿಳಿದ ಸುನೀತಾ ವಿಲಿಯಮ್ಸ್, ಅಪಾಯಗಳೇನಿದ್ದವು?
ಗುಜರಾತ್‌ನ ಸುನಿತಾ ಪೂರ್ವಜರ ಊರಲ್ಲಿ ಸಂಭ್ರಮ
ಮೆಹ್ಸಾನಾ: 9 ತಿಂಗಳ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳುತ್ತಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಆಗಮನ ಭಾರತೀಯರ ಸಂತೋಷಕ್ಕೆ ಕಾರಣವಾಗಿದೆ. ಅದರಲ್ಲಿಯೂ ಅವರ ಪೂರ್ವಜರ ಊರು ಗುಜರಾತಿನ ಮೆಹ್ಸಾನ ಜಿಲ್ಲೆಯಲ್ಲಿರುವ ಜುಲಸಾನದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಸುನಿತಾ ತಂದೆ ದೀಪಕ್ ಪಾಂಡ್ಯ ಪೂರ್ವಜರ ಊರು ಜುಲಾಸಾನ ಗ್ರಾಮಸ್ಥರು ಅವರ ಸುರಕ್ಷತೆಗಾಗಿ ದೇವಸ್ಥಾನಗಳಲ್ಲಿ ಜ್ಯೋತಿ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೇ ಬುಧವಾರ ಅವರು ಭೂಮಿಗೆ ಬಂದ ಬಳಿಕ ಅವರ ಫೋಟೋವನ್ನಿಟ್ಟು ಮೆರವಣಿಗೆ ನಡೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ