
ನವದೆಹಲಿ: ದೇಶದಲ್ಲಿ ಸಕ್ಕರೆ ಅಭಾವದಿಂದ ಬೆಲೆ ಗಗನಕ್ಕೇರಿರುವ ನಡುವೆಯೇ, ವಿದೇಶಗಳಿಂದ ಆಮದಾಗುತ್ತಿರುವ ಕಚ್ಚಾ ಸಕ್ಕರೆಯ ಕಂಟೇನರ್‌ಗಳು ಅಕ್ಟೋಬರ್ 15ರ ವೇಳೆಗೆ ಭಾರತವನ್ನು ತಲುಪುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ (ಎನ್‌ಎಫ್‌ಸಿಎಸ್‌ಎಫ್) ಅಧ್ಯಕ್ಷ ಪ್ರಕಾಶ್ ನಾಯಕ್‌ನವಾರೆ ತಿಳಿಸಿದ್ದಾರೆ. ಹೀಗಾಗಿ ಇನ್ನೂ ಸುಮಾರು 50 ದಿನಗಳು ಸಕ್ಕರೆ ದರ ಏರಿಕೆಯ ಬಿಸಿ ಗ್ರಾಹಕರನ್ನು ಬಾಧಿಸಲಿದೆ ಎನ್ನಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬ್ರೆಜಿಲ್ ಒಂದೇ ಭಾರತಕ್ಕೆ ಸಕ್ಕರೆ ಪೂರೈಸುವ ಪ್ರಮುಖ ದೇಶವಾಗಿದೆ. ಸಾಂಪ್ರದಾಯಿಕ ಪೂರೈಕೆ ದೇಶವಾದ ಥಾಯ್ಲೆಂಡ್ ಸ್ವತಃ ಸಕ್ಕರೆ ಕೊರತೆಯನ್ನು ಎದುರಿಸುತ್ತಿರುವುದರಿಂದ, ಅಲ್ಲಿಂದ ಆಮದು ಸಾಧ್ಯವಿಲ್ಲ. ಸಕ್ಕರೆಯು ಬ್ರೆಜಿಲ್‌ನಿಂದ ಭಾರತದ ಬಂದರು ತಲುಪಲು ಸರಾಸರಿ 40-45 ದಿನ ಬೇಕಾಗುತ್ತದೆ. ಆ ಬಳಿಕ ಬಂದರಿನಿಂದ ಸಕ್ಕರೆ ಮಿಲ್‌ಗಳಿಗೆ ರವಾನಿಸಲು ಹೆಚ್ಚುವರಿ ಸಮಯ ಅಗತ್ಯವಿದೆ. ಹೀಗಾಗಿ ಅ.15ರ ಒಳಗಾಗಿ ಎಷ್ಟು ಪ್ರಮಾಣದ ಸಕ್ಕರೆ ಬರಲಿದೆ ಎಂದು ನಿಖರವಾಗಿ ಅಂದಾಜಿಸುವುದು ಕಷ್ಟ ಎನ್ನಲಾಗಿದೆ.
ಆಮದಾಗುವ ಕಚ್ಚಾ ಸಕ್ಕರೆಯು ಬಂದರು ಸೌಲಭ್ಯ ಹೊಂದಿರುವ ಕರಾವಳಿ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಮತ್ತು ಆಂಧ್ರಪ್ರದೇಶಗಳಿಗೆ ಮೊದಲು ತಲುಪಲಿದೆ. ಅಲ್ಲಿಂದ ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಉತ್ತರ ಭಾರತದ ರಾಜ್ಯಗಳಿಗೆ ಪೂರೈಕೆಯಾಗಲಿದೆ.
ದೇಶದಲ್ಲಿ ಸಕ್ಕರೆ ಅಭಾವ ಉಂಟಾಗುವ ಯಾವುದೇ ಭೀತಿಯಿಲ್ಲ. 2025-26ರ ಹಂಗಾಮಿನಲ್ಲಿ 279 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುವ ಅಂದಾಜಿತ್ತು. ಅ.1ರಿಂದ ಆರಂಭವಾಗುವ 2026-27ರ ಹೊಸ ಹಂಗಾಮಿಗೆ 35 ಲಕ್ಷ ಟನ್ ಆರಂಭಿಕ ದಾಸ್ತಾನು ಇರಲಿದ್ದು, ಇದು ದೇಶದ ಮಾಸಿಕ 22 ಲಕ್ಷ ಟನ್ ಅಗತ್ಯವನ್ನು ಸುಲಭವಾಗಿ ಪೂರೈಸಲಿದೆ. ನವೆಂಬರ್ ವೇಳೆಗೆ ಮಾರುಕಟ್ಟೆಗೆ ಹೊಸ ಸಕ್ಕರೆ ಬರಲಿದೆ ಎಂದು ಎನ್‌ಎಫ್‌ಸಿಎಸ್‌ಎಫ್ ಸಷ್ಟಪಡಿಸಿದೆ.
ಕಳೆದ ತಿಂಗಳಿಂದ ಸಕ್ಕರೆ ಬೆಲೆ ಶೇ.24ರಷ್ಟು ಏರಿಕೆಯಾಗಿ ಕೆಜಿಗೆ 70 ರು.ವರೆಗೆ ತಲುಪಿದೆ. ಇದನ್ನು ತಡೆಯಲು ಆ.20ರಂದು ಸರ್ಕಾರ 10 ಲಕ್ಷ ಟನ್ ಕಚ್ಚಾ ಸಕ್ಕರೆಯನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಕೃತಕ ಅಭಾವ ಸೃಷ್ಟಿ ಹಾಗೂ ಅಕ್ರಮ ದಾಸ್ತಾನಿನ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ವರ್ತಕರಿಗೆ 200 ಟನ್‌ಗಳ ದಾಸ್ತಾನು ಮಿತಿ, ಸೌಲಭ್ಯಗಳ ಪರಿಶೀಲನೆ ಹಾಗೂ ರಾಜ್ಯಮಟ್ಟದಲ್ಲಿ ‘ಫ್ಲೈಯಿಂಗ್ ಸ್ಕ್ವಾಡ್’ಗಳ ತಪಾಸಣೆಯಿಂದಾಗಿ, ಶನಿವಾರದ ಟೆಂಡರ್‌ಗಳಲ್ಲಿ ಎಕ್ಸ್-ಮಿಲ್ ದರ ಕೆಜಿಗೆ 5 ರು.ನಷ್ಟು ಇಳಿಕೆಯಾಗಿದೆ.
2 ತಿಂಗಳು ಏಕೆ?
- ದೇಶದಲ್ಲಿ ಸಕ್ಕರೆ ಬೆಲೆ ಕೆ.ಜಿ.ಗೆ 70 ರು.ವರೆಗೆ ತಲುಪಿದ ಹಿನ್ನೆಲೆ. 10 ಲಕ್ಷ ಟನ್ ಕಚ್ಚಾ ಸಕ್ಕರೆ ಆಮದಿಗೆ ಸರ್ಕಾರ ನಿರ್ಧಾರ
- ತನ್ನಲ್ಲೇ ಕೊರತೆಯಿದೆ, ಭಾರತಕ್ಕೆ ಪೂರೈಸಲು ಆಗುವುದಿಲ್ಲ ಎಂದು ಹೇಳಿದ ಥಾಯ್ಲೆಂಡ್. ಹೀಗಾಗಿ ಬ್ರೆಜಿಲ್ ದೇಶಕ್ಕೆ ಮೊರೆ
- ಅಲ್ಲಿಂದ ಸಕ್ಕರೆ ಭಾರತಕ್ಕೆ ತರಲು 45 ದಿನ ಬೇಕು. ಬಳಿಕ ಸಕ್ಕರೆ ಮಿಲ್‌ಗಳಿಗೆ ರವಾನಿಸಲು ಮತ್ತಷ್ಟು ಸಮಯ ಬೇಕು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ