ಕೇವಲ ಪಿಯುಸಿ ಓದಿ ಐಎಎಸ್ ಅಧಿಕಾರಿ ಆದವನ ಬಂಧನ..!

Published : Aug 12, 2025, 01:46 PM ISTUpdated : Aug 12, 2025, 02:07 PM IST
Fake IAS Officer Arrested

ಸಾರಾಂಶ

ಇತ್ತೀಚೆಗೆ ನಕಲಿಗಳ ಹಾವಳಿ ಬಹಳ ತೀವ್ರವಾಗಿದೆ. ಹಾಗೆಯೇ ಗುರುಗ್ರಾಮದಲ್ಲಿ ಕೇವಲ ಪಿಯುಸಿ ಶಿಕ್ಷಣ ಮುಗಿಸಿದ್ದ ಯುವಕನೋರ್ವ ನಕಲಿ ಐಎಎಸ್ ಅಧಿಕಾರಿಯಾಗಿದ್ದು ಆತನನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.

ಗುರುಗ್ರಾಮ: ಇತ್ತೀಚೆಗೆ ನಕಲಿಗಳ ಹಾವಳಿ ಬಹಳ ತೀವ್ರವಾಗಿದೆ. ನಕಲಿ ಡಾಕ್ಟರ್‌ಗಳು ನಕಲಿ ಲಾಯರ್‌ಗಳು ನಕಲಿ ಪೊಲೀಸ್, ನಕಲಿ ಇಡಿ, ಐಟಿ ಅಧಿಕಾರಿಗಳು ಹೀಗೆ ಎಲ್ಲೆಲ್ಲೂ ಬರೀ ನಕಲಿಗಳೇ ಹಾಗೆಯೇ ಇಲ್ಲೊಂದು ಕಡೆ ನಕಲಿ ಐಎಎಸ್ ಅಧಿಕಾರಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 31 ವರ್ಷದ ಜೈ ಪ್ರಕಾಶ್ ಪಠಾಕ್ ಬಂಧಿತ ನಕಲಿ ಐಎಎಸ್ ಅಧಿಕಾರಿ. ಈತನನ್ನು ಬಂಧಿಸಿದ ಪೊಲೀಸರು ಈತನ ಬಳಿಯಿಂದ ನಕಲಿ ಐಡಿ ಕಾರ್ಡ್‌ಗಳು, , ಶಸ್ತ್ರಾಸ್ತ್ರ ಪರವಾನಗಿ, ಸರ್ಕಾರಿ ಗುರುತು ಇರುವ ಕಾರನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶ ಮೂಲದವನಾದ ಈತನನ್ನು ಗುರುಗ್ರಾಮದಲ್ಲಿ ಬಂಧಿಸಲಾಗಿದೆ. ಈತ ಅನೇಕ ಯುವಕರಿಗೆ ಉದ್ಯೋಗದ ಭರವಸೆ ನೀಡಿ ಹಣ ವಸೂಲಿ ಮಾಡಿದ್ದ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿ ಹಣ ಸುಲಿಗೆ ಮಾಡಿದ್ದ.

ಕೇವಲ ಪಿಯುಸಿ ಓದಿದ್ದ ನಕಲಿ ಐಎಎಸ್ ಅಧಿಕಾರಿ!

ಕೇವಲ ಪಿಯುಸಿ ಓದಿದ್ದ ಈತ ಉತ್ತರ ಪ್ರದೇಶದ ಪ್ರತಾಪ್‌ಗಢದ ರಘುಪುರ ನಿವಾಸಿಯಾಗಿದ್ದಾನೆ. ಈತನ ಬಳಿ ನಕಲಿ ಶಸ್ತ್ರಾಸ್ತ್ರ ಪರವಾನಗಿ ಮತ್ತು ಭಾರತ ಸರ್ಕಾರದ ವಾಹನ ಎಂದು ತಪ್ಪಾಗಿ ಗುರುತಿಸಲಾದ ಕಾರು ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಖಚಿತ ಮಾಹಿತಿ ಮೇರೆಗೆ ಪಾಲಂ ವಿಹಾರ್ ಪೊಲೀಸ್ ಠಾಣೆಯ ಪೊಲೀಸ್ ತಂಡವೊಂದು ಪಾಠಕ್ ವಾಸಿಸುತ್ತಿದ್ದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದೆ. ಪೊಲೀಸರು ಮನೆ ಸಮೀಪಿಸುತ್ತಿದ್ದಂತೆ, ಪಾಠಕ್ ಛಾವಣಿಯಿಂದ ಹಾರಿ ಪರಾರಿಯಾಗಲು ಪ್ರಯತ್ನಿಸಿದ, ಆದರೆ ಪೊಲೀಸರು ಆತನನ್ನು ಹಿಡಿದಿದ್ದಾರೆ.

ಗೃಹ ಇಲಾಖೆಗೆ ಸೇರಿದ್ದ ಐಡಿ ಕಾರ್ಡ್‌ಗಳು ಕೆಂಪು ಗೂಟಾದ ಕಾರು:

ಈತನ ಬಳಿ ಎರಡು ಐಡಿ ಕಾರ್ಡ್‌ಗಳಿದ್ದವು. ಅದರಲ್ಲಿ ಒಂದರಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ಎಂಬ ಪ್ರಿಂಟ್ ಇದ್ದ ಐಡಿ ಕಾರ್ಡ್‌ನ ಟ್ಯಾಗ್‌(ID card lanyard)ಇತ್ತು. ನಕಲಿ ವರ್ಗಾವಣೆ ಆದೇಶಕ್ಕೆ ಸಂಬಂಧಿಸಿದ ಲಕೋಟೆ ನಕಲಿ ಶಸ್ತ್ರಾಸ್ತ್ರ ಪರವಾನಗಿ, ಆರು ಮೊಬೈಲ್ ಫೋನ್‌ಗಳು, ಒಂದು ಲ್ಯಾಪ್‌ಟಾಪ್, ಒಂದು ವಾಕಿ-ಟಾಕಿ ಸೆಟ್, ಒಂದು ಆಯುಷ್ಮಾನ್ ಕಾರ್ಡ್, ಮೂರು ಆಧಾರ್ ಕಾರ್ಡ್‌ಗಳು, ಒಂದು ಎಟಿಎಂ ಕಾರ್ಡ್, ಒಂದು ಪ್ಯಾನ್ ಕಾರ್ಡ್, ಒಂದು ಪಾಸ್‌ಪೋರ್ಟ್, ಎರಡು ಸ್ಟ್ಯಾಂಪ್‌ಗಳು, ಒಂದು ಕೆಂಪು ಮತ್ತು ನೀಲಿ ಬೀಕನ್ ಲೈಟ್, 2.5 ಲಕ್ಷ ರೂ. ನಗದು ಮತ್ತು 'ಭಾರತ ಸರ್ಕಾರ' ಎಂದು ಬರೆದ ಕಾರು ಸೇರಿದಂತೆ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಪಾಠಕ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಆತನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ವಿಚಾರಣೆಯ ಸಮಯದಲ್ಲಿ, ಪಾಠಕ್ ಗೃಹ ಸಚಿವಾಲಯದ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಸರ್ಕಾರಿ ಉದ್ಯೋಗಗಳು ಮತ್ತು ಸರ್ಕಾರಿ ಉದ್ಯೋಗಿಗಳ ವರ್ಗಾವಣೆಯ ಭರವಸೆ ನೀಡಿ ಜನರನ್ನು ವಂಚಿಸಿ ಹಣವನ್ನು ಸುಲಿಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ, ಹೀಗೆ ಸಿಕ್ಕ ಹಣವನ್ನು ತಾನು ತನ್ನ ಕುಟುಂಬದ ಖರ್ಚಿಗೆ ನೀಡುತ್ತಿದ್ದಿದ್ದಾಗಿ ಹೇಳಿದ್ದಾನೆ.

ಪಾಠಕ್ ಈ ರೀತಿ ವಂಚನೆ ಮಾಡಿದ್ದು ಇದೇ ಮೊದಲಲ್ಲ, ಈ ಹಿಂದೆಯೂ ಆತ ಉತ್ತರ ಪ್ರದೇಶದಲ್ಲಿ ಇದೇ ರೀತಿಯ ವಂಚನೆ ಚಟುವಟಿಕೆ ಮಾಡಿದ್ದು, ಅಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರೆದಿದ್ದು, ಆರೋಪಿಗೆ ಸಂಬಂಧಿಸಿದ ಇತರ ಸಂಭಾವ್ಯ ಅಪರಾಧಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ ಹರಿಯಾಣದ ನುಹ್‌ನಲ್ಲಿ ಸೈಬರ್ ಅಪರಾಧ ಪೊಲೀಸರು ಸೇನಾ ಅಧಿಕಾರಿಯಾಗಿ ನಟಿಸಿ ಜನರನ್ನು ವಂಚಿಸಿದ ನಕಲಿ ಸೇನಾಧಿಕಾರಿಯನ್ನು ಬಂಧಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ