ರಾಜಕೀಯಕ್ಕೆ ಶಶಿಕಲಾ ದಿಢೀರ್‌ ವಿದಾಯ!

By Kannadaprabha NewsFirst Published Mar 4, 2021, 7:52 AM IST
Highlights

ರಾಜಕೀಯಕ್ಕೆ ಶಶಿಕಲಾ ದಿಢೀರ್‌ ವಿದಾಯ| ತಮಿಳ್ನಾಡು ವಿಧಾನಸಭಾ ಚುನಾವಣೆ ಮುನ್ನ ಅಚ್ಚರಿಯ ಬೆಳವಣಿಗೆ| ನಾನು ಎಂದಿಗೂ ಅಧಿಕಾರ, ಹುದ್ದೆಯ ಹಿಂದೆ ಬಿದ್ದಿರಲಿಲ್ಲ: ಶಶಿಕಲಾ

ಚೆನ್ನೈ(ಮಾ.04): ಭ್ರಷ್ಟಾಚಾರ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಬೆಂಗಳೂರಿನ ಜೈಲಿನಿಂದ ಬಿಡುಗಡೆಯಾಗಿದ್ದ ಎಐಎಡಿಎಂಕೆ ಪಕ್ಷದ ಮಾಜಿ ಪ್ರದಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ರಾಜಕೀಯಕ್ಕೆ ದಿಢೀರ್‌ ವಿದಾಯ ಘೋಷಿಸಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ನಡೆದಿರುವ ಈ ಬೆಳವಣಿಗೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಶಶಿಕಲಾ ಮತ್ತು ಅವರ ಸೋದರ ಸಂಬಂಧಿ ದಿನಕರನ್‌ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಎಡಿಎಂಕೆ ನಾಯಕರು ಘೋಷಿಸಿದ ಬೆನ್ನಲ್ಲೇ ನಡೆದಿರುವ ಈ ಬೆಳವಣಿಗೆ ಹಿಂದೆ ರಾಜಕೀಯ ತಂತ್ರಗಾರಿಕೆ ಅಡಗಿರಬಹುದಾ ಎಂಬ ಅನುಮಾನಗಳೂ ವ್ಯಕ್ತವಾಗಿದೆ.

ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಶಶಿಕಲಾ ‘ನಾನು ಎಂದಿಗೂ ಅಧಿಕಾರ ಅಥವಾ ಹುದ್ದೆಯ ಹಿಂದೆ ಬಿದ್ದಿರಲಿಲ್ಲ. ಜಯಲಲಿತಾ ಬದುಕಿದ್ದಾಗಲೂ ನಾನು ಹೀಗೆಯೇ ಇದ್ದೆ. ಅವರ ಸಾವಿನ ಬಳಿಕವೂ ಹಾಗೆಯೇ ಇರುವೆ. ನಾನು ರಾಜಕೀಯಕ್ಕೆ ವಿದಾಯ ಹೇಳುತ್ತಿರುವೆ. ಆದರೆ ಪಕ್ಷ ಗೆಲ್ಲಲಿ ಮತ್ತು ಜಯಾ ಪರಂಪರೆ ಮುಂದುವರೆಯಲಿ ಎಂದು ಬಯಸುತ್ತೇನೆ. ಎಲ್ಲಾ ಎಐಎಡಿಎಂಕೆ ಕಾರ್ಯಕರ್ತರು ಒಂದಾಗಬೇಕು ಮತ್ತು ಡಿಎಂಕೆಯನ್ನು ಸೋಲಿಸಬೇಕು. ಪಕ್ಷದ ಪರಂಪರೆ ಮುಂದುವರೆದುಕೊಂಡು ಹೋಗಲು ಎಲ್ಲಾ ಕಾರ್ಯಕರ್ತರು ಒಂದಾಗಿ ಇರಬೇಕು ಎಂದು ಕೋರುತ್ತೇನೆ’ ಎಂದು ಹೇಳಿದ್ದಾರೆ.

ಸಿಎಂ ಹುದ್ದೆ ಬದಲು ಜೈಲು ಪಾಲು

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಅತ್ಯಾಪ್ತೆಯಾಗಿದ್ದ ಶಶಿಕಲಾ, ಜಯಾರ ನಿಧನದ ನಂತರ 2016ರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಇನ್ನು 2017 ಫೆ.5ರಂದು ಪಕ್ಷದ ಶಾಸಕಾಂಗ ಪಕ್ಷದ ನಾಯಕಿಯಾಗಿಯೂ ಆಯ್ಕೆಯಾಗುವ ಮೂಲಕ ಮುಖ್ಯಮಂತ್ರಿ ಹುದ್ದೆ ಏರಲು ಸಜ್ಜಾಗಿದ್ದರು. ಆದರೆ ಶಶಿಕಲಾ ಮೇಲಿನ ಭ್ರಷ್ಟಾಚಾರ ಪ್ರಕರಣದ ತೀರ್ಪಿಗೆ ದಿನ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಹುದ್ದೆ ನೀಡಲು ರಾಜ್ಯಪಾಲರು ವಿಳಂಬ ಮಾಡಿದ್ದರು. ನಿರೀಕ್ಷೆಯಂತೆ ಫೆ.14ರಂದು ಶಶಿಕಲಾಗೆ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಆಪ್ತ ಪಳನಿಸ್ವಾಮಿಯನ್ನು ಶಶಿಕಲಾ ಸಿಎಂ ಆಗಿ ನೇಮಿಸಿದ್ದರು. ಆದರೆ 2017ರ ಆಗಸ್ಟ್‌ನಲ್ಲಿ ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಾಡಿ ಪಕ್ಷ ತೀರ್ಮಾನ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶಶಿಕಲಾರ ಆಪ್ತ ದಿನಕರನ್‌ 2017ರಲ್ಲಿ ಅಮ್ಮಾ ಮಕ್ಕಳ್‌ ಮುನ್ನೇತ್ರ ಕಳಗಂ ಎಂಬ ಹೊಸ ಪಕ್ಷ ಸ್ಥಾಪಿಸಿದ್ದರು.

ನಿರ್ಧಾರದ ಹಿಂದೆ ತಂತ್ರಗಾರಿಕೆ?

ಶಶಿಕಲಾ ನಿರ್ಧಾರ, ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ- ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರಕ್ಕೆ ಬರದಂತೆ ತಡೆಯಲು ಮಾಡಿದ ಕಾರ್ಯತಂತ್ರವೂ ಆಗಿರಬಹುದು ಎಂಬ ವಿಶ್ಲೇಷಣೆಗಳೂ ಇವೆ. ಎಐಎಡಿಎಂಕೆಯಲ್ಲಿ ಸಿಎಂ ಪಳನಿಸ್ವಾಮಿ ಬಣ ಮತ್ತು ಶಶಿಕಲಾ ಬೆಂಬಲಿಸುವ ಎರಡೂ ಬಣಗಳಿವೆ. ಒಂದು ವೇಳೆ ಚುನಾವಣೆಯಲ್ಲಿ ಮತ ವಿಭಜನೆಯಾದರೆ ಡಿಎಂಕೆ ಸುಲಭವಾಗಿ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಚುನಾವಣೆ ವೇಳೆ ಪಕ್ಷದ ಕಾರ್ಯಕರ್ತರನ್ನು ಗೊಂದಲಕ್ಕೆ ಗುರಿ ಮಾಡದೇ ಇರಲು ಸ್ವತಃ ಶಶಿಕಲಾ ಇಂಥದ್ದೊಂದು ನಿರ್ಧಾರ ಕೈಗೊಂಡಿರಬಹುದು ಅಥವಾ ಪಳನಿಸ್ವಾಮಿ ಮತ್ತು ಶಶಿಕಲಾ ಬಣ ಒಂದು ಮಾಡಲು ಯತ್ನಿಸುತ್ತಿದ್ದ ಬಿಜೆಪಿ ಕೂಡಾ ಇಂಥದ್ದೊಂದು ಸಲಹೆ ನೀಡಿರಬಹುದು ಎನ್ನಲಾಗುತ್ತಿದೆ.

click me!