
ನವದೆಹಲಿ(ಮಾ.04): ದೇಶಾದ್ಯಂತ ನಡೆಯುತ್ತಿರುವ ಕೊರೋನಾ ಲಸಿಕೆ ಆಂದೋಲನದ 3ನೇ ಹಂತಕ್ಕೆ ಕೇಂದ್ರ ಸರ್ಕಾರ ಇನ್ನಷ್ಟುವೇಗ ನೀಡಿದ್ದು, ಅನುಕೂಲವಿರುವ ಆಸ್ಪತ್ರೆಗಳು ದಿನದ 24 ಗಂಟೆಯೂ ಲಸಿಕೆ ವಿತರಣೆ ಮಾಡಬಹುದು ಎಂದು ನಿಯಮ ಮಾರ್ಪಾಡು ಮಾಡಿದೆ. ಜೊತೆಗೆ, ನಿರ್ದಿಷ್ಟಮೂಲಸೌಕರ್ಯವಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳೂ ಕೊರೋನಾ ಲಸಿಕೆ ನೀಡಬಹುದು ಎಂದು ಆದೇಶ ಹೊರಡಿಸಿದೆ.
ಸದ್ಯ ಸರ್ಕಾರಿ ಹಾಗೂ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಈ ಕಾಲಮಿತಿಯನ್ನು ಈಗ ರದ್ದುಪಡಿಸಲಾಗಿದೆ ಎಂದು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್, ‘ಜನರು ಈಗ ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಲಸಿಕೆ ಪಡೆಯಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಆರೋಗ್ಯ ಹಾಗೂ ಸಮಯಕ್ಕೆ ಅತಿಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ’ ಎಂದು ಹೇಳಿದ್ದಾರೆ.
ಸಮಯ ಬದಲಾವಣೆಗೆ ತಕ್ಕಂತೆ ಕೋವಿನ್ 2.0 ವೆಬ್‌ಸೈಟಿನಲ್ಲೂ ಕಾಲಮಿತಿಯನ್ನು ತೆಗೆದುಹಾಕಲಾಗುತ್ತದೆ. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಅನುಕೂಲವಿದ್ದರೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿ ಲಸಿಕೆ ಹಾಕುವ ಸಮಯವನ್ನು ಸಂಜೆ 5ರ ನಂತರವೂ ವಿಸ್ತರಿಸಿಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಆದರೆ, ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಸಮಯ ವಿಸ್ತರಣೆ ಮಾಡಲಾಗುತ್ತದೆಯೇ ಇಲ್ಲವೇ ಎಂಬ ಬಗ್ಗೆ ಏನನ್ನೂ ಹೇಳಿಲ್ಲ.
ಎಲ್ಲಾ ಖಾಸಗಿ ಆಸ್ಪತ್ರೆಯಲ್ಲೂ ಲಸಿಕೆ:
ಇಷ್ಟುದಿನ ಸರ್ಕಾರಿ ಲಸಿಕಾ ಕೇಂದ್ರಗಳ ಜೊತೆಗೆ ಜಿಲ್ಲೆಯಲ್ಲಿ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆ ನೀಡಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ ಇದೀಗ ದೇಶದ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ನೀಡಲು ಅನುಮತಿಯನ್ನು ವಿಸ್ತರಿಸಿದೆ. ಸಾಕಷ್ಟುಸಿಬ್ಬಂದಿ, ನುರಿತ ಲಸಿಕೆ ನೀಡಿಕೆದಾರರು, ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯಿದ್ದರೆ ಯಾವ ಖಾಸಗಿ ಆಸ್ಪತ್ರೆ ಬೇಕಾದರೂ ಸರ್ಕಾರದ ನಿಯಮಗಳನ್ನು ಪಾಲಿಸಿ ಕೊರೋನಾ ಲಸಿಕೆ ನೀಡಬಹುದು. ಅವುಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ