* ಭಾರತೀಯ ಜನತಾ ಪಕ್ಷದಿಂದ ನೂಪುರ್ ಅಮಾನತು
* ನೂಪುರ್ ಬಗ್ಗೆ ವಿವಾದಾತ್ಮಕ ಹೇಳಿಕೆ
* ಮುಸ್ಲಿಂ ಧಾರ್ಮಿಕ ಮುಖಂಡ ಆದಿಲ್ ಗಫೂರ್ ಅರೆಸ್ಟ್
ನವದೆಹಲಿ(ಜೂ.12): ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಅಮಾನತುಗೊಂಡಿರುವ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಬಗ್ಗೆ ಅಸಭ್ಯವಾಗಿ ಟೀಕೆ ಮಾಡಿದ ಮುಸ್ಲಿಂ ಧರ್ಮಗುರು ಆದಿಲ್ ಗಫೂರ್ ಘನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದಿಲ್ ಗಫೂರ್ ಅವರು ದೋಡಾ ಜಿಲ್ಲೆಯ ಭದೇರ್ವಾದಲ್ಲಿ ಬಹಳ ಪ್ರಚೋದನಕಾರಿ ಭಾಷಣ ಮಾಡಿದರು. ನೂಪುರ್ ಶರ್ಮಾ ಅವರ ಶಿರಚ್ಛೇದಕ್ಕೆ ಕರೆ ನೀಡಿದ್ದರು.
ಆದಿಲ್ ಗಫೂರ್ ಘನಿ ಅವರ ಪ್ರಚೋದನಕಾರಿ ಹೇಳಿಕೆಗಳು ಮತ್ತು ಹಿಂದೂ ಯುವಕನೊಬ್ಬ ಪ್ರವಾದಿಯ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ ನಂತರ ಮುನ್ನೆಚ್ಚರಿಕೆಯಾಗಿ ಭದೇರ್ವಾ ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂಬುವುದು ಉಲ್ಲೇಖನೀಯ. ಎರಡೂ ಪ್ರಕರಣಗಳಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಗಮನಾರ್ಹವಾಗಿ, ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆಯ ನಂತರ, ಗದ್ದಲ ನಿಲ್ಲುತ್ತಿಲ್ಲ. ಈ ಹೇಳಿಕೆಗೆ ದೇಶ ವಿದೇಶಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೂಪುರ್ ಹೇಳಿಕೆಯನ್ನು ದೇಶದ ಕೆಲವರು ಖಂಡಿಸುತ್ತಿದ್ದರೆ, ಅರಬ್ ರಾಷ್ಟ್ರಗಳು ಕೂಡ ಅಸಮಾಧಾನ ವ್ಯಕ್ತಪಡಿಸಿವೆ. ಆದರೆ, ವಿಷಯ ವೇಗ ಪಡೆಯುತ್ತಿರುವುದನ್ನು ನೋಡಿದ ಬಿಜೆಪಿ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ವಿರುದ್ಧ ಕ್ರಮ ಕೈಗೊಂಡಿತು ಮತ್ತು ಇಬ್ಬರನ್ನೂ ವಕ್ತಾರ ಹುದ್ದೆಯಿಂದ ತೆಗೆದುಹಾಕಲಾಯಿತು.
ಯೂಟ್ಯೂಬರ್ ಫೈಝಲ್ ವಾನಿ ಬಂಧನ
ಯೂಟ್ಯೂಬರ್ ಫೈಸಲ್ ವಾನಿ ಅವರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ನೂಪುರ್ ಶರ್ಮಾ ಶಿರಚ್ಛೇದನದ ಪ್ರಚೋದನಕಾರಿ ವಿಡಿಯೋ ಮಾಡಿದ ಆರೋಪ ಫೈಜಲ್ ವಾನಿ ಮೇಲಿದೆ. ಆದರೆ, ವಿವಾದ ಹೆಚ್ಚಾಗುತ್ತಿದ್ದಂತೆ ಫೈಸಲ್ ವಿಡಿಯೋಗಾಗಿ ಕ್ಷಮೆಯಾಚಿಸಿದ್ದಾರೆ. ಫೈಝಲ್ ವಾನಿ ಯೂಟ್ಯೂಬ್‌ನಲ್ಲಿ ಡೀಪ್ ಪೇನ್ ಫಿಟ್‌ನೆಸ್ ಎಂಬ ಫಿಟ್‌ನೆಸ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ.
ನೂಪುರ್‌ಗೆ ಜೂ.25ಕ್ಕೆ ವಿಚಾರಣೆಗೆ ಬುಲಾವ್
ಪ್ರವಾದಿ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ದೇಶಾದ್ಯಂತ ಭಾರೀ ಪ್ರತಿಭಟನೆಯಾದ ಬೆನ್ನಲ್ಲೇ ಮುಂಬೈ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೂ. 25ರಂದು ವಿಚಾರಣೆಗೆ ಹಾಜರಾಗುವಂತೆ ನೂಪುರ್‌ಗೆ ಶನಿವಾರ ಸಮನ್ಸ್ ಜಾರಿ ಮಾಡಿದ್ದಾರೆ.
ಕಟ್ಟೆಚ್ಚರ ವಹಿಸಿ: ಪೊಲೀಸರಿಗೆ ಕೇಂದ್ರ ಸೂಚನೆ
ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ, ಹಿಂಸಾಚಾರ ನಡೆದ ಬೆನ್ನಲ್ಲೇ ಗೃಹ ಸಚಿವಾಲಯವು ಕಟ್ಟೆಚ್ಚರ ವಹಿಸುವಂತೆ ಎಲ್ಲ ರಾಜ್ಯಗಳ ಪೊಲೀಸರಿಗೆ ಸೂಚಿಸಿದೆ.
ಅಲ್ಲದೆ, ‘ಗಲಭೆಯ ವೇಳೆ ಪೊಲೀಸರ ಮೇಲೂ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸರು ಹಾಗೂ ಅರೆಸೇನಾ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು’ ಎಂದು ನಿರ್ದೇಶಿಸಿದೆ.
‘ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಈಗಾಗಲೇ ಸೂಚಿಸಲಾಗಿದೆ’ ಎಂದು ಗೃಹ ಅಧಿಕಾರಿಗಳು ಹೇಳಿದ್ದಾರೆ.