ತಮಿಳುನಾಡಿನಲ್ಲಿ ಬಿಜೆಪಿ ಪರ ಅಲೆ : ಸಚಿವ ಎಸ್ ಟಿ ಎಸ್

By Suvarna NewsFirst Published Mar 28, 2021, 2:35 PM IST
Highlights

ದೇಶದ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು ಚುನಾವಣೆಗೆ ಭರ್ಜರಿ ಪ್ರಚಾರವೂ ನಡೆಯುತ್ತಿದೆ. ಇತ್ತ ತಮಿಳುನಾಡಿನಲ್ಲಿ ಮುಖಂಡರು ಕಮಲಪಾಳಯದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಊಟಿ (ಮಾ.28): ಉದಗಮಂಡಲಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯವರಾದ ಬೋಜರಾಜನ್ ಅವರು ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಉತ್ತಮ ಹೆಸರನ್ನು ಪಡೆದಿದ್ದಾರೆ. ಅವರ ಬಗ್ಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಪರ ಅಲೆ ಏಳುತ್ತಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉದಗಮಂಡಲಂ ಕ್ಷೇತ್ರದ ಮೇಲುಸ್ತುವಾರಿ ಎಸ್.ಟಿ.ಸೋಮಶೇಖರ್ ಹೇಳಿದರು. 

ಉದಗಮಂಡಲಂ ಬಿಜೆಪಿ ಅಭ್ಯರ್ಥಿ ಪರ ಊಟಿ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಮೈಸೂರಿನ ಬಿಜೆಪಿ ತಂಡ ಹಾಗೂ ಸ್ಥಳೀಯ ಬಿಜೆಪಿ ತಂಡದೊಂದಿಗೆ ಪ್ರಚಾರ ನಡೆಸಿದ ಸಚಿವರು, ಬೋಜರಾಜನ್ ಅವರನ್ನು ಖುದ್ದು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಹಾಗೂ ಗೃಹಮಂತ್ರಿಗಳಾದ ಅಮಿತ್ ಷಾ ಅವರು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ಆಯ್ಕೆಯ ಮಹತ್ವವು ನಮಗೆ ಪ್ರಚಾರಕ್ಕೆ ಹೋದಾಗ ತಿಳಿಯುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಉದಗಮಂಡಲಂ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ, ಪ್ರಚಾರದಲ್ಲಿ ನಿರತರಾಗಿದ್ದೇವೆ. ಎಲ್ಲ ಕಡೆ ಸಹ ನಮಗೆ ಉತ್ತಮ ಸ್ಪಂದನೆ ದೊರೆತಿದೆ. ನಮ್ಮ ಅಭ್ಯರ್ಥಿ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ಬರುತ್ತಿವೆ ಎಂದು ಹೇಳಿದರು. 

ಬೆಳಗಾವಿ ಬೈ ಎಲೆಕ್ಷನ್: ಮಂಗಳಾ ಅಂಗಡಿಗೆ ಬಿಜೆಪಿ​ ಟಿಕೆಟ್​ ಕೊಡುವುದಕ್ಕೆ 5 ಕಾರಣಗಳು ...

ಮತದಾರರ ಒಲವು ಬಿಜೆಪಿ ಕಡೆಗೆ
ಪ್ರಚಾರ ಸಂದರ್ಭದಲ್ಲಿ ಬೋಜರಾಜನ್ ಅವರ ಪರ ನಾವು ಮತ ಯಾಚನೆ ಮಾಡುತ್ತಿದ್ದಂತೆ, ಉತ್ತಮ ಅಭ್ಯರ್ಥಿಯನ್ನು ಈ ಬಾರಿ ನಿಲ್ಲಿಸಿದ್ದೀರಿ, ಅವರಿಗೆ ಈ ಬಾರಿ ಮತ ಚಲಾಯಿಸುತ್ತೇವೆ ಎಂದು ಸಾರ್ವಜನಿಕರೇ ಹೇಳುತ್ತಿದ್ದಾರೆ. ನನಗೆ ತಮಿಳು ಬರದಿದ್ದರೂ ಸಹ ಕನ್ನಡದಲ್ಲಿಯೇ ಮಾತನಾಡಿ ನಮಗೆ ಅರ್ಥವಾಗುತ್ತದೆ ಎಂಬ ಸಹೃದಯ ಮನೋಭಾವವನ್ನು ಇಲ್ಲಿನವರು ಮೆರೆಯುತ್ತಿದ್ದಾರೆ. ಇದು ನನ್ನ ಐದನೇ ಸಭೆಯಾಗಿದ್ದು, ಎಲ್ಲರಿಗೂ ನಾನು ಆಭಾರಿ ಎಂದು ಸಚಿವರಾದ ಸೋಮಶೇಖರ್ ಹೇಳಿದರು.

ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ. ಸಮಯ ಕಡಿಮೆ ಇದ್ದರೂ ಪಕ್ಷದ ಕಾರ್ಯಕರ್ತರ, ಮುಖಂಡರಿಗೆ ಉತ್ತಮ ಸಂಪರ್ಕ ಇರುವುದರಿಂದ ತಮ್ಮ ತಮ್ಮ ಸಂಬಂಧಿಕರು, ಸ್ನೇಹಿತರಿಗೆ ಮಾಹಿತಿಯನ್ನು ತಿಳಿಸಿ ಅವರಿಗೆ ಬಿಜೆಪಿ ಹಾಗೂ ಅಭ್ಯರ್ಥಿಯ ಬಗ್ಗೆ ಮನವೊಲಿಸಿ ಎಂದು ಸಚಿವರಾದ ಸೋಮಶೇಖರ್ ಅವರು ಕರೆ ನೀಡಿದರು. 

ಇನ್ನು ಬೋಜರಾಜನ್ ಅವರು ಆಯ್ಕೆಯಾದರೆ ಮಂತ್ರಿಯಾಗುವ ಸಾಧ್ಯತೆ ಇದ್ದು, ಊಟಿಯ ಅಭಿವೃದ್ಧಿಯಾಗುತ್ತದೆ. ಈಗ ಕೇಂದ್ರದಲ್ಲಿ ನಮ್ಮದೇ ಬಿಜೆಪಿ ಸರ್ಕಾರವಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಸರ್ಕಾರವೇ ಇರುವುದರಿಂದ ಅಭಿವೃದ್ಧಿಗೆ ವೇಗ ಪಡೆಯಲು ಸಾಧ್ಯವಾಗಿದೆ. ಹಾಗೆಯೇ ಇಲ್ಲಿ ಬಿಜೆಪಿಯನ್ನು ಗೆಲ್ಲಿಸಿದರೆ ಅಭಿವೃದ್ಧಿಗೆ ಮತ್ತಷ್ಟು ಬಲ ಬರಲಿದೆ. ಎಐಡಿಎಂಕೆ ಮತ್ತು ಬಿಜೆಪಿ ಮೈತ್ರಿಯ ಸರ್ಕಾರ ತಮಿಳುನಾಡಿನಲ್ಲಿ ರಚನೆಯಾದರೆ ಖಂಡಿತವಾಗಿಯೂ ಈ ಭಾಗದಲ್ಲಿ ಕೇಂದ್ರದ ಯೋಜನೆಗಳು ಹಾಗೂ ಅನುದಾನದ ಮಹಾಪೂರವೇ ಹರಿಯಲಿದೆ. ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.

ಎಲ್ಲೆಲ್ಲಿ ಪ್ರಚಾರ..?
ಉದಗಮಂಡಲಂ ಕ್ಷೇತ್ರದ ಜೆಎಸ್ ಎಸ್ ಕಾಲೇಜು, ಬಾಂಬೆ ಕೇಸ್ ವಾರ್ಡ್, ಅಗ್ರಗಾರಂ, ಕೋಡಪ್ಪಮಂದು, ಎಚ್ ಸಿ ಎಫ್ ಸೇರಿ ಬೋಟ್ ಹೌಸ್ ಗಳಲ್ಲಿ ಪ್ರಚಾರ ನಡೆಸಿದ ಸಚಿವರಾದ ಸೋಮಶೇಖರ್ ನೇತೃತ್ವದ ಬಿಜೆಪಿ ತಂಡವು ಬಳಿಕ ವಿವಿಧ ಮುಖಂಡರು, ರಾಜಕಾರಣಿಗಳನ್ನು ಭೇಟಿ ಮಾಡಿ ಮತಯಾಚನೆ ಹಾಗೂ ಮಾತುಕತೆಗಳನ್ನು ನಡೆಸಿತು. ಬಳಿಕ ಆದಿ ಕರ್ನಾಟಕ ಸಂಘ ಸೇರಿದಂತೆ ವಿವಧ ಸಂಘಟನೆಗಳನ್ನು ಭೇಟಿ ಮಾಡಿ ಪ್ರಚಾರ ನಡೆಸಲಾಯಿತು. 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ವಿ.ರಾಜೀವ್, ಬಿಜೆಪಿ ಮೈಸೂರು ನಗರಾಧ್ಯಕ್ಷರಾದ ಶ್ರೀವತ್ಸ, ಮೈಮುಲ್ ನಿರ್ದೇಶಕರಾದ ಅಶೋಕ್, ಬಿಜೆಪಿ ರಾಜ್ಯ ವಕ್ತಾರರಾದ ಎಂ.ಜಿ. ಮಹೇಶ್, ಮೈಸೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಪ್ರತಾಪ್, ನಂಜನಗೂಡು ತಾಲೂಕು ಬಿಜೆಪಿ ಅಧ್ಯಕ್ಷರಾದ ಶ್ರೀನಿವಾಸ ರೆಡ್ಡಿ, ಗುಂಡ್ಲುಪೇಟೆ ಬಿಜೆಪಿ ಮುಖಂಡರಾದ ಸುರೇಶ್ ಅವರು ಸೇರಿದಂತೆ ಮತ್ತಿತರ ಮುಖಂಡರು ಹಾಜರಿದ್ದರು.

click me!