ಲಂಕಾದಲ್ಲಿ ಏಕರೂಪ ಕಾನೂನು ಜಾರಿಗೆ ಸಿದ್ಧತೆ: ಭಾರತದಲ್ಲಿನ್ನೂ ವಿವಾದ!

By Kannadaprabha NewsFirst Published Oct 28, 2021, 7:24 AM IST
Highlights

* ರಾಷ್ಟ್ರೀಯ ಏಕತೆ, ಒಂದು ದೇಶ ಒಂದು ಕಾನೂನು ಜಾರಿಗೆ ಕಾರ್ಯಪಡೆ ರಚನೆ

* ಲಂಕಾದಲ್ಲಿ ಏಕರೂಪ ಕಾನೂನು ಜಾರಿಗೆ ಸಿದ್ಧತೆ!

* ಮುಂದಿನ ವರ್ಷದೊಳಗೆ ಕಾಯ್ದೆ ಅಂಗೀಕಾರ ಸಾಧ್ಯತೆ

* ಭಾರತದಲ್ಲಿನ್ನೂ ವಿವಾದ: ದ್ವೀಪರಾಷ್ಟ್ರದಲ್ಲಿ ಕ್ರಾಂತಿಕಾರಿ ನಿರ್ಧಾರ

* ಭರವಸೆ ಈಡೇರಿಸಿದ ರಾಜಪಕ್ಸೆ

ಕೊಲೊಂಬೋ/ನವದೆಹಲಿ(ಅ.28): ಏಕರೂಪದ ನಾಗರಿಕ ಸಂಹಿತೆ ಜಾರಿ (Uniform Civil Code) ವಿಷಯ ಭಾರತದಲ್ಲಿ ಇನ್ನೂ ಚರ್ಚೆ ಹಾಗೂ ವಿವಾದದ ಹಂತದಲ್ಲಿ ಇದ್ದರೆ, ನೆರೆಯ ಶ್ರೀಲಂಕಾ/(Sri Lanka) ಇಂತಹ ಕಾನೂನು ಜಾರಿಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ‘ಒಂದು ದೇಶ ಒಂದು ಕಾನೂನು’ ಕಾನೂನು ಜಾರಿಗಾಗಿ ಅಧ್ಯಕ್ಷ ಗೊಟಬೊಯಾ ರಾಜಪಕ್ಸೆ (Gotabaya Rajapaksa) ಅವರ ಸರ್ಕಾರ 13 ಸದಸ್ಯರ ಕಾರ್ಯಪಡೆಯೊಂದನ್ನು ರಚಿಸಿದೆ. ಈ ಮೂಲಕ 2019ರ ಚುನಾವಣೆ(Elections) ವೇಳೆ ತಮ್ಮ ಸರ್ಕಾರ ನೀಡಿದ್ದ ಭರವಸೆ ಈಡೇರಿಸಲು ಮುಂದಾಗಿದೆ.

ವಿಶೇಷವೆಂದರೆ ಈ ಕಾರ್ಯಪಡೆಯ ಮುಖ್ಯಸ್ಥರನ್ನಾಗಿ ಕಟ್ಟರ್‌ ಬೌದ್ಧ ಸನ್ಯಾಸಿ ಜ್ಞಾನಸಾರ ಬೋಡು ಬಾಲಸೇನಾ ಅವರನ್ನು ನೇಮಿಸಲಾಗಿದೆ. 2013ರಲ್ಲಿ ಲಂಕಾದಲ್ಲಿ ಮುಸ್ಲಿಮರ ವಿರುದ್ಧ ಬೌದ್ಧರು ನಡೆಸಿದ ಹಿಂಸಾಚಾರಕ್ಕೆ ಜ್ಞಾನಸಾರ ಪ್ರಮುಖ ಕಾರಣರಾಗಿದ್ದರು ಎನ್ನಲಾಗಿದೆ. ಅಲ್ಲದೆ ಮುಸ್ಲಿಮರ ವಿರುದ್ಧ ಅತ್ಯಂತ ಕಠೋರ ಧ್ವನಿಯಲ್ಲಿ ಮಾತನಾಡುವುದಕ್ಕೆ ಇವರು ಖ್ಯಾತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿರುವುದು ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ. 13 ಜನರ ಕಾರ್ಯಪಡೆಯಲ್ಲಿ ನಾಲ್ವರು ಮುಸ್ಲಿಂ ಮೌಲ್ವಿಗಳಿಗೂ ಸ್ಥಾನ ನೀಡಲಾಗಿದೆ. ಆದರೆ ತಮಿಳರಿಗೆ ಯಾವುದೇ ಸ್ಥಾನ ನೀಡಲಾಗಿಲ್ಲ. ಈ ಕಾರ್ಯಪಡೆ 2022 ಫೆ.28ರಂದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.

ಕಾನೂನು ಜಾರಿ ಏಕೆ?:

ಹಿಂದಿನಿಂದಲೂ ಲಂಕಾದಲ್ಲಿ ಬಹುಸಂಖ್ಯಾತ ಬೌದ್ಧರು ಮತ್ತು ಮುಸ್ಲಿಮರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಈ ನಡುವೆ 2019ರ ಚುನಾವಣೆ ವೇಳೆ ಬಹುಸಂಖ್ಯಾತ ಬೌದ್ಧ ಮತಗಳ ಮೇಲೆ ಕಣ್ಣಿಟ್ಟಿದ್ದ ರಾಜಪಕ್ಸೆ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಂದು ದೇಶ, ಒಂದೇ ಕಾನೂನು ಕಾನೂನು ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದರು. ಜೊತೆಗೆ ರಾಜಪಕ್ಸೆ ಸರ್ಕಾರಕ್ಕೆ ಬೆಂಬಲ ನೀಡಿರುವ ಹಲವು ಪಕ್ಷಗಳು, ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ಇರುವ ಕಾರಣ ಅವರು ಹೆಚ್ಚು ತೀವ್ರಗಾಮಿಗಳಾಗುತ್ತಿದ್ದಾರೆ. ಹೀಗಾಗಿ ಇಡೀ ದೇಶಕ್ಕೆ ಒಂದೇ ಕಾನೂನು ಜಾರಿಯಾಗಬೇಕೆಂದು ಒತ್ತಾಯಿಸಿದ್ದರು. ಅದರಲ್ಲೂ 2019ರಲ್ಲಿ ಈಸ್ಟರ್‌ ದಿನ ನಡೆದ ಸ್ಫೋಟ ಪ್ರಕರಣದಲ್ಲಿ 11 ಭಾರತೀಯರು ಸೇರಿ 270 ಜನರು ಇಸ್ಲಾಮಿಕ್‌ ಭಯೋತ್ಪಾದನಾ ಚಟುವಟಿಕೆಗೆ ಬಲಿಯಾದ ಬಳಿಕ ಇಂಥ ಕಾನೂನು ಜಾರಿಗೆ ಆಗ್ರಹ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಒಂದು ದೇಶ ಒಂದು ಕಾನೂನು ಕಾನೂನು ಜಾರಿಗೆ ಮುಂದಾಗಿದೆ.

ಜಾತಿ ಲೆಕ್ಕಾಚಾರ:

ಶ್ರೀಲಂಕಾ ಒಟ್ಟಾರೆ 2 ಕೋಟಿ ಜನಸಂಖ್ಯೆ ಹೊಂದಿದ್ದು, ಇವರಲ್ಲಿ ಶೇ.70ರಷ್ಟುಬೌದ್ದರು, ಶೇ.12.2 ಹಿಂದೂಗಳು, ಶೇ.9.7 ಮುಸ್ಲಿಮರು, ಶೇ.7.4 ಕ್ರೈಸ್ತರು ಇದ್ದಾರೆ

ಏನಿದು ಏಕರೂಪ ನಾಗರಿಕ ಸಂಹಿತೆ?

ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ದೇಶದಲ್ಲಿರುವ ಎಲ್ಲ ಧರ್ಮಗಳಿಗೂ ಸೇರಿದ ನಾಗರಿಕರಿಗೆ ಅನ್ವಯವಾಗುವ ಒಂದೇ ರೀತಿಯ ವೈಯಕ್ತಿಕ ಕಾನೂನು. ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ, ಉತ್ತರಾಧಿಕಾರಿ ನೇಮಕ ವಿಚಾರವಾಗಿ ಹಿಂದು, ಮುಸ್ಲಿಮರಲ್ಲಿ ಪ್ರತ್ಯೇಕ ವೈಯಕ್ತಿಕ ಕಾನೂನುಗಳಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಅಂತಹ ಎಲ್ಲ ಕಾಯ್ದೆಗಳೂ ರದ್ದಾಗಿ, ದೇಶಾದ್ಯಂತ ಎಲ್ಲ ಧರ್ಮೀಯರಿಗೂ ಒಂದೇ ಕಾಯ್ದೆ ಬರುತ್ತದೆ.

ಏಕರೂಪ ನಾಗರಿಕ ಸಂಹಿತೆ ತನ್ನಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ಆದೇಶ!

ಬದಲಾಗುತ್ತಿರುವ ಸಮಾಜಕ್ಕೆ ಅನುಗುಣವಾಗುವಂತೆ, ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿ ಮಾಡುವ ಅಗತ್ಯವಿದೆ ಎಂದು ದೆಹಲಿ ಹೈಕೋರ್ಟ್‌ ಪ್ರತಿಪಾದಿಸಿದೆ. ಅಲ್ಲದೆ ಈ ವಿಷಯವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಮೀನಾ ಸಮುದಾಯಕ್ಕೆ ಹಿಂದು ವಿವಾಹ ಕಾಯ್ದೆ- 1955ಯ ಅನ್ವಯಿಸುವಿಕೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಪ್ರತಿಭಾ ಎಂ ಸಿಂಗ್‌ ಅವರಿದ್ದ ಪೀಠ ಜು.7ರಂದು ಇಂಥದ್ದೊಂದು ಆದೇಶ ನೀಡಿದೆ.

click me!