ಕೇರಳದ ಮೊದಲ ಬುಡಕಟ್ಟು IAS ಅಧಿಕಾರಿ ಈಗ ಕಲ್ಲಿಕೋಟೆಯ ಸಹಾಯಕ ಕಲೆಕ್ಟರ್‌!

By Kannadaprabha NewsFirst Published May 6, 2020, 12:52 PM IST
Highlights

ಐಎಎಸ್‌ ಪಾಸ್‌ ಮಾಡಿದ ಕೇರಳದ ಮೊದಲ ಬುಡಕಟ್ಟು ಮಹಿಳೆ ಈಗ ಕಲ್ಲಿಕೋಟೆಯ ಸಹಾಯಕ ಕಲೆಕ್ಟರ್‌| 2018ರಲ್ಲಿ ಐಎಎಸ್‌ ಪಾಸಾಗಿ ಮಸೂರಿಯಲ್ಲಿ ತರಬೇತಿಯಲ್ಲಿದ್ದ ಶ್ರೀಧನ್ಯ

ಕಲ್ಲಿಕೋಟೆ(ಮೇ.06): ಅತೀ ಕಠಿಣ ಪರೀಕ್ಷೆ ಎನ್ನಲಾಗುವ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಪಾಸ್‌ ಮಾಡಿದ ಕೀರ್ತಿಗೆ ಭಾಜನರಾಗಿ ಐಎಎಸ್‌ ಅಧಿಕಾರಿಯಾಗಿದ್ದ ಶ್ರೀಧನ್ಯ ಸುರೇಶ್‌ ಅವರು ಮಂಗಳವಾರ ಕಲ್ಲಿಕೋಟೆ ಜಿಲ್ಲೆಯ ಉಪ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.

2018ರಲ್ಲಿ ಐಎಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಶ್ರೀಧನ್ಯ ಅವರು ಉತ್ತರಾಖಂಡ್‌ನ ಮಸ್ಸೂರಿಯಲ್ಲಿರುವ ಐಎಎಸ್‌ ಅಧಿಕಾರಿಗಳ ತರಬೇತಿ ಕೇಂದ್ರದಲ್ಲಿ ತರಬೇತಿಯಲ್ಲಿದ್ದರು. ತರಬೇತಿ ಪೂರ್ಣಗೊಂಡು ಅವರೀಗ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಹೆಮ್ಮೆಯ ಕನ್ನಡತಿ

ವಯನಾಡ್‌ನಲ್ಲಿರುವ ಪೊಳುಥನಾ ಪಂಚಾಯತ್‌ ಮೂಲದ ಕುರಿಚಿಯಾ ಸಮುದಾಯದ ಶ್ರೀಧನ್ಯ ಅವರು ಕಡುಬಡತನದಲ್ಲಿದ್ದರೂ, ತಮ್ಮ ಪ್ರೌಢ ಶಿಕ್ಷಣವನ್ನು ಮಲಯಾಳಂ ಮಾಧ್ಯಮದಲ್ಲೇ ಪೂರ್ಣಗೊಳಿಸಿದರು. ಆ ನಂತರ ಪ್ರಾಣಿ ಶಾಸ್ತ್ರದಲ್ಲಿ ಸ್ನಾತಕ್ಕೋತರ ಪದವಿ ಪೂರೈಸಿದರು. ಕೊನೆಗೆ, ತಮ್ಮ ಮಹತ್ವಾಕಾಂಕ್ಷೆಯಾದ ಐಎಎಸ್‌ ಪರೀಕ್ಷೆಯನ್ನು 3ನೇ ಪ್ರಯತ್ನದಲ್ಲಿ ಮಲಯಾಳಂನಲ್ಲೇ ಬರೆದು ಶಹಬ್ಬಾಸ್‌ ಎನ್ನಿಸಿಕೊಂಡಿದ್ದಾರೆ.

ವಿಶೇಷವೆಂದರೆ, ಐಎಎಸ್‌ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ತೇರ್ಗಡೆಯಾದ ಬಳಿಕ ಸಂದರ್ಶನಕ್ಕಾಗಿ ದೆಹಲಿಗೆ ಹೋಗಲು ಅವರ ಬಳಿ ಹಣವಿರಲಿಲ್ಲ. ಆಗ ತಮ್ಮ ಹಿತೈಷಿಗಳಿಂದ 40 ಸಾವಿರ ರು. ಪಡೆದು ದೆಹಲಿಗೆ ತೆರಳಿದ್ದರು.

ದರ್ಜಿಯ ಮಗ ಐಎಎಸ್ ಆದ ಕತೆ: ನಿರೀಶ್ ಹೇಳ್ತಾರೆ ದಿಗ್ವಿಜಯದ ರಹಸ್ಯ!

ರೋಲ್‌ ಮಾಡೆಲ್‌ ಜೊತೆಯೇ ಕೆಲಸ:

ಈ ಹಿಂದೆ ವಯನಾಡ್‌ನಲ್ಲಿ ಸರ್ಕಾರದ ಬುಡಕಟ್ಟು ಅಭಿವೃದ್ಧಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರಬೇಕಾದರೆ, ಆಗಿನ ಸಬ್‌ ಕಲೆಕ್ಟರ್‌ ಆಗಿದ್ದ ಸೀರಾಮ್‌ ಸಾಂಬಶಿವ ರಾವ್‌ ಅವರಿಗೆ ಜನರು ನೀಡುವ ಗೌರವ ಹಾಗೂ ಮನ್ನಣೆಯನ್ನು ಕಂಡು ತಾನು ಸಹ ಐಎಎಸ್‌ ಅಧಿಕಾರಿಯಾಗಬೇಕೆಂದು ಶ್ರೀಧನ್ಯ ತೀರ್ಮಾನಿಸಿದಳು. ಕುತೂಹಲಕಾರಿ ಸಂಗತಿಯೆಂದರೆ, ಇದೀಗ ಕಲ್ಲಿಕೋಟೆಯ ಜಿಲ್ಲಾಧಿಕಾರಿಯಾಗಿರುವ ರಾವ್‌ ಅವರ ಅಧೀನ ಅಧಿಕಾರಿಯಾಗಿ ಶ್ರೀಧನ್ಯ ಅವರು ಕಾರ್ಯ ನಿರ್ವಹಿಸಲಿದ್ದಾರೆ.

click me!