ಬೈಕ್‌ಗೆ ಡಿಕ್ಕಿ ಹೊಡೆದು ಸ್ಪೋರ್ಟ್ಸ್ ಕಾರು ಪರಾರಿ: 20 ಅಡಿ ಎತ್ತರಕ್ಕೆ ಹಾರಿ ಬಿದ್ದ ಬೌನ್ಸರ್ ತಾರಕ್‌ ರಾಮ್ ಸಾವು

Published : Jan 25, 2024, 03:54 PM ISTUpdated : Jan 25, 2024, 03:56 PM IST
 ಬೈಕ್‌ಗೆ ಡಿಕ್ಕಿ ಹೊಡೆದು ಸ್ಪೋರ್ಟ್ಸ್ ಕಾರು ಪರಾರಿ: 20 ಅಡಿ ಎತ್ತರಕ್ಕೆ ಹಾರಿ ಬಿದ್ದ ಬೌನ್ಸರ್ ತಾರಕ್‌ ರಾಮ್ ಸಾವು

ಸಾರಾಂಶ

ಪಬ್ ಹಾಗೂ ಹೊಟೇಲ್‌ನಲ್ಲಿ ಬೌನ್ಸರ್‌ ಆಗಿ ಕೆಲಸ ಮಾಡುತ್ತಿದ್ದ ತಾರಕ್ ರಾಮ್ ಎಂಬುವವರು ಹಿಟ್ & ರನ್‌ಗೆ ಬಲಿಯಾಗಿದ್ದಾರೆ. ನಸುಕಿನ ಜಾವ ಬೌನ್ಸರ್ ತಾರಕ ರಾಮ್ ಅವರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಹಿಂದಿನಿಂದ ವೇಗವಾಗಿ ಬಂದ ಸ್ಪೋರ್ಟ್ಸ್‌ ಕಾರೊಂದು ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಂದು ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌: ಪಬ್ ಹಾಗೂ ಹೊಟೇಲ್‌ನಲ್ಲಿ ಬೌನ್ಸರ್‌ ಆಗಿ ಕೆಲಸ ಮಾಡುತ್ತಿದ್ದ ತಾರಕ್ ರಾಮ್ ಎಂಬುವವರು ಹಿಟ್ & ರನ್‌ಗೆ ಬಲಿಯಾಗಿದ್ದಾರೆ. ನಸುಕಿನ ಜಾವ ಬೌನ್ಸರ್ ತಾರಕ ರಾಮ್ ಅವರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಹಿಂದಿನಿಂದ ವೇಗವಾಗಿ ಬಂದ ಸ್ಪೋರ್ಟ್ಸ್‌ ಕಾರೊಂದು ಡಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ತಾರಕ್ ರಾಮ್ ಅವರು 20 ಅಡಿ ಎತ್ತರಕ್ಕೆ ಹಾರಿ ಕೆಳಗೆ ಬಿದ್ದಿದ್ದಾರೆ ಎಂದು ಪ್ರತಕ್ಷದರ್ಶಿಗಳು ಹೇಳಿದ್ದಾರೆ. ಘಟನೆಯ ದೃಶ್ಯಾವಳಿಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ತಪ್ಪಿತಸ್ಥರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ಖಂಡಿಸಿ ತಾರಕ್ ರಾಮ್ ಕುಟುಂಬದವರು ಬಂಧುಗಳು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದು, ಆರೋಪಿಗಳನ್ನು ಸೆರೆ ಹಿಡಿದು ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.  

ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆಯುವ ವೇಳೆ ತಾರಕ್ ರಾಮ್ ಅವರು ತಮ್ಮ ಸಹೋದ್ಯೋಗಿಯನ್ನು ಹಿಂಬದಿ ಕೂರಿಸಿಕೊಂಡು ಬೈಕ್ ಚಲಾಯಿಸುತ್ತಿದ್ದರು.  ಈ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಾರಕ್ ರಾಮ್ ಅವರ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟರೆ, ಇವರ ಬೈಕ್‌ನಲ್ಲೇ ಪ್ರಯಾಣಿಸುತ್ತಿದ್ದ ರಾಜು ಎಂಬುವವರ ಸ್ಥಿತಿ ಗಂಭೀರವಾಗಿದೆ.

 

ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಈ ಭಯಾನಕ ಅಪಘಾತದ ದೃಶ್ಯಾವಳಿಗಳು ಸೆರೆಯಾಗಿದೆ,  ತಾರಕ್‌ ರಾಮ್ ಸಹೋದ್ಯೋಗಿ ರಾಜು ಜೊತೆ ಜ್ಯುಬಿಲಿ ಹಿಲ್ಸ್‌ನ ಪೆದ್ದಮ್ಮ ದೇಗುಲದ ಬಳಿ  ಬೈಕ್ ಚಲಾಯಿಸುತ್ತಿದ್ದಾಗ ನಸುಕಿನ ಜಾವ ಈ ದುರಂತ ಸಂಭವಿಸಿದೆ. ಘಟನೆ ಬಳಿಕ ಕಾರು ಚಾಲಕ ಎಸ್ಕೇಪ್ ಆಗಿದ್ದಾನೆ. ಕಾರು ಗುದ್ದಿದ ರಭಸಕ್ಕೆ 20 ಅಡಿ ಎತ್ತರಕ್ಕೆ ಹಾರಿದ ತಾರಕ್ ರಾಮ್ 100 ಮೀಟರ್ ದೂರ ಹೋಗಿ ಬಿದ್ದಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಜ್ಯುಬಿಲಿ ಹಿಲ್ ಪೊಲೀಸರು ಹಿಟ್ & ರನ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಡಿಕ್ಕಿ ಹೊಡೆದ ಈ ಸ್ಪೋರ್ಟ್ಸ್‌  ಕಾರಿನಲ್ಲಿ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಶೇಷ ತನಿಖಾ ತಂಡ ಸಿಸಿಟಿವಿ ಆಧರಿಸಿ ಪ್ರಕರಣದ ತನಿಖೆಗೆ ಮುಂದಾಗಿದೆ. 

ಘಟನೆ ನಡೆದು 12 ಗಂಟೆ ಕಳೆದರೂ ಆರೋಪಿಗಳ ಪತ್ತೆ ಮಾಡಿಲ್ಲ ಎಂದು ಆಕ್ರೋಶಗೊಂಡ ತಾರಕ್ ರಾಮ್ ಕುಟುಂಬದವರು ಜ್ಯುಬಿಲಿ ಹಿಲ್ಸ್ ಪೊಲೀಸ್ ಠಾಣೆ ಮುಂದೆ ತಾರಕ್ ರಾಮ್ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಮೃತ ತಾರಕ್ ರಾಮ್ ಅವರು ತಮ್ಮ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿದೆ. 

 

ಪೊಲೀಸರಿಗೆ ಇದುವರೆಗೆ ಡಿಕ್ಕಿ ಹೊಡೆದ ವಾಹನ ಯಾವುದು ಎಂದು ಪತ್ತೆ ಮಾಡಲಾಗಿಲ್ಲ, ಆದರೆ ಕೆಲ ವರದಿಗಳ ಪ್ರಕಾರ ಇದು ಕಪ್ಪು ಬಣ್ಣದ ಆಡಿ ಕಾರು ಎಂದು ತಿಳಿದು ಬಂದಿದ್ದು, ಹೀಗಾಗಿ ಇದು ಯಾರು ದೊಡ್ಡ ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿದ್ದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಸಿಸಿಟಿವಿ ದೃಶ್ಯಾವಳಿ ಇದ್ದರೂ ಕಾರನ್ನು ಗುರುತಿಸುವಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ಜನ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.  ತಾರಕ್ ರಾಮ್ ಅವರು ಕೇವಲ 2 ವರ್ಷದ ಹಿಂದೆ ಮದ್ವೆಯಾಗಿದ್ದು, 1 ತಿಂಗಳ ಮಗುವಿದೆ. 

ಈಗಷ್ಟೇ ಬಂದ ಮಾಹಿತಿ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಒಬ್ಬಳು ಯುವತಿ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಐವರನ್ನು ಬಂಧಿಸಿದ್ದಾರೆ. ಜೊತೆಗೆ ತಾತ್ಕಾಲಿಕ ರಿಜಿಸ್ಟ್ರೇಷನ್ ಆಗಿದ ಐಷಾರಾಮಿ ಕಾರನ್ನು ಕೂಡ ವಶಕ್ಕೆ ಪಡೆದಿದ್ದು, ಸ್ವಲ್ಪ ಹೊತ್ತಿನಲ್ಲಿ ಆರೋಪಿಗಳ ಹೆಸರನ್ನು ಪೊಲೀಸರು ಬಹಿರಂಗಪಡಿಸಲಿದ್ದಾರೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?