ಕೃಷಿ ಮಸೂದೆಯಿಂದ ವಿಪಕ್ಷದ ಕಪ್ಪುಹಣ ಮೂಲ ಬಂದ್: ಮೋದಿ ವಾಗ್ದಾಳಿ!

By Kannadaprabha News  |  First Published Sep 30, 2020, 7:57 AM IST

ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ| ಪ್ರತಿಪಕ್ಷಗಳಿಗೆ ದಲ್ಲಾಳಿಗಳ ಉದ್ಧಾರ ಬೇಕೇ ಹೊರತು ರೈತರದ್ದಲ್ಲ| ಕೃಷಿ ಮಸೂದೆಗಳಿಂದ ಪ್ರತಿಪಕ್ಷಗಳ ಇನ್ನೊಂದು ಕಪ್ಪುಹಣದ ಮೂಲ ಬಂದ್‌


ಡೆಹ್ರಾಡೂನ್‌(ಸೆ.30): ಪ್ರತಿಪಕ್ಷಗಳಿಗೆ ದಲ್ಲಾಳಿಗಳು ಉದ್ಧಾರವಾಗುವುದು ಬೇಕಿದೆಯೇ ಹೊರತು ರೈತರು ಉದ್ಧಾರವಾಗುವುದು ಬೇಕಿಲ್ಲ. ಆದ್ದರಿಂದಲೇ ರೈತರ ಬದುಕನ್ನು ಹಸನುಗೊಳಿಸುವ ಕೃಷಿ ಮಸೂದೆಗಳನ್ನು ವಿರೋಧಿಸುತ್ತಿವೆ. ಈ ಮಸೂದೆಯಿಂದಾಗಿ ಪ್ರತಿಪಕ್ಷಗಳಿಗೆ ಕಪ್ಪು ಹಣ ಬರುತ್ತಿದ್ದ ಇನ್ನೊಂದು ಮೂಲವೂ ಮುಚ್ಚಿಹೋಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀಕ್ಷ$್ಣ ವಾಗ್ದಾಳಿ ನಡೆಸಿದ್ದಾರೆ.

‘ಅವರು ರೈತರ ಸ್ವಾತಂತ್ರ್ಯವನ್ನೂ ವಿರೋಧಿಸುತ್ತಿದ್ದಾರೆ. ರೈತರ ಸಮಸ್ಯೆಗಳು ಹೀಗೇ ಯಾವಾಗಲೂ ಮುಂದುವರೆಯಬೇಕೆಂದು ಅವರು ಬಯಸುತ್ತಿದ್ದಾರೆ. ಕೃಷಿಕರು ಪೂಜಿಸುವ ಟ್ರಾಕ್ಟರ್‌ನಂತಹ ಸಲಕರಣೆಗಳನ್ನು ದೆಹಲಿಯಲ್ಲಿ ಸುಡುವ ಮೂಲಕ ಅವರು ರೈತರಿಗೆ ಅವಮಾನ ಮಾಡಿದ್ದಾರೆ. ಪ್ರತಿಪಕ್ಷಗಳಿಗೆ ರಾಜಕೀಯ ಮಾಡುವ ಒಂದೇ ಒಂದು ವಿಧಾನ ತಿಳಿದಿದೆ. ಅದು- ಪ್ರತಿಯೊಂದನ್ನೂ ವಿರೋಧಿಸುವುದು. ಜಿಎಸ್‌ಟಿ, ಒಂದು ರಾರ‍ಯಂಕ್‌ ಒಂದು ಪಿಂಚಣಿ, ರಫೇಲ್‌ ಒಪ್ಪಂದ, ಏಕತಾ ಪುತ್ಥಳಿ, ಬಡವರಿಗೆ ಶೇ.10ರಷ್ಟುಮೀಸಲು ಹೀಗೆ ಪ್ರತಿಯೊಂದನ್ನೂ ಅವರು ವಿರೋಧಿಸುತ್ತಾರೆ’ ಎಂದು ಕಾಂಗ್ರೆಸ್‌ ಪಕ್ಷದ ಹೆಸರು ಹೇಳದೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos

undefined

ಉತ್ತರಾಖಂಡದಲ್ಲಿ ನಮಾಮಿ ಗಂಗೆ ಯೋಜನೆಯಡಿಯಲ್ಲಿ ಆರಂಭಿಸಲಾದ ಆರು ಪ್ರಮುಖ ತ್ಯಾಜ್ಯ ಸ್ವಚ್ಛಗೊಳಿಸುವ ಘಟಕಗಳನ್ನು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಉದ್ಘಾಟಿಸಿ ಮಂಗಳವಾರ ಮಾತನಾಡಿದ ಅವರು, ನಾಲ್ಕು ತಲೆಮಾರುಗಳ ಕಾಲ ದೇಶವನ್ನಾಳಿ ಈಗ ಅಧಿಕಾರವಿಲ್ಲದೆ ಕುಳಿತಿರುವುದರ ಚಡಪಡಿಕೆ ಈ ವಿರೋಧದ ರೂಪದಲ್ಲಿ ವ್ಯಕ್ತವಾಗುತ್ತದೆ. ದೇಶವನ್ನು ಒಗ್ಗೂಡಿಸಲು ಶ್ರಮಿಸಿದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ರ ಪುತ್ಥಳಿಗೆ ಇಲ್ಲಿಯವರೆಗೆ ಆ ಪಕ್ಷದ ಒಬ್ಬನೇ ಒಬ್ಬ ನಾಯಕ ಭೇಟಿ ನೀಡಿಲ್ಲ. ಏಕೆ? ಏಕೆಂದರೆ ಅವರಿಗೆ ಅದನ್ನೂ ವಿರೋಧಿಸಬೇಕು. ಸುಪ್ರೀಂಕೋರ್ಟ್‌ನಲ್ಲಿ ರಾಮಮಂದಿರವನ್ನು ದಶಕಗಳ ಕಾಲ ವಿರೋಧಿಸಿದ ಅವರು ನಂತರ ಅಯೋಧ್ಯೆಯಲ್ಲಿ ಅಡಿಗಲ್ಲು ಹಾಕುವ ಸಮಾರಂಭಕ್ಕೂ ವಿರೋಧಿಸಿದರು. ಆ ಪಕ್ಷ ರೈತರ ಜೊತೆಗೂ ಇಲ್ಲ, ಯುವಕರ ಜೊತೆಗೂ ಇಲ್ಲ, ಸೈನಿಕರ ಜೊತೆಗೂ ಇಲ್ಲ. ಯೋಧರ ಶೌರ್ಯವನ್ನು ಶ್ಲಾಘಿಸುವ ಬದಲು ಸರ್ಜಿಕಲ್‌ ದಾಳಿಗೂ ಅವರು ಸಾಕ್ಷ್ಯ ಕೇಳಿದರು ಎಂದು ವಾಗ್ದಾಳಿ ನಡೆಸಿದರು.

ದಶಕಗಳ ಕಾಲ ರೈತರು ಎದುರಿಸುತ್ತಿದ್ದ ನಿರ್ಬಂಧಗಳನ್ನು ಕೃಷಿ ಮಸೂದೆಗಳ ಮೂಲಕ ತೆಗೆದುಹಾಕಿದ್ದೇವೆ. ಇನ್ನುಮುಂದೆ ರೈತರಿಗೆ ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತದೆ, ತಮಗೆ ಬೇಕೆಂದಲ್ಲಿ ಉತ್ಪನ್ನಗಳನ್ನು ಮಾರುವ ಸ್ವಾತಂತ್ರ್ಯವೂ ಸಿಗುತ್ತದೆ. ಇದನ್ನು ಪ್ರತಿಪಕ್ಷಗಳು ಏಕೆ ವಿರೋಧಿಸುತ್ತಿವೆ ಅಂದರೆ ಈ ಮಸೂದೆಗಳ ಮೂಲಕ ಅವರಿಗೆ ಬರುತ್ತಿದ್ದ ಕಪ್ಪು ಹಣದ ಇನ್ನೊಂದು ಮೂಲವೂ ಮುಚ್ಚಿಹೋಗುತ್ತಿದೆ ಎಂದು ಹೇಳಿದರು.

click me!