ಜಿಎಸ್‌ಟಿಗೆ ಹೆದರಿ ಯುಪಿಐ ಪೇಮೆಂಟ್‌ಗೆ ಹಿಂದೇಟು!

Kannadaprabha News   | Kannada Prabha
Published : Jul 14, 2025, 07:56 AM IST
UPI Payment

ಸಾರಾಂಶ

 ಸಣ್ಣ ಗಾತ್ರದ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್‌ಟಿ ತೆರಿಗೆ ನೋಟಿಸ್‌ಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ ಅನೇಕ ವ್ಯಾಪಾರಿಗಳು ಯುಪಿಐ ಮೂಲಕ ಹಣ ಸ್ವೀಕರಿಸುವುದಕ್ಕೆ ಹಿಂದೇಟು   ಹಾಕುತ್ತಿದ್ದಾರೆ.

  ಬೆಂಗಳೂರು :  ಬೇಕರಿ, ಕಾಂಡಿಮೆಂಟ್ಸ್, ಜ್ಯೂಸ್, ಚಹಾ ಅಂಗಡಿ, ಹಣ್ಣು-ತರಕಾರಿ ಅಂಗಡಿ ಸೇರಿದಂತೆ ವಿವಿಧ ಮಾದರಿಯ ಸಣ್ಣ ಗಾತ್ರದ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್‌ಟಿ ತೆರಿಗೆ ನೋಟಿಸ್‌ಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ ಅನೇಕ ವ್ಯಾಪಾರಿಗಳು ಯುಪಿಐ ಮೂಲಕ ಹಣ ಸ್ವೀಕರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಅಂಗಡಿಗಳಲ್ಲಿನ ಟೇಬಲ್ ಮೇಲೆ ರಾಜಾರೋಷವಾಗಿ ಕಾಣಿಸುತ್ತಿದ್ದ ಎರಡ್ಮೂರು ಕ್ಯೂಆರ್ ಕೋಡ್‌ಗಳು ಕಳೆದ ಒಂದೆರೆಡು ದಿನಗಳಿಂದ ಮರೆಯಾಗುತ್ತಿವೆ. ಗೋಡೆಗೆ ಅಂಟಿಸಿದ್ದ ಕ್ಯೂಆರ್ ಕೋಡ್‌ಗಳನ್ನು ವ್ಯಾಪಾರಿಗಳು ಮರೆ ಮಾಡುತ್ತಿದ್ದಾರೆ. ಗ್ರಾಹಕರಿಂದ ನಗದನ್ನು ನಿರೀಕ್ಷೆ ಮಾಡುತ್ತಿದ್ದು, ಯುಪಿಐ ಪೇಮೆಂಟ್ ಮಾಡುತ್ತೇವೆ ಎಂದು ಕೇಳುವ ಗ್ರಾಹಕರಿಗೆ ಮಾತ್ರ ಕ್ಯೂಆರ್ ಕೋಡ್ ನೀಡುತ್ತಿದ್ದಾರೆ.

ಲಕ್ಷಾಂತರ ರುಪಾಯಿತೆರಿಗೆ ಕಟ್ಟುವಂತೆ ನೋಟಿಸ್ ಬರುತ್ತಿರುವ ಕಾರಣ ಸಣ್ಣ ವ್ಯಾಪಾರಿಗಳಲ್ಲಿ ಆತಂಕ ಉಂಟಾಗಿರುವುದು ಸಹಜ. ದೈನಂದಿನ ವ್ಯಾಪಾರದಲ್ಲಿ ವಸ್ತುಗಳ ಖರೀದಿ ಇದ್ದೇ ಇರುತ್ತದೆ. ಹೀಗಾಗಿ, ವ್ಯಾಪಾರಿಗಳು ಅದನ್ನು ಪಾವತಿ ಮಾಡಿರುತ್ತಾರೆ. ಹೆಚ್ಚು ಹಣವನ್ನು ಕೂಡಿಟ್ಟಿರುವುದಿಲ್ಲ. ಯುಪಿಐನಿಂದಲೇ ಏಕಾಏಕಿ ಲಕ್ಷಾಂತರ ರು. ತೆರಿಗೆ ಎಂದಾಗ ಇದರ ಸಹವಾಸವೇ ಬೇಡ ಎನ್ನುವ ಮನಸ್ಥಿತಿ ಬಂದಿದೆ. ಹೀಗಾಗಿ, ಅನೇಕರು ಯುಪಿಐ ಸ್ವೀಕಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಸಣ್ಣ ವ್ಯಾಪಾರಿಯೊಬ್ಬರು ಹೇಳಿದರು.

ಬೇಕರಿ, ಕಾಂಡಿಮೆಂಟ್ಸ್‌ಗಳಲ್ಲಿ ಭಿನ್ನ ರೀತಿಯ ಜಿಎಸ್‌ಟಿ ಇರುವ ಸರಕುಗಳು ಇರುತ್ತವೆ. ಸಿಗರೇಟು, ಗುಟ್ಕಾ ಶೇ.28ರಷ್ಟು ಜಿಎಸ್‌ಟಿ ವ್ಯಾಪ್ತಿಗೆ ಬಂದರೆ, ಚಹಾ ಶೇ.5ರಷ್ಟು ಜಿಎಸ್‌ಟಿ ವ್ಯಾಪ್ತಿಗೆ ಬರುತ್ತದೆ. ಸಣ್ಣ ವ್ಯಾಪಾರಿಗಳು ಜಿಎಸ್‌ಟಿ ಕಾಂಪೋಸಿಷನ್ ಶುಲ್ಕವನ್ನು ಕಟ್ಟಬಹುದು. ಇದರಿಂದ ಬೃಹತ್ ತೆರಿಗೆ ನೋಟಿಸುಗಳಿಂದ ಪಾರಾಗಬಹುದು. ಹೊಟೇಲ್ ಉದ್ಯಮದಲ್ಲಿ ವ್ಯಾಪಾರಿಗಳಿಗೆ ಈ ಬಗ್ಗೆ ಸೂಕ್ತ ತರಬೇತಿ ನೀಡಲಾಗಿದೆ. ಆದರೆ, ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ತೆರಿಗೆ ಕುರಿತು ಜ್ಞಾನವಿಲ್ಲ. ಅದಕ್ಕೆ ತೆರಿಗೆ ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ಮಾಡಬೇಕು. ನೋಟಿಸ್ ಬಂದಾಗ ವ್ಯಾಪಾರಿಗಳು ಯುಪಿಐನಿಂದ ಹಿಂದೆ ಸರಿಯಲು ಯತ್ನಿಸುವುದು ಸಹಜ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದರು.

ತರಕಾರಿ ವ್ಯಾಪಾರಿಗಳಿಗೆ ಹೇಳಿಕೊಳ್ಳುವಂತಹ ಸಮಸ್ಯೆ ಆಗಿಲ್ಲ. ಆದರೆ, ಹಣ್ಣು, ಒಣಹಣ್ಣು, ಬಟ್ಟೆ ವ್ಯಾಪಾರಿಗಳಿಗೆ ಯುಪಿಐ ಮೂಲಕ ವ್ಯವಹರಿಸುವ ಸಂದರ್ಭದಲ್ಲಿ ಸಮಸ್ಯೆ ಎದುರಾಗುತ್ತಿದೆ. ಆದರೆ, ಅವರಿಗೆ ಯಾವುದು ತೆರಿಗೆ ವ್ಯಾಪ್ತಿಗೆ ಬರುತ್ತೇವೆ ಎಂಬ ಮಾಹಿತಿ ಸಿಗುತ್ತಿಲ್ಲ. ಈ ಕುರಿತು ವ್ಯಾಪಾರಸ್ಥರು ಸಭೆ ನಡೆಸುತ್ತೇವೆ. ಬಳಿಕ ಈ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಯಾವುದಾದರೂ ವ್ಯಾಪಾರಿಗಳಿಗೆ ತೊಂದರೆ ಉಂಟಾದರೆ ಸಂಘಟನೆಯ ಗಮನಕ್ಕೆ ತರಬಹುದು ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಡಾ.ಸಿ.ಇ. ರಂಗಸ್ವಾಮಿ ತಿಳಿಸಿದ್ದಾರೆ.

ಶೇ.90ರಷ್ಟು ಆನ್ಲೈನ್‌ ಪೇಮೆಂಟ್

ಕೋವಿಡ್ ವೇಳೆ ಯುಪಿಐ ಪೇಮೆಂಟ್ ವೇಗ ಪಡೆಯಿತು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ನಗದು ಮೀರಿ ಯುಪಿಐ ಬಳಕೆಯಲ್ಲಿದೆ. ಬೆಂಗಳೂರು ನಗರದಲ್ಲಿ ವಿಶೇಷವಾಗಿ ಯುಪಿಐ ಪೇಮೆಂಟ್ ಅತ್ಯಂತ ಜನಪ್ರಿಯವಾಗಿದೆ. ಸಣ್ಣ ಅಂಗಡಿಗಳಲ್ಲೂ ಕೆಲವೆಡೆ ಶೇ.90ರಷ್ಟು ಯುಪಿಐ ಮೂಲಕ ಪೇಮೆಂಟ್ ಸ್ವೀಕಾರವಾದರೆ, ನಗದು ಶೇ.10ರಷ್ಟು ಮಾತ್ರ ಇದೆ. ಜಿಎಸ್‌ಟಿ ಕುರಿತು ತಲೆಕೆಡಿಸಿಕೊಳ್ಳದ ಸಣ್ಣ ವ್ಯಾಪಾರಿಗಳು ವೈಯಕ್ತಿಕ ಬಳಕೆಯ ಬೇರೆ ಬೇರೆ ಎಸ್‌ಬಿ ಖಾತೆಗಳಲ್ಲಿ ಹಣ ಸ್ವೀಕರಿಸುತ್ತಿದ್ದಾರೆ.

ನೋಂದಣಿ ಮಾಡಿಕೊಳ್ಳದೇ ನಿರ್ಲಕ್ಷ್ಯ

ಜಿಎಸ್‌ಟಿ ನೋಂದಣಿ ಇಲ್ಲದೇ, ತೆರಿಗೆ ವ್ಯಾಪ್ತಿಗೆ ಬರುವಷ್ಟು ವಹಿವಾಟು ನಡೆಯುತ್ತಿದೆ ಎಂದು ಗೊತ್ತಿದ್ದರೂ ಅನೇಕ ಸಣ್ಣ ವ್ಯಾಪಾರಿಗಳು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹ ವ್ಯಾಪಾರಿಗಳಿಗೆ ಐಟಿ ಇಲಾಖೆ ನೋಟಿಸ್‌ಗಳನ್ನು ಜಾರಿ ಮಾಡುತ್ತಿದೆ ಎಂದು ಈ ಬೆಳವಣಿಗೆಗಳ ಕುರಿತು ಮಾಹಿತಿ ಹೊಂದಿರುವ ಅಧಿಕಾರಿ ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್