
ಬಿಕಾನೇರ್: ‘ಮರುಭೂಮಿಯ ಹಡಗು’ ಎಂದೇ ಕರೆಯಲ್ಪಡುವ ಒಂಟೆಗಳನ್ನು ಇಷ್ಟು ದಿನ ಸರಕು ಸಾಗಾಣೆ, ಮಾಂಸಕ್ಕಾಗಿ ಬಳಸಲಾಗುತ್ತಿತ್ತು. ಆದರೆ ಒಂಟೆಯ ಒಂದು ಹನಿ ಕಣ್ಣೀರು 26 ಹಾವಿನ ವಿಷ ತಟಸ್ಥಗೊಳಿಸುವ ಶಕ್ತಿ ಹೊಂದಿದೆ ಎಂಬ ಅಚ್ಚರಿಯ ವಿಷಯವನ್ನು ಬಿಕಾನೇರ್‌ನಲ್ಲಿರುವ ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರ ನಡೆಸಿದ ಅಧ್ಯಯನ ಬಹಿರಂಗಪಡಿಸಿದೆ.
ಸಂಶೋಧಕರು ಒಂಟೆಗಳಿಗೆ ಎಕಿಸ್ ಕ್ಯಾರಿನಾಟಸ್ ಸೋಚುರೆಕಿ ಎಂಬ ಅತ್ಯಂತ ವಿಷಕಾರಿ ಹಾವಿನ ವಿಷ ಪ್ರಯೋಗಿಸಿ ಅಧ್ಯಯನ ನಡೆಸಿದ್ದರು. ಈ ವೇಳೆ ಒಂಟೆಯ ಕಣ್ಣೀರು ಮತ್ತು ರಕ್ತದಿಂದ ಹೊರತೆಗೆಯಲಾದ ಪ್ರತಿಕಾಯ (ಆ್ಯಂಟಿಬಾಡಿ)ಗಳು ವಿಷದ ಮಾರಕ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸುತ್ತವೆ ಎಂಬುದು ಸಾಬೀತಾಗಿದೆ. ಇದುವರೆಗೆ ಬಳಸುತ್ತಿದ್ದ ಕುದುರೆಯ ಪ್ರತಿಕಾಯ ಚಿಕಿತ್ಸೆಗಿಂತ, ಒಂಟೆಯ ಪ್ರತಿಕಾಯಗಳು ಕಡಿಮೆ ಅಲರ್ಜಿಯನ್ನು ಉಂಟುಮಾಡುತ್ತವೆ ಮತ್ತು ಕಡಿಮೆ ದರದಲ್ಲಿ ಲಭ್ಯವಾಗುತ್ತವೆ ಎನ್ನಲಾಗಿದೆ.
ಅಂದಾಜಿನ ಪ್ರಕಾರ, ರೈತರು ಪ್ರತಿ ಒಂಟೆಯ ಕಣ್ಣೀರು ಮತ್ತು ರಕ್ತದಿಂದ ತಿಂಗಳಿಗೆ ಹೆಚ್ಚುವರಿ 5-10 ಸಾವಿರ ರು. ಆದಾಯ ಪಡೆಯಬಹುದಾಗಿದೆ.
ಮ್ಯಾನ್ಮಾರ್‌ನ 2 ಬಣಗಳ ಸಂಘರ್ಷ: ಮಿಜೋರಾಂಗೆ ಸ್ಥಳೀಯರ ಪಲಾಯನ
ಐಜ್ವಾಲ್: ನೆರೆಯ ದೇಶ ಮ್ಯಾನ್ಮಾರ್‌ನ 2 ಸಂಘಟನೆಗಳ ನಡುವಿನ ಸಂಘರ್ಷದಿಂದಾಗಿ ಮ್ಯಾನ್ಮಾರ್ ಜನರು ಮಿಜೋರಾಂನ ಚಾಂಫೈ ಜಿಲ್ಲೆಗೆ ವಲಸೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮ್ಯಾನ್ಮಾರ್‌ನ ಖವ್ಮಾವಿಯಲ್ಲಿ ಚಿನ್ ರಾಷ್ಟ್ರೀಯ ರಕ್ಷಣಾ ಪಡೆ (ಸಿಎನ್‌ಡಿಎಫ್) ಮತ್ತು ಚಿನ್ಲ್ಯಾಂಡ್ ರಕ್ಷಣಾ ಪಡೆ (ಸಿಡಿಎಫ್) - ಹುವಾಲ್ಂಗೋರಾಮ್ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಮ್ಯಾನ್ಮಾರ್‌ನ ಖವ್ಮಾವಿ ಮತ್ತು ಭಾರತದ ಜೋಖಾವ್ಥರ್ ಗ್ರಾಮಗಳು ಟಿಯಾವು ನದಿಯಿಂದ ಬೇರ್ಪಟ್ಟಿವೆ. ಸಂಘರ್ಷದಿಂದಾಗಿ ಖವ್ಮಾವಿ ನಿವಾಸಿಗಳು ಚಾಂಫೈನ ಜೋಖಾವ್ಥರ್ ಗ್ರಾಮಕ್ಕೆ ಪಲಾಯನ ಮಾಡುತ್ತಿದ್ದಾರೆ. ಭಾರತಕ್ಕೆ ಪಲಾಯನ ಮಾಡುವಾಗ ಟಿಯಾವು ನದಿಯಲ್ಲಿ ಒಬ್ಬ ವ್ಯಕ್ತಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಎನ್‌ಡಿಎಫ್ ಮತ್ತು ಸಿಡಿಎಫ್, ಎರಡೂ ಗುಂಪುಗಳ ಕಾರ್ಯಕರ್ತರು ಒಂದೇ ಝೋ ಜನಾಂಗೀಯ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಖವ್ಮಾವಿ ಪ್ರದೇಶದ ನಿಯಂತ್ರಣಕ್ಕಾಗಿ ಎರಡೂ ಸಂಘಟನೆಗಳು ಕಳೆದ ಕೆಲವು ದಿನಗಳಿಂದ ಹೋರಾಡುತ್ತಿವೆ.
ಮಹಾರಾಷ್ಟ್ರದಲ್ಲೂ ಹಿಂದಿ ವಿರುದ್ಧ ಸುಂಟರಗಾಳಿ: ಸ್ಟಾಲಿನ್
ಚೆನ್ನೈ: ‘ಡಿಎಂಕೆ ಮತ್ತು ತಮಿಳುನಾಡಿನ ಜನರು ನಡೆಸುತ್ತಿರುವ ಹಿಂದಿ ಹೇರಿಕೆ ವಿರುದ್ಧದ ಯುದ್ಧವು ಗಡಿಗಳನ್ನು ಮೀರಿ ಮಹಾರಾಷ್ಟ್ರದಲ್ಲಿಯೂ ಈಗ ಸುಂಟರಗಾಳಿಯಂತೆ ಬೀಸುತ್ತಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಹೇಳಿದ್ದಾರೆ.ಮಹಾರಾಷ್ಟ್ರ ಸರ್ಕಾರದ ತ್ರಿಭಾಷಾ ಸೂತ್ರದ ವಿರುದ್ಧ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶನಿವಾರ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ವಿಜಯೋತ್ಸವ ಹಮ್ಮಿಕೊಂಡಿದ್ದರು. ಆ ಕಾರ್ಯಕ್ರಮದ ಬೆನ್ನಲ್ಲೆ, ಇತ್ತ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ಹಿಂದಿ ವಿರುದ್ಧ ಮಹಾರಾಷ್ಟ್ರ ನಾಯಕರ ಹೋರಾಟವನ್ನು ಶ್ಲಾಘಿಸಿದ್ದಾರೆ.
‘ತಮಿಳುನಾಡಿನಲ್ಲಿ ಹಿಂದಿಯನ್ನು 3ನೇ ಭಾಷೆಯಾಗಿ ಕಲಿಸಿದರೆ ಮಾತ್ರ ಹಣವನ್ನು ಹಂಚಿಕೆ ಮಾಡುವುದಾಗಿ ಕಾನೂನುಬಾಹಿರ ಮತ್ತು ಅರಾಜಕವಾಗಿ ವರ್ತಿಸುತ್ತಿದ್ದ ಬಿಜೆಪಿ, ತನ್ನದೇ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಜನರ ದಂಗೆಗೆ ಹೆದರಿ 2ನೇ ಬಾರಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ’ ಎಂದು ಟೀಕಿಸಿದರು.‘ತಮಿಳುನಾಡಿಗೆ ಹಣ ಹಂಚಿಕೆಯಲ್ಲಿ ವಂಚಿಸುವ ಬಿಜೆಪಿಯ ದುರಹಂಕಾರ ಮುಂದುವರಿಯಲು ನಾವು ಬಿಡುವುದಿಲ್ಲ. ಬಿಜೆಪಿ ಈ ದ್ರೋಹವನ್ನು ನಿಲ್ಲಿಸದಿದ್ದರೆ, ಅವರಿಗೆ ಮತ್ತೊಮ್ಮೆ ಮರೆಯಲಾಗದ ಪಾಠ ಕಲಿಸುತ್ತೇವೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ