
ನವದೆಹಲಿ: ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ಐಎಸ್‌ಎಸ್)ಗೆ ತೆರಳಿರುವ ಭಾರತೀಯ ಶುಭಾಂಶು ಶುಕ್ಲಾ ಸೇರಿ 4 ಗಗನಯಾತ್ರಿಗಳು ಜು.14ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗುರುವಾರ ಮಾಹಿತಿ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ನಾಸಾ ‘ಐಎಸ್‌ಎಸ್‌ನ ಬೆಳವಣಿಗೆಯನ್ನು ನಾವು ಗಮನಿಸುತ್ತಿದ್ದೇವೆ. ಜು.14ರಂದು ಅನ್‌ಡಾಕಿಂಗ್‌ಗೆ ನಾವು ದಿನಾಂಕ ನಿಗದಿ ಮಾಡಿದ್ದೇವೆ’ ಎಂದು ಹೇಳಿದೆ. ಈ ಹಿಂದಿನ ಯೋಜನೆಯಂತೆ14 ದಿನಗಳ ಬಳಿಕ, ಅಂದರೆ ಜು.10ರಂದು ಅವರು ಮರಳಬೇಕಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಮರಳುವಿಕೆ ಪ್ರಕ್ರಿಯೆ ಮುಂದೂಡಲಾಗಿತ್ತು.
230 ಸೂರ್ಯೋದಯಕ್ಕೆ ಸಾಕ್ಷಿ:
ಜು.26ರಂದು ಐಎಸ್‌ಎಸ್ ತಲುಪಿರುವ ಗಗನಯಾತ್ರಿಗಳು 2 ವಾರದಲ್ಲಿ ಬಾಹ್ಯಾಕಾಶದಲ್ಲಿ ಸುಮಾರು 100 ಲಕ್ಷ ಕಿ.ಮೀ. ಪ್ರಯಾಣಿಸಿ, ಬರೋಬ್ಬರಿ 230 ಸೂರ್ಯೋದಯಗಳನ್ನು ಕಂಡಿದ್ದಾರೆ. ಇದರರ್ಥ, ಭೂಮಿಯಿಂದ 250 ಮೈಲು ಮೇಲಿರುವ ಅವರು, ಈವರೆಗೆ 230 ಬಾರಿ ಭೂಮಿಗೆ ಪ್ರದಕ್ಷಿಣೆ ಹಾಕಿದ್ದಾರೆ. ಇದರ ಅದ್ಭುತ ಫೋಟೋ, ವಿಡಿಯೋಗಳನ್ನೂ ಸೆರೆಹಿಡಿದು, ಹಂಚಿಕೊಂಡಿದ್ದಾರೆ.
ಅಂತರಿಕ್ಷದಲ್ಲಿ ಧಾರವಾಡದ ಹೆಸರು, ಮೆಂತ್ಯ ಬೆಳೆದ ಶುಭಾಂಶು ಶುಕ್ಲಾ
ನವದೆಹಲಿ : ಬಾಹ್ಯಾಕಾಶ ಪ್ರಯಾಣದ ಅಂತಿಮ ಚರಣದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷದಲ್ಲಿ ಧಾರವಾಡ ವಿಜ್ಞಾನಿಗಳ ಸಂಶೋಧನೆಯ ಭಾಗವಾಗಿ ಹೆಸರು ಮತ್ತು ಮೆಂತ್ಯ ಬೀಜಗಳ ಕೃಷಿಯ ಸಂಶೋಧನೆ ಮಾಡಿದ್ದಾರೆ.
ವಿಶೇಷ ಗಾಜಿನ ತಟ್ಟೆಯಲ್ಲಿ ಚಿಗುರೊಡೆದ ಮೆಂತೆ ಮತ್ತು ಹೆಸರು ಬೀಜಗಳು ಹಾಗೂ ಅವುಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿನ ಶೀತಲಗ್ರಹದಲ್ಲಿ ಸಂಗ್ರಹಿಸಿಡುವ ಚಿತ್ರ ತೆಗೆದು ಸಂಭ್ರಮಿಸಿದ್ದಾರೆ. ಗುರುತ್ವರಹಿತ ಪ್ರದೇಶದಲ್ಲಿ ಕಾಳುಗಳ ಮೊಳಕೆಯೊಡೆಯುವಿಕೆ ಮತ್ತು ಗಿಡದ ಬೆಳವಣಿಗೆ ಮೇಲೆ ಅದು ಯಾವ ಪರಿಣಾಮ ಬೀರುತ್ತದೆ ಎಂಬುದು ಈ ಪ್ರಯೋಗದ ಉದ್ದೇಶ.
ಬೀಜಗಳು ಮೊಳಕೆಯೊಡೆಯುವ ಸಂಶೋಧನೆಯನ್ನು ಧಾರವಾಡದ ಕೃಷಿ ವಿವಿಯ ರವಿಕುಮಾರ್ ಹೊಸಮನಿ ಮತ್ತು ಧಾರವಾಡದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸುಧೀರ್ ಸಿದ್ದಪುರೆಡ್ಡಿ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಮೊಳಕೆಯೊಡೆದ ಈ ಕಾಳುಗಳನ್ನು ಭೂಮಿಗೆ ವಾಪಸ್ ತಂದು ನೆಡುವ ಉದ್ದೇಶವಿದ್ದು, ಈ ಮೂಲಕ ಹಲವು ತಲೆಮಾರುಗಳ ಕಾಲ ಅವುಗಳ ಜೆನೆಟಿಕ್ಸ್ ಬದಲಾವಣೆ, ಸೂಕ್ಷ್ಮಾಣುಜೀವಿ ಪರಿಸರ ವ್ಯವಸ್ಥೆ ಮತ್ತು ಪೌಷ್ಟಿಕಾಂಶಗಳನ್ನು ಪರಿಶೀಲಿಸಲಾಗುವುದು ಎಂದು ಆಕ್ಸಿಯೋಂ ಸ್ಪೇಸ್ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ