
ಮುಂಬೈ (ಫೆ.06) : ಗುರುವಾರವಷ್ಟೇ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಕಾಂಗ್ರೆಸ್‌ನ ಸಕೋಲಿ ಕ್ಷೇತ್ರದ ಶಾಸಕ ನಾನಾ ಪಟೋಲೆ ಅವರು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಇದೇ ವೇಳೆ ಪ್ರಣತಿ ಶಿಂಧೆ ಸೇರಿದಂತೆ 6 ಮುಖಂಡರನ್ನು ಕಾರ್ಯಾಧ್ಯಕ್ಷರನ್ನಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ನೇಮಕ ಮಾಡಿದ್ದಾರೆ.
ಆದರೆ, ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ನಾನಾ ಪಟೋಲೆ ಅವರನ್ನು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿಕ ಕಾಂಗ್ರೆಸ್ ನಿಲುವಿಗೆ ಮಹಾವಿಕಾಸ್ ಅಘಾಡಿ ಸರ್ಕಾರದ ಮಿತ್ರ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ಅಸಮಾಧಾನ ವ್ಯಕ್ತಪಡಿಸಿವೆ.
ನಲಪಾಡ್‌ಗೆ ಬಿಗ್ ಶಾಕ್: ಚುನಾವಣೆಯಲ್ಲಿ ಗೆದ್ದರೂ ಒಲಿಯಲಿಲ್ಲ ಯುವ ಅಧ್ಯಕ್ಷ ಪಟ್ಟ ...
ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನೆ ಸಂಸದ ಸಂಜಯ್ ರಾವುತ್ ಅವರು, ‘ಮಹಾ ವಿಕಾಸ್ ಅಘಾಡಿ ಸರ್ಕಾರವು ಸುಲಲಿತವಾಗಿ ನಡೆಯುತ್ತಿತ್ತು. ಬಜೆಟ್ ಮಂಡನೆಯಂಥ ಹೊತ್ತಿನಲ್ಲಿ ಕಾಂಗ್ರೆಸ್ ಸ್ಪೀಕರ್‌ರಿಂದ ರಾಜೀನಾಮೆ ಕೊಡಿಸುವುದು ಬೇಡವಾಗಿತ್ತು ಎಂಬುದು ಮುಖ್ಯಮಂತ್ರಿಗಳ ನಿಲುವು’ ಎಂದಿದ್ದಾರೆ.
ಇದೀಗ ಸ್ಪೀಕರ್ ಹುದ್ದೆಗೆ ಚುನಾವಣೆ ಅನಿವಾರ್ಯವಾಗಲಿದ್ದು, ಇದರಿಂದ ಮೂರು ಪಕ್ಷಗಳಲ್ಲೂ ಅಸಮಾಧಾನ ಭುಗಿಲೇಳುವ ಭೀತಿ ಎದುರಾಗಿದೆ.
ಮತ್ತೊಂದೆಡೆ ಸರ್ಕಾರದಲ್ಲಿ ಎನ್‌ಸಿಪಿಗೆ ಇರುವಂತೆ ಉಪ ಮುಖ್ಯಮಂತ್ರಿ ಸ್ಥಾನವನ್ನು ತನಗೂ ನೀಡಬೇಕು ಎಂಬುದು ಕಾಂಗ್ರೆಸ್‌ನ ಬೇಡಿಕೆ. ಇದೇ ಕಾರಣಕ್ಕೆ ಪಟೋಲೆ ಅವರಿಂದ ಸ್ಪೀಕರ್ ಹುದ್ದೆಗೆ ರಾಜೀನಾಮೆ ಕೊಡಿಸಲಾಗಿದೆ ಎಂಬ ವಾದಗಳು ನಡೆಯುತ್ತಿವೆ. ಆದರೆ ಈ ಹಿಂದೆಯೇ ತನಗೆ ಡಿಸಿಎಂ ಸ್ಥಾನ ಬೇಡವೆಂದು ಕಾಂಗ್ರೆಸ್ ಹೇಳಿದೆ ಎಂದು ಎನ್‌ಸಿಪಿ ತಿಳಿಸಿದೆ.
ಜೊತೆಗೆ ಮುಂದಿನ ಸ್ಪೀಕರ್ ಹುದ್ದೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಪುನಃಶ್ಚೇತನವೇ ಮುಖ್ಯ ಗುರಿ: ಪಟೋಲೆ
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷರಾದ ಬೆನ್ನಲ್ಲೇ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪತಾಕೆ ಹಾರಿಸುವುದೇ ತಮ್ಮ ಮುಖ್ಯ ಗುರಿ ಎಂದು ನಾನಾ ಪಟೋಲೆ ಅವರು ತಿಳಿಸಿದ್ದಾರೆ. ನನ್ನ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಪುನಃ ನಂ.1 ಮಾಡುತ್ತೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ