ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ 121 ಮಂದಿ ಸಾವಿಗೆ ಕಾರಣರಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಗುರುವಾರ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಹಾಥ್ರಸ್ (ಜು.05): ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ 121 ಮಂದಿ ಸಾವಿಗೆ ಕಾರಣರಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಗುರುವಾರ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಭೋಲೆ ಬಾಬಾನಿಗಾಗಿ ಪೊಲೀಸರು ಮೈನ್‌ಪುರಿಯಲ್ಲಿರುವ ಆಶ್ರಮವನ್ನು ತಪಾಸಣೆ ಮಾಡಿದ್ದಾರೆ. ಆದರೆ ಆತ ಎಲ್ಲಿಯೂ ಪತ್ತೆಯಾಗಿಲ್ಲ.
ಸುದ್ದಿಗಾರರೊಂದಿಗೆ ಮಾತನಾಡಿದ ಇನ್ಸ್‌ಪೆಕ್ಟರ್ ಜನರಲ್ ಶಲಭ್ ಮಾಥುರ್, ಭೋಲೆ ಬಾಬಾ ಅವರ ಸತ್ಸಂಗದಲ್ಲಿ ಭೋಲೆ ಬಾಬಾ ಅವರ ಸೇವಕರಾಗಿ ಕೆಲಸ ಮಾಡುವ ಆರು ಮಂದಿಯನ್ನು ಬಂಧಿಸಲಾಗಿದೆ. ಆದರೆ ಕಾರ್ಯಕ್ರಮದ ಸಂಘಟಕ ಮತ್ತು ಸೇವಾದಾರ ದೇವಪ್ರಕಾಶ್ ಮಧುಕರ್ ತಪ್ಪಿಸಿಕೊಂಡಿದ್ದಾನೆ. ಆತನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದ್ದು, ಆತನ ಸುಳಿವು ನೀಡಿದವರಿಗೆ 1 ಲಕ್ಷ ರು. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
ಕಾಲ್ತುಳಿತ ಸಮಾಜಘಾತಕ ಶಕ್ತಿಗಳ ಕೃತ್ಯ: 121 ಭಕ್ತರ ಬಲಿಪಡೆದ ಭೀಕರ ಕಾಲ್ತುಳಿತ ಘಟನೆಯ ಹೊಣೆ ಹೊರಲು ನಿರಾಕರಿಸಿರುವ ವಿವಾದಾತ್ಮಕ ಧರ್ಮಗುರು ಭೋಲೆ ಬಾಬಾ, ‘ಇದು ನಾನು ಸತ್ಸಂಗ ಮುಗಿಸಿ ತೆರಳಿದ ನಂತರ ಸಂಭವಿಸಿದ ಘಟನೆ. ಸಮಾಜಘಾತಕ ಶಕ್ತಿಗಳ ಕೃತ್ಯ ಆಗಿದ್ದು, ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ’ ಎಂದು ಘೋಷಿಸಿದ್ದಾನೆ.
ಪ್ರಧಾನಿ ಮೋದಿ, ಅನುರಾಗ್ ವಿರುದ್ಧ ಸ್ಪೀಕರ್‌ಗೆ ಕಾಂಗ್ರೆಸ್ ದೂರು
ಅಲ್ಲದೆ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವುದಾಗಿಯೂ ಆತ ಹೇಳಿದ್ದಾನೆ. ಭೋಲೆ ಬಾಬಾ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಬದಲಾಗಿ ಅವರ ಭಕ್ತನಾದ ಕಾರ್ಯಕ್ರಮ ಸಂಘಟಕ, ಸೇವಾದಾರ ದೇವಪ್ರಕಾಶ್ ಮಧುಕರ್ ಮತ್ತು ಇತರ ಸಂಘಟಕರ ಮೇಲೆ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಎಲ್ಲೂ ಕಾಣಿಸಿಕೊಳ್ಳದ ಬಾಬಾ, ಆಶ್ರಮದಲ್ಲಿದ್ದಾನೋ ಅಥವಾ ಪರಾರಿ ಆಗಿದ್ದಾನೋ ಯಾವುದೇ ಮಾಹಿತಿ ಇಲ್ಲ.