
ನವದೆಹಲಿ (ಏ.30): ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಧ್ಯಕ್ಷತೆಯಲ್ಲಿ ಬುಧವಾರ ನವದೆಹಲಿಯಲ್ಲಿ ಭದ್ರತಾ ಸಂಪುಟ ಸಮಿತಿಯ ಪ್ರಮುಖ ಸಭೆ ನಡೆಯಿತು. ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ನಲ್ಲಿ 25 ಪ್ರವಾಸಿಗರು ಹಾಗೂ ಒಬ್ಬ ಕಾಶ್ಮೀರಿ ನಾಗರೀಕರನ್ನು ಉಗ್ರರು ದಾರುಣವಾಗಿ ಹತ್ಯೆ ಮಾಡಿದ ಬಳಿಕ ನಡೆದ 2ನೇ ಸಿಸಿಎಸ್ ಸಭೆ ಇದಾಗಿತ್ತು.
ಪ್ರಧಾನಿ ಮೋದಿಯವರ 7, ಲೋಕ ಕಲ್ಯಾಣ್ ಮಾರ್ಗ ನಿವಾಸದಲ್ಲಿ ನಡೆದ ಸಭೆಯ ನಂತರ ಭದ್ರತಾ ಸಂಸ್ಥೆಗಳಿಗೆ ಪ್ರಮುಖ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಏಜೆನ್ಸಿಗಳಿಗೆ ರವಾನಿಸಲಾದ ಪ್ರಮುಖ ಸಂದೇಶಗಳಲ್ಲಿ ಒಂದು "ಪಹಲ್ಗಾಮ್ ಭಯೋತ್ಪಾದಕರನ್ನು ಜೀವಂತವಾಗಿ ಹಿಡಿಯಿರಿ" ಎನ್ನುವುದಾಗಿದೆ.
ಬೈಸರನ್ ಹತ್ಯಾಕಾಂಡದ ಸತ್ಯವನ್ನು ಬಹಿರಂಗಪಡಿಸುವುದು ಈ ಸೂಚನೆಗೆ ಕಾರಣ ಎಂದು ಮೂಲಗಳು ಹೇಳುತ್ತವೆ. ದಾಳಿಯಲ್ಲಿ ಪಾಕಿಸ್ತಾನದ ಸ್ಪಷ್ಟ ಪಾತ್ರವನ್ನು ತೋರಿಸುವ ಸಾಕಷ್ಟು ಪುರಾವೆಗಳಿವೆ ಎಂದು ಆರಂಭಿಕ ಗುಪ್ತಚರ ವರದಿಗಳು ಹೇಳುತ್ತವೆ. ಏಜೆನ್ಸಿಗಳಿಗೆ ತಿಳಿಸಲಾದ ಇನ್ನೊಂದು ಅಂಶವೆಂದರೆ ಸ್ಥಳೀಯ ಸಹ-ಸಂಚುಕೋರರು ಮತ್ತು ಭಯೋತ್ಪಾದಕರಿಗೆ ಸಹಾಯ ಮಾಡಿದ ಎಲ್ಲರನ್ನು ಮಟ್ಟಹಾಕಿ ಎನ್ನುವುದಾಗಿದೆ.
ದಾಳಿಯಲ್ಲಿ ಸುಮಾರು ನಾಲ್ವರು ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಹಲವು ವರದಿಗಳು ಬಂದಿವೆ, ಆದರೆ ದಾಳಿಕೋರರ ನಿಖರವಾದ ಸಂಖ್ಯೆಯನ್ನು ಇಲ್ಲಿಯವರೆಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಪ್ರತ್ಯಕ್ಷದರ್ಶಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ ಮತ್ತು ಸಾಕ್ಷ್ಯ ನೀಡುವ ಸ್ಥಿತಿಯಲ್ಲಿಲ್ಲದ ಕಾರಣ ಇದು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಪೊಲೀಸರು ಬಿಡುಗಡೆ ಮಾಡಿದ ರೇಖಾಚಿತ್ರಗಳಲ್ಲಿ ಒಂದು, ಹಾಶಿಮ್ ಎಂಬ ವಿದೇಶಿ ಭಯೋತ್ಪಾದಕನಿಗೆ ಹೋಲುತ್ತದೆ. ಮೂಲಗಳ ಪ್ರಕಾರ, ಇಲ್ಲಿಯವರೆಗೆ ತನಿಖೆಯಿಂದ ಹೊರಹೊಮ್ಮಿರುವ ಮತ್ತೊಂದು ನಿರ್ಣಾಯಕ ಅಂಶವೆಂದರೆ, ಗುಂಡಿನ ದಾಳಿ ನಡೆದ ಮಾದರಿ. ಗುಂಡಿನ ದಾಳಿಯ ನಿಖರವಾದ ಮಾದರಿಯು ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದೆ ಎಂದು ತೋರಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದಕರನ್ನು ಹಿಡಿಯಲು ವಿವಿಧ ಏಜೆನ್ಸಿಗಳ ನಡುವೆ ಹಲವಾರು ಸಭೆಗಳು ನಡೆಯುತ್ತಿವೆ.
26/11 ರ ನಂತರದ ಅತಿದೊಡ್ಡ ಭಯೋತ್ಪಾದಕ ದಾಳಿ ಎಂದ ಭಾರತ: ವಿಶ್ವಸಂಸ್ಥೆಯಲ್ಲಿ, ಪಹಲ್ಗಾಮ್ ದಾಳಿಯನ್ನು 26/11 ರ ನಂತರದ ಅತಿದೊಡ್ಡ ಭಯೋತ್ಪಾದಕ ದಾಳಿ ಎಂದು ಭಾರತ ಕರೆದಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ನಾಗರಿಕರ ಮೇಲಿನ ಅತಿದೊಡ್ಡ ದಾಳಿಯಾಗಿದೆ ಎಂದು ಭಾರತದ ಉಪ ಖಾಯಂ ಪ್ರತಿನಿಧಿ ಯೋಜನಾ ಪಟೇಲ್ ಹೇಳಿದ್ದಾರೆ. ಭಾರತವು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯ ಸಂತ್ರಸ್ಥ ದೇಶವಾಗಿದೆ ಮತ್ತು ಈ ದಾಳಿಯ ಸಂತ್ರಸ್ಥರ ನೋವನ್ನು ನಾವು ಆಳವಾಗಿ ಅನುಭವಿಸುತ್ತೇವೆ ಎಂದಿದೆ.
ಭಾರತಕ್ಕೆ ವಾಪಸಾದ 22 ರಾಜತಾಂತ್ರಿಕ ಸಿಬ್ಬಂದಿ: ಭಾರತೀಯ ರಾಜತಾಂತ್ರಿಕರು ಪಾಕಿಸ್ತಾನವನ್ನು ತೊರೆದಿದ್ದಾರೆ. 22 ರಾಯಭಾರ ಕಚೇರಿ ಸಿಬ್ಬಂದಿ ಬುಧವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದ್ದಾರೆ.
ಪಾಕಿಸ್ತಾನ ಗಡಿಯಲ್ಲಿ ಪಂಜಾಬ್ ಸರ್ಕಾರ ಡ್ರೋನ್ ವಿರೋಧಿ ವ್ಯವಸ್ಥೆ: ಪಾಕಿಸ್ತಾನದ ಗಡಿಯಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ನಿಯೋಜಿಸಲಾಗುವುದು ಎಂದು ಪಂಜಾಬ್ ಸರ್ಕಾರ ಬುಧವಾರ ತಿಳಿಸಿದೆ. ಪಹಲ್ಗಾಮ್ ದಾಳಿಯ ನಂತರ ರಾಜ್ಯ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ವ್ಯವಸ್ಥೆಯು ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಯನ್ನು ನಿಲ್ಲಿಸುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಯಾವುದೇ ರೀತಿಯ ಒಳನುಸುಳುವಿಕೆಯ ಮೇಲೆ ಕಣ್ಣಿಡಲು ಮತ್ತು ಅದನ್ನು ತಡೆಯಲು ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳು ಸಾಧ್ಯವಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ