ಸಂಸತ್ತಿನಲ್ಲಿ ರಾಘವ್‌ ಚಡ್ಡಾ ಗುಡುಗು, 28 ದಿನಗಳ ರಿಚಾರ್ಜ್‌ ಪ್ಲ್ಯಾನ್‌ಗೆ ಬ್ರೇಕ್‌, ಇನ್ನು ಮಾಸಿಕ 30 ದಿನಗಳ ರಿಚಾರ್ಜ್‌!

Published : Mar 24, 2026, 05:04 PM IST
Raghav Chadha

ಸಾರಾಂಶ

ಟೆಲಿಕಾಂ ಕಂಪನಿಗಳು ನೀಡುವ 28 ದಿನಗಳ 'ಮಾಸಿಕ' ರಿಚಾರ್ಜ್ ಪ್ಲ್ಯಾನ್‌ಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದಿದೆ. ಈ ಹಿನ್ನೆಲೆಯಲ್ಲಿ, 30 ದಿನಗಳ ಯೋಜನೆಗಳನ್ನು ಹೆಚ್ಚು ಪ್ರಚಾರ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದ್ದು, ಗ್ರಾಹಕರ ಹಿತಾಸಕ್ತಿ ಕಾಪಾಡಲು ಟ್ರಾಯ್ ಈ ನಿಯಮಗಳನ್ನು ಮರುಪರಿಶೀಲಿಸುತ್ತಿದೆ.

ನವದೆಹಲಿ (ಮಾ.24): ಟೆಲಿಕಾಂ ಕಂಪನಿಗಳು ನೀಡುವ 'ಮಾಸಿಕ' ರಿಚಾರ್ಜ್ ಪ್ಲ್ಯಾನ್‌ಗಳು 30 ದಿನಗಳ ಬದಲಿಗೆ 28 ದಿನಗಳ ವ್ಯಾಲಿಡಿಟಿ ಹೊಂದಿರುವುದರ ಬಗ್ಗೆ ಸಂಸತ್ತಿನಲ್ಲಿ ಭಾರಿ ಚರ್ಚೆ ನಡೆದಿದೆ. ಈ ಹಿನ್ನೆಲೆಯಲ್ಲಿ, ಟೆಲಿಕಾಂ ಆಪರೇಟರ್‌ಗಳು ತಮ್ಮ 30 ದಿನಗಳ ರಿಚಾರ್ಜ್ ಯೋಜನೆಗಳನ್ನು ಹೆಚ್ಚು ಸಕ್ರಿಯವಾಗಿ ಪ್ರಚಾರ ಮಾಡುವಂತೆ ಕೇಂದ್ರ ಸರ್ಕಾರ ಒತ್ತಡ ಹೇರುವ ಸಾಧ್ಯತೆಯಿದೆ. ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಬಗ್ಗೆ ಮಾತನಾಡಿ, "ಟೆಲಿಕಾಂ ಕಂಪನಿಗಳು ಈಗಾಗಲೇ 30 ದಿನಗಳ ಯೋಜನೆಗಳನ್ನು ಹೊಂದಿವೆ. ಆದರೆ ಅವುಗಳನ್ನು ಗ್ರಾಹಕರಿಗೆ ತಿಳಿಯುವಂತೆ ಇನ್ನು ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಮಾಡುವಂತೆ ಸೂಚಿಸಲಾಗಿದೆ," ಎಂದಿದ್ದಾರೆ.

ಪ್ರತಿ ಟೆಲಿಕಾಂ ಆಪರೇಟರ್ ಹೊರತರುವ ಪ್ಲ್ಯಾನ್‌ಗಳ ಪ್ಯಾಕೇಜ್‌ನಲ್ಲಿ ಕಡ್ಡಾಯವಾಗಿ 30 ದಿನಗಳ ವ್ಯಾಲಿಡಿಟಿಯ ಪ್ಲ್ಯಾನ್ ಇರಲೇಬೇಕು ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಆದೇಶಿಸಿದೆ. "ನೀವು ಕೇವಲ 30 ದಿನಗಳ ಯೋಜನೆಯನ್ನೇ ಹೊಂದಿರಬೇಕು ಎಂದು ನಾನು ಹೇಳಲು ಸಾಧ್ಯವಿಲ್ಲ. ಆದರೆ ನಿಮ್ಮ ಪಟ್ಟಿಯಲ್ಲಿ ಕನಿಷ್ಠ ಒಂದು 30 ದಿನಗಳ ಪ್ಲ್ಯಾನ್ ಇರಲೇಬೇಕು. ಈ ನಿಯಮವನ್ನು ಎಲ್ಲಾ ಕಂಪನಿಗಳು ಪಾಲಿಸುತ್ತಿವೆ," ಎಂದು ಸಿಂಧಿಯಾ ಸ್ಪಷ್ಟಪಡಿಸಿದ್ದಾರೆ.

ಸಂಸತ್ತಿನಲ್ಲಿ ರಾಘವ್ ಚಡ್ಡಾ ಎತ್ತಿದ ಪ್ರಶ್ನೆಗಳೇನು?

ಆಮ್ ಆದ್ಮಿ ಪಕ್ಷದ (AAP) ಸಂಸದ ರಾಘವ್ ಚಡ್ಡಾ ರಾಜ್ಯಸಭೆಯಲ್ಲಿ ಟೆಲಿಕಾಂ ಕಂಪನಿಗಳ ವಿರುದ್ಧ ವಾಗ್ದಾಳಿ ನಡೆಸಿದರು. 28 ದಿನಗಳ ವ್ಯಾಲಿಡಿಟಿಯಿಂದಾಗಿ ಗ್ರಾಹಕರು ವರ್ಷಕ್ಕೆ 12 ಬಾರಿ ಬದಲಾಗಿ 13 ಬಾರಿ ರಿಚಾರ್ಜ್ ಮಾಡಬೇಕಾಗುತ್ತದೆ. ಇದು ಗ್ರಾಹಕರಿಗೆ ಮಾಡುತ್ತಿರುವ ಅನ್ಯಾಯ ಎಂದು ಅವರು ವಾದಿಸಿದರು. "ನೀವು ದಿನಕ್ಕೆ 2GB ಡೇಟಾಗೆ ಹಣ ಪಾವತಿಸಿರುತ್ತೀರಿ. ಆದರೆ 1.5GB ಮಾತ್ರ ಬಳಕೆಯಾದರೆ ಉಳಿದ 0.5GB ಮಧ್ಯರಾತ್ರಿ ಮಾಯವಾಗುತ್ತದೆ. ನಾವು ಹಣ ನೀಡಿದ ಡೇಟಾ ನಮಗೆ ಸಿಗಬೇಕು. ಬಳಕೆಯಾಗದ ಡೇಟಾ ಮುಂದಿನ ಅವಧಿಗೆ ವರ್ಗಾವಣೆಯಾಗಬೇಕು (Data Rollover)," ಎಂದು ಆಗ್ರಹಿಸಿದರು.

ರಿಚಾರ್ಜ್ ಮುಗಿದ ತಕ್ಷಣ ಇನ್ ಕಮಿಂಗ್ ಕರೆಗಳನ್ನು ಕಟ್ ಮಾಡಬಾರದು. ಕನಿಷ್ಠ ಒಂದು ವರ್ಷದವರೆಗೆ ಇನ್ ಕಮಿಂಗ್ ಮತ್ತು SMS ಸೌಲಭ್ಯ ಇರಬೇಕು ಎಂದು ಅವರು ಶಿಫಾರಸು ಮಾಡಿದರು.

ಟ್ರಾಯ್ ಮುಂದಿನ ನಡೆ?

ಪ್ರಸ್ತುತ ನಿಯಮದಂತೆ, 90 ದಿನಗಳವರೆಗೆ ಯಾವುದೇ ಬಳಕೆ ಇಲ್ಲದಿದ್ದರೆ ಮಾತ್ರ ಪ್ರಿಪೇಯ್ಡ್ ಕನೆಕ್ಷನ್ ಕಟ್ ಮಾಡಬಹುದು. ಆದರೆ ದರ ನಿಗದಿ ಮತ್ತು ಸೇವಾ ನಿಯಮಗಳಲ್ಲಿ ಆಪರೇಟರ್‌ಗಳಿಗೆ ಸ್ವತಂತ್ರ ಅಧಿಕಾರ ಇರುವುದರಿಂದ (Forbearance Regime), ಇನ್ ಕಮಿಂಗ್ ಕರೆಗಳ ಬಗ್ಗೆ ಸಚಿವರು ನೇರ ಹಸ್ತಕ್ಷೇಪ ಮಾಡಿಲ್ಲ. ಆದರೂ, ಸಂಸತ್ತಿನಲ್ಲಿ ಈ ವಿಷಯ ಸದ್ದು ಮಾಡಿರುವುದರಿಂದ ಟ್ರಾಯ್ ಈಗ ರಿಚಾರ್ಜ್ ಅವಧಿ ಮತ್ತು ಇನ್ ಕಮಿಂಗ್ ಕರೆಗಳ ವಿಚಾರವನ್ನು ಮತ್ತೆ ಪರಿಶೀಲಿಸುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚೀನಾ AI ಯುಗಕ್ಕೆ ಸರಿಯಾಗಿ ಶಿಕ್ಷಣ ನೀಡುತ್ತಿದೆ, ಭಾರತ ಇನ್ನೂ ಟಾಪರ್‌ಗಳ ಆಯ್ಕೆ, ಅಂಕಗಳನ್ನೇ ಕೇಳುತ್ತಿದೆ!
ದಂತವೈದ್ಯನ ಎಡವಟ್ಟಿಗೆ ಮಹಿಳೆ ಬಲಿ: ಹಲ್ಲು ಕೀಳಿಸಲು ಹೋಗಿ ಪ್ರಾಣನೇ ಹೋಯ್ತು