ಶಾಲಾ ಶುಲ್ಕ ಶೇ.15ರಷ್ಟುಕಡಿಮೆ ಮಾಡಿ| ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ| ಕೇವಲ ಆನ್‌ಲೈನ್ ಕ್ಲಾಸ್ ಮಾತ್ರ ನಡೆದಿವೆ| ಈ ವೇಳೆ ಶಾಲೆಗಳಿಗೆ ಶೇ.15ರಷ್ಟು ಉಳಿತಾಯ ಆಗಿದೆ| ಜನರ ಕಷ್ಟ ಅರ್ಥ ಮಾಡಿಕೊಂಡು ಶುಲ್ಕ ಕಡಿತ ಮಾಡಬೇಕು| ಫೀ ಕಡಿತ ಆದೇಶ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿಲ್ಲ| ಹಾಗಂತ ಶಾಲೆಗಳು ಕಠಿಣ ಮನೋಭಾವ ತಳೆಯುವಂತಿಲ್ಲ
ನವದೆಹಲಿ(ಮೇ.05): ‘ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿಗೊಳಿಸಿರುವ ಸಮಯದಲ್ಲಿ ಶಾಲೆಗಳು ಕೇವಲ ಆನ್‌ಲೈನ್ ಶಿಕ್ಷಣ ನೀಡಿವೆ. ಶಾಲಾ ಕ್ಯಾಂಪಸ್ ಬಂದ್ ಆಗಿರುವ ಕಾರಣ ಅದರ ನಿರ್ವಹಣಾ ವೆಚ್ಚದಲ್ಲಿ ಸಾಕಷ್ಟುಉಳಿತಾಯವಾಗಿರುತ್ತದೆ. ಹೀಗಾಗಿ ಶಾಲಾ ಆಡಳಿತ ಮಂಡಳಿಗಳು ಶೇ.15ರಷ್ಟುಶುಲ್ಕ ಕಡಿತಗೊಳಿಸಬೇಕು’ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಆದರೆ, ‘ಬೋಧನಾ ಶುಲ್ಕದಲ್ಲಿ ಶೇ.30ರಷ್ಟುಕಡಿತ ಮಾಡುವಂತೆ ಸೂಚಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ’ ಎಂದು ಇದೇ ವೇಳೆ ಅದು ರಾಜಸ್ಥಾನ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಸ್ಪಷ್ಟಪಡಿಸಿದೆ.
‘ಕೊರೋನಾ ಕಾರಣ ಶಾಲೆಗಳು ಬಂದ್ ಆಗಿ ಕೇವಲ ಆನ್‌ಲೈನ್ ಶಿಕ್ಷಣ ಮಾತ್ರ ನೀಡಿದ್ದರಿಂದ ಬೋಧನಾ ಶುಲ್ಕದಲ್ಲಿ ಶೇ.30ರಷ್ಟುಕಡಿತ ಮಾಡಬೇಕು’ ಎಂದು ರಾಜಸ್ಥಾನ ಸರ್ಕಾರ ತಮಗೆ ಆದೇಶಿಸಿದೆ. ಇದು ನಿಯಮಬಾಹಿರ ಎಂದು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಇದರ ವಿಚಾರಣೆ ನಡೆಸಿದ ನ್ಯಾ| .ಎಂ. ಖಾನ್ವಿಲ್ಕರ್ ಹಾಗೂ ನ್ಯಾ| ದಿನೇಶ್ ಮಹೇಶ್ವರಿ ಅವರ ಪೀಠ ಮಹತ್ವದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
‘ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಗಳು ಸೂಕ್ಷ್ಮ ಭಾವನೆ ಹೊಂದಿರಬೇಕು. ಶಾಲೆ ಬಂದ್ ಆಗಿರುವ ಕಾರಣ ಕ್ಯಾಂಪಸ್‌ನಲ್ಲಿನ ಹಲವು ಸವಲತ್ತುಗಳನ್ನು ಮಕ್ಕಳು ಬಳಸಿಕೊಂಡೇ ಇರುವುದಿಲ್ಲ. ಅದಕ್ಕೆಲ್ಲ ಫೀ ಕಟ್ಟಿಸಿಕೊಳ್ಳುವುದು ಕಾಳಸಂತೆಯಲ್ಲಿ ಹಣ ಮಾಡಿದಂತೆ ಹಾಗೂ ವಾಣಿಜ್ಯೀಕರಣ ನಡೆಸಿದಂತೆ. ಶಾಲೆಗಳಿಗೆ ಎಷ್ಟುಹಣ ಉಳಿತಾಯವಾಗಲಿದೆ ಎಂಬ ನಿಖರ ಅಂಕಿ-ಅಂಶ ಲಭ್ಯವಿಲ್ಲದೇ ಹೋದರೂ ನಮ್ಮ ಪ್ರಕಾರ ಶೇ.15ರಷ್ಟುಖರ್ಚು ಉಳಿಯುತ್ತಿದೆ’ ಎಂದು ಪೀಠ ಹೇಳಿದೆ.
‘ಆದರೆ ರಾಜಸ್ಥಾನ ಸರ್ಕಾರ ಶೇ.30ರಷ್ಟುಬೋಧನಾ ಶುಲ್ಕ ಕಡಿತಗೊಳಿಸುವಂತೆ ಸೂಚಿಸಿದೆ. ಈ ರೀತಿ ಆದೇಶ ಹೊರಡಿಸಲು ಅಧಿಕಾರ ನೀಡುವ ಕಾನೂನುಗಳು ಇಲ್ಲ. ಹಾಗಂತ ಶಾಲೆಗಳು ಕಠಿಣ ಮನೋಭಾವ ತಾಳಿ ಶುಲ್ಕ ವಸೂಲು ಮಾಡುವಂತಿಲ್ಲ. ಕೊರೋನಾ ಕಾಲದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಎದುರಿಸಿದ ಸಮಸ್ಯೆಗಳನ್ನೂ ಶಾಲೆಗಳು ಗಣನೆಗೆ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ಬಳಸದೇ ಇರುವುದರಿಂದ ಸೌಲಭ್ಯಗಳಿಂದ ಶಾಲೆಗಳಿಗೆ ಶೇ.15ರಷ್ಟುಖರ್ಚು ಉಳಿದಿದೆ. ಇದರ ಲಾಭವನ್ನು ವಿದ್ಯಾರ್ಥಿಗಳಿಗೆ ನೀಡಿ ಶೇ.15ರಷ್ಟುಶುಲ್ಕ ಪರಿಷ್ಕರಣೆ ಮಾಡಬೇಕು. ಇಚ್ಛೆಯಿದ್ದರೆ ಇನ್ನಷ್ಟುಹೆಚ್ಚು ಕಡಿತವನ್ನೂ ಮಾಡಬಹುದು. ಯಾವ ರೀತಿ ಪರಿಷ್ಕರಣೆ ಮಾಡಬೇಕೆಂದರೆ ಯಾವ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತ ಆಗಬಾರದು’ ಎಂಬ ಮಹತ್ವದ ಸೂಚನೆಯನ್ನು ಕೋರ್ಟ್ ನೀಡಿತು.
ಇದಕ್ಕೂ ಮುನ್ನ ಪೋಷಕರ ಪರ ವಾದ ಮಂಡಿಸಿದ ವಕೀಲರು, ‘ಶಾಲೆ ಬಂದ್ ಆಗಿರುವ ಕಾರಣ ಆನ್‌ಲೈನ್ ಶಿಕ್ಷಣ ಮಾತ್ರ ನೀಡಲಾಗಿದೆ. ಇದರಿಂದ ಶಾಲೆಗಳಿಗೆ ವಿದ್ಯುತ್ ಶುಲ್ಕ, ನೀರಿನ ಶುಲ್ಕ ಹಾಗೂ ಇತರ ಖರ್ಚುಗಳು ಉಳಿತಾಯವಾಗುವೆ’ ಎಂದು ವಾದಿಸಿದರು.