ಮೊದಲು ಪ್ರಾಥಮಿಕ ಶಾಲೆ ಆರಂಭ ಮಾಡುವುದು ಸೂಕ್ತ: ಏಮ್ಸ್‌ ಮುಖ್ಯಸ್ಥ

By Suvarna NewsFirst Published Jul 25, 2021, 8:24 AM IST
Highlights

* ಮೊದಲು ಪ್ರಾಥಮಿಕ ಶಾಲೆ ಆರಂಭ ಮಾಡುವುದು ಸೂಕ್ತ: ಏಮ್ಸ್‌ ಮುಖ್ಯಸ್ಥ

* ಸೆಪ್ಟೆಂಬರ್‌ನಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ

* ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು: ಡಾ| ರಣದೀಪ್‌ ಗುಲೇರಿಯಾ

ನವದೆಹಲಿ(ಜು.25): ‘ಮಕ್ಕಳಿಗೆ ನೀಡುವಂತಹ ಕೊರೋನಾ ಲಸಿಕೆ ಸೆಪ್ಟೆಂಬರ್‌ ವೇಳೆಗೆ ಲಭ್ಯವಾಗುವ ಎಲ್ಲ ಸಾಧ್ಯತೆ ಇದೆ’ ಎಂದು ಕೇಂದ್ರ ಸರ್ಕಾರದ ಕೊರೋನಾ ನಿಗ್ರಹ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ನಿರ್ದೇಶಕ ಡಾ

ರಣದೀಪ್‌ ಗುಲೇರಿಯಾ ಹೇಳಿದ್ದಾರೆ. ತನ್ಮೂಲಕ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿರುವ ಪೋಷಕರ ಆತಂಕ ದೂರ ಮಾಡಲು ಯತ್ನಿಸಿದ್ದಾರೆ.

ಸುದ್ದಿಸಂಸ್ಥೆಯೊಂದರ ಜತೆ ಶನಿವಾರ ಮಾತನಾಡಿದ ಅವರು, ‘ಮಕ್ಕಳಿಗೆ ಲಸಿಕೆ ಸೆಪ್ಟೆಂಬರ್‌ ವೇಳೆಗೆ ಲಭ್ಯ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಆಗ ಶಾಲೆಗಳನ್ನು ಹಂತ ಹಂತವಾಗಿ ತೆರೆಯಲು ಸರ್ಕಾರಕ್ಕೆ ಅವಕಾಶ ಲಭಿಸಲಿದೆ’ ಎಂದು ಹೇಳಿದರು.

‘ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಮೊದಲು ಶಾಲೆ ತೆರೆಯುವ ಕುರಿತು ಸರ್ಕಾರ ಪರಿಶೀಲನೆ ನಡೆಸಬೇಕು. ಒಂದು ವೇಳೆ ಶಾಲೆ ಪುನಾರಂಭಿಸುವ ನಿರ್ಧಾರವನ್ನು ತೆಗೆದುಕೊಂಡರೆ, ಪ್ರಾಥಮಿಕ ಶಾಲೆಗಳನ್ನು ಮೊದಲು ಹಾಗೂ ಪ್ರೌಢಶಾಲೆಗಳನ್ನು ನಂತರ ಪ್ರಾರಂಭಿಸಬೇಕು. ದೊಡ್ಡ ಮಕ್ಕಳಿಗೆ ಹೋಲಿಸಿದರೆ ಸಣ್ಣ ಮಕ್ಕಳಲ್ಲಿ ಸೋಂಕನ್ನು ಚೆನ್ನಾಗಿ ನಿಗ್ರಹಿಸುವ ಶಕ್ತಿ ರೋಗ ನಿರೋಧಕ ವ್ಯವಸ್ಥೆಗೆ ಇರುತ್ತದೆ. ಹೀಗಾಗಿ ಸಣ್ಣಮಕ್ಕಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇರುತ್ತದೆ’ ಎಂದು ಹೇಳಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಕೂಡ ಪ್ರಾಥಮಿಕ ಶಾಲೆಗಳನ್ನೇ ಮೊದಲು ಆರಂಭಿಸುವಂತೆ ಕೆಲ ದಿನಗಳ ಹಿಂದೆ ಸಲಹೆ ಮಾಡಿತ್ತು.

3ನೇ ಅಲೆ ಜೋರಾದರೆ ಬೂಸ್ಟರ್‌ ಡೋಸ್‌ ನೀಡಿ

3ನೇ ಅಲೆ ಸೃಷ್ಟಿಯಾಗಿ ಡೆಲ್ಟಾವೈರಾಣುವಿನಿಂದ ದೇಶದಲ್ಲಿ ಕೊರೋನಾ ತೀವ್ರವಾದರೆ ಭಾರತವು ಬೂಸ್ಟರ್‌ ಡೋಸ್‌ ನೀಡಬೇಕಾಗುತ್ತದೆ. ಏಕೆಂದರೆ ಸಮಯ ಕಳೆದಂತೆ ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತದೆ ಎಂದು ಗುಲೇರಿಯಾ ಅವರು ಸಲಹೆ ಮಾಡಿದ್ದಾರೆ.

ಎರಡೂ ಡೋಸ್‌ ಲಸಿಕೆ ಪಡೆದವರು ಮೂರನೇ ಡೋಸ್‌ (ಬೂಸ್ಟರ್‌ ಡೋಸ್‌) ಪಡೆಯಲು ಅರ್ಹರಾಗುತ್ತಾರೆ.

click me!