
ನವದೆಹಲಿ(ಮೇ.10): ಪತ್ನಿ ತನ್ನ ಪತಿ ವಿರುದ್ಧ ಅತ್ಯಾಚಾರದ ಮೊಕದ್ದಮೆ ಹೂಡಬಹುದೇ? ಅಂದರೆ, ಪತಿಗೆ ತನ್ನ ಹೆಂಡತಿಯನ್ನು ಒತ್ತಾಯಿಸುವ ಹಕ್ಕಿದೆಯೇ? ಎಂದು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮೀಕ್ಷೆ ನಡೆಸಲಿದೆ. ಈಗಿರುವ ಕಾನೂನಿನ ಪ್ರಕಾರ ಪತ್ನಿ ತನ್ನ ಪತಿ ವಿರುದ್ಧ ಅತ್ಯಾಚಾರದ ಮೊಕದ್ದಮೆ ಹೂಡುವಂತಿಲ್ಲ. ಪುರುಷನಿಗೆ ತನ್ನ ಹೆಂಡತಿಯೊಂದಿಗೆ ತನಗೆ ಬೇಕಾದಂತೆ ಸಂಬಂಧವನ್ನು ಹೊಂದುವ ಹಕ್ಕಿದೆ. ವೈವಾಹಿಕ ಅತ್ಯಾಚಾರ ಅಂದರೆ ವೈವಾಹಿಕ ಜೀವನದಲ್ಲಿ ಬಲವಂತದ ಸಂಬಂಧವನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಇದನ್ನು ಅಪರಾಧದ ವ್ಯಾಪ್ತಿಗೆ ತರುವಂತೆ ಹಲವು ಮಹಿಳಾ ಸಂಘಟನೆಗಳು ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿವೆ. ಇದೀಗ ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕರ್ನಾಟಕದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದ್ದು, ರಾಜ್ಯ ಸರ್ಕಾರದಿಂದ ಉತ್ತರ ಕೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 3 ರಂದು ನಡೆಯಲಿದೆ. ವಾಸ್ತವವಾಗಿ, ಕರ್ನಾಟಕದಲ್ಲಿ ವಿವಾಹಿತ ವ್ಯಕ್ತಿಯೊಬ್ಬರ ಮೇಲೆ ಪತ್ನಿಯೊಬ್ಬಳು ಅತ್ಯಾಚಾರದ ಆರೋಪ ಹೊರಿಸಿದ್ದರು, ಅದರ ಮೇಲೆ ವಿಚಾರಣಾ ನ್ಯಾಯಾಲಯವು ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಸೂಚಿಸಿತ್ತು. ಆರೋಪಿಗಳು ಕೆಳ ನ್ಯಾಯಾಲಯದ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಆರೋಪಿಗಳ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ಎದುರಿಸುವಂತೆಯೂ ಹೈಕೋರ್ಟ್ ಸೂಚಿಸಿತ್ತು.
ಮೇ 29ರಿಂದ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದೆ. ಈ ಪ್ರಕರಣದ ವಿರುದ್ಧ ಪತಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ಅತ್ಯಾಚಾರ ಆರೋಪ ಹೊರಿಸುವಂತಿಲ್ಲ ಎಂದು ಪತಿ ಅರ್ಜಿಯಲ್ಲಿ ತಿಳಿಸಿದ್ದಾರೆ. ಆದ್ದರಿಂದ ಕೆಳ ನ್ಯಾಯಾಲಯದ ಕ್ರಮಕ್ಕೆ ತಡೆ ನೀಡಬೇಕು. ಸುಪ್ರೀಂ ಕೋರ್ಟ್ ಮಂಗಳವಾರ ಕೆಳ ನ್ಯಾಯಾಲಯದ ಕ್ರಮಕ್ಕೆ ತಡೆಯಾಜ್ಞೆ ನೀಡಲಿಲ್ಲ, ಆದರೆ ಈ ವಿಷಯವನ್ನು ಈಗ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ ಎಂದು ಕೆಳ ನ್ಯಾಯಾಲಯಕ್ಕೆ ತಿಳಿಸುವಂತೆ ಅರ್ಜಿದಾರರನ್ನು ಕೇಳಿದೆ. ಸುಪ್ರೀಂ ಕೋರ್ಟ್ ಈಗ ಈ ಕಾನೂನನ್ನು ಪರಿಶೀಲಿಸುತ್ತಿದೆ.
ದೇಶದ್ರೋಹ ಕಾನೂನು, ಉಲ್ಟಾ ಹೊಡೆದ ಕೇಂದ್ರ: ಮೋದಿ ಸೂಚನೆ ಮೇಲೆ ನಿಲುವು ಬದಲಿಸಿದ ಸರ್ಕಾರ
ದೇಶದ್ರೋಹ ಕಾಯ್ದೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ಶನಿವಾರದವರೆಗೂ ವಾದ ಮಂಡಿಸಿ ಆ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ ಈಗ ದಿಢೀರ್ ತನ್ನ ನಿಲುವು ಬದಲಿಸಿಕೊಂಡಿದೆ. ಕಾಯ್ದೆಯ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ ಐಪಿಸಿ ಸೆಕ್ಷನ್ 124 ಎ ಅನ್ನು ಮರುಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಕ್ಷಮ ವೇದಿಕೆಯೊಂದು ನಿಷ್ಕರ್ಷೆ ನಡೆಸಲಿದೆ. ಅಲ್ಲಿವರೆಗೂ ಸುಪ್ರೀಂಕೋರ್ಚ್ ಕಾಯಬೇಕು. ದೇಶದ್ರೋಹ ಕಾಯ್ದೆಯ ಸಂವಿಧಾನಿಕ ಸಿಂಧುತ್ವ ಪರಿಶೀಲನೆಗೆ ಸಮಯ ವಿನಿಯೋಗಿಸಬಾರದು ಎಂದು ಪ್ರಮಾಣಪತ್ರವೊಂದನ್ನು ಕೇಂದ್ರ ಗೃಹ ಸಚಿವಾಲಯ ಸಲ್ಲಿಕೆ ಮಾಡಿದೆ.
ದೇಶದ್ರೋಹ ಕಾಯ್ದೆ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಮತ್ತಿತರರು ಸುಪ್ರೀಂಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು. ಮಹಾತ್ಮ ಗಾಂಧಿ ಅವರಂತಹ ಸ್ವಾತಂತ್ರ್ಯದ ಹೆಗ್ಗುರುತುಗಳ ಧ್ವನಿಯನ್ನೇ ಅಡಗಿಸಲು ಬ್ರಿಟಿಷರು ಈ ಕಾಯ್ದೆ ಬಳಸಿಕೊಂಡಿದ್ದರು. ಅಂತಹ ಕಾಯ್ದೆಯನ್ನೇಕೆಗೆ ಸರ್ಕಾರ ರದ್ದುಗೊಳಿಸುತ್ತಿಲ್ಲ ಎಂದು ಕಳೆದ ಜುಲೈನಲ್ಲಿ ಸುಪ್ರೀಂಕೋರ್ಚ್ ಪ್ರಶ್ನಿಸಿತ್ತು.
ಈ ನಡುವೆ, ಕಾಯ್ದೆಯನ್ನು ಎತ್ತಿಹಿಡಿದ 1962ರ ಸುಪ್ರೀಂಕೋರ್ಚ್‌ನ ತೀರ್ಪು ಮರುಪರಿಶೀಲಿಸಬೇಕೆಂಬ ಕೋರಿಕೆಯನ್ನು ವಿಸ್ತೃತ ಪೀಠಕ್ಕೆ ಹಸ್ತಾಂತರಿಸಬೇಕೆ ಎಂಬ ಕುರಿತು ಮೇ 10ರಿಂದ ವಿಚಾರಣೆ ಆರಂಭಿಸುವುದಾಗಿ ಮೇ 5ರಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರು ಹೇಳಿದ್ದರು. ಅದಕ್ಕೆ ಒಂದು ದಿನ ಮುನ್ನ ಕಾಯ್ದೆ ಮರುಪರಿಶೀಲಿಸುವುದಾಗಿ ಸರ್ಕಾರ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ