ಆಕ್ಸಿಜನ್‌ಗಾಗಿ ಆಸ್ಪತ್ರೆ ಗೋಡೆ ಒಡೆದು 100 ಜೀವಗಳ ರಕ್ಷಣೆ! ಪವಾಡ ಸದೃಶ ಕಾರ್ಯ

By Kannadaprabha News  |  First Published Apr 26, 2021, 7:47 AM IST

ದೆಹಲಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಕೊನೆಯ ಕ್ಷಣದಲ್ಲಿ ಪವಾಡದಂತೆ 100 ರೋಗಿಗಳ ಜೀವ ಉಳಿದ ಸಿನಿಮೀಯ ಘಟನೆ ನಡೆದಿದೆ. ಆಸ್ಪತ್ರೆ ಗೋಡೆ ಒಡೆದು ಜೀವಗಳನ್ನು ಉಳಿಸಲಾಗಿದೆ. 


 ನವದೆಹಲಿ (ಏ.26):  ದೇಶಾದ್ಯಂತ ಕೊರೋನಾ ರೋಗಿಗಳಿಗೆ ಆಕ್ಸಿಜನ್‌ ಸಿಗದೆ ಹಾಹಾಕಾರ ಎದ್ದಿರುವಾಗ ದೆಹಲಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಕೊನೆಯ ಕ್ಷಣದಲ್ಲಿ ಪವಾಡದಂತೆ 100 ರೋಗಿಗಳ ಜೀವ ಉಳಿದ ಸಿನಿಮೀಯ ಘಟನೆ ನಡೆದಿದೆ.

ಸರೋಜ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 130ಕ್ಕೂ ಹೆಚ್ಚು ರೋಗಿಗಳು ಕೃತಕ ಆಕ್ಸಿಜನ್‌ ಪಡೆಯುತ್ತಿದ್ದರು. ಶನಿವಾರ ಸಂಜೆ ಆಕ್ಸಿಜನ್‌ ಮುಗಿಯುತ್ತಾ ಬಂದಿತ್ತು. ಎಲ್ಲಿ ಹುಡುಕಿದರೂ ಆಕ್ಸಿಜನ್‌ ಸಿಲಿಂಡರ್‌ಗಳು ಸಿಗಲಿಲ್ಲ. ಆಸ್ಪತ್ರೆಯವರು ರೋಗಿಗಳ ಸಂಬಂಧಿಕರಿಗೆ ಇದನ್ನು ತಿಳಿಸಿ 34 ರೋಗಿಗಳನ್ನು ಬೇರೆಡೆಗೆ ಶಿಫ್ಟ್‌ ಮಾಡಿಸಿದರು. ಆದರೆ, ಇನ್ನುಳಿದ 100 ರೋಗಿಗಳನ್ನು ಎಲ್ಲಿಗೂ ಕರೆದುಕೊಂಡು ಹೋಗುವಂತಿರಲಿಲ್ಲ.

Latest Videos

undefined

ಕ್ಷಣಕ್ಷಣಕ್ಕೂ ಆಕ್ಸಿಜನ್‌ ದಾಸ್ತಾನು ಮುಗಿಯುತ್ತಿತ್ತು. ಪೊಲೀಸರ ನೆರವು ಪಡೆದ ರೋಗಿಗಳ ಸಂಬಂಧಿಕರು ಎಲ್ಲೆಲ್ಲಿಗೋ ಹೋಗಿ 20 ಸಿಲಿಂಡರ್‌ಗಳನ್ನು ತಂದರು. ಅದರ ಮೂಲಕ ರೋಗಿಗಳು 40 ನಿಮಿಷ ಉಸಿರಾಡಿದರು. ಅಷ್ಟರಲ್ಲಿ ಮೇಯರ್‌, ಸರ್ಕಾರ, ಪೊಲೀಸ್‌ ಇಲಾಖೆಯ ಮಧ್ಯಪ್ರವೇಶ ಮತ್ತು ಆಸ್ಪತ್ರೆಯ ಪ್ರಯತ್ನದಿಂದ ಒಂದು ಆಕ್ಸಿಜನ್‌ ಟ್ಯಾಂಕರ್‌ ದೊರೆಯಿತು. ಅದು ಆಸ್ಪತ್ರೆಗೆ ಬಂದಾಗ ಕಾಂಪೌಂಡ್‌ನೊಳಗಿರುವ ಆಕ್ಸಿಜನ್‌ ಟ್ಯಾಂಕ್‌ನ ಬಳಿಗೆ ಹೋಗಲಾಗದಷ್ಟುದೊಡ್ಡದಾಗಿದೆ ಎಂಬುದು ತಿಳಿಯಿತು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ವಾರ ಲಾಕ್‌ಡೌನ್!

ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸರು ಸಿಕ್ಕಸಿಕ್ಕಿದ್ದನ್ನೆಲ್ಲಾ ತಂದು ಕಾಂಪೌಂಡ್‌ ಒಡೆಯತೊಡಗಿದರು. ಅಷ್ಟರಲ್ಲಿ ಆಕ್ಸಿಜನ್‌ ಮುಗಿದುಹೋಗುತ್ತಿದೆ, ರೋಗಿಗಳು ಉಳಿಯುವುದಿಲ್ಲ ಎಂದು ಡಾಕ್ಟರ್‌ಗಳು, ನರ್ಸ್‌ಗಳೂ ಸೇರಿದಂತೆ ಎಲ್ಲರೂ ಕಣ್ಣೀರು ಹಾಕತೊಡಗಿದರು. ಕೊನೆಯ ಕ್ಷಣದಲ್ಲಿ ಆಪದ್ಬಾಂಧವನಂತೆ ಜೆಸಿಬಿ ಬಂತು. ಅದರಿಂದ ಕಾಂಪೌಂಡ್‌ ಒಡೆಸಿ ಟ್ಯಾಂಕರ್‌ ಅನ್ನು ಆಕ್ಸಿಜನ್‌ ಟ್ಯಾಂಕ್‌ ಬಳಿಗೆ ಒಯ್ಯಲಾಯಿತು. ಕೊನೆಗೆ ಎಲ್ಲಾ ರೋಗಿಗಳೂ ಉಳಿದರು.

‘ಜೈಪುರದಲ್ಲಿ ಆಕ್ಸಿಜನ್‌ ಸಿಗದೆ 20ಕ್ಕೂ ಹೆಚ್ಚು ರೋಗಿಗಳು ಮೃತಪಟ್ಟಿದ್ದಕ್ಕಿಂತ ದೊಡ್ಡ ದುರಂತ ನಮ್ಮ ಆಸ್ಪತ್ರೆಯಲ್ಲಿ ಸಂಭವಿಸುವುದಿತ್ತು. ಯಾರೂ ನಮ್ಮನ್ನು ಕಾಪಾಡಲು ಸಾಧ್ಯವಿಲ್ಲ ಅಂದುಕೊಂಡಿದ್ದೆವು. ನಮ್ಮ ಸಿಬ್ಬಂದಿಯೆಲ್ಲ ಕಣ್ಣೀರು ಹಾಕುತ್ತಿದ್ದರು. ಎಲ್ಲರ ಪ್ರಯತ್ನದಿಂದ ಕೊನೆಗೆ ಹೇಗೋ ಜೀವ ಉಳಿಯಿತು’ ಎಂದು ಆಸ್ಪತ್ರೆಯ ಮಾಲಿಕ ಪಂಕಜ್‌ ಚಾವ್ಲಾ ನಿಟ್ಟುಸಿರು ಬಿಟ್ಟಿದ್ದಾರೆ.

click me!