Rajasthan Congress| ರಾಜಸ್ಥಾನ ಸರ್ಕಾರ: ಮತ್ತೆ ಗೆಹ್ಲೋಟ್‌ ಬದಲಾವಣೆ ಗುಸುಗುಸು!

Published : Nov 13, 2021, 09:00 AM ISTUpdated : Nov 13, 2021, 09:04 AM IST
Rajasthan Congress| ರಾಜಸ್ಥಾನ ಸರ್ಕಾರ: ಮತ್ತೆ ಗೆಹ್ಲೋಟ್‌ ಬದಲಾವಣೆ ಗುಸುಗುಸು!

ಸಾರಾಂಶ

* ಬದಲಾವಣೆ ಅಗತ್ಯವಿದ್ದರೆ ಮಾಡಲೇಬೇಕು: ಸಚಿನ್‌ ಪೈಲಟ್‌ * ರಾಜಸ್ಥಾನ ಸರ್ಕಾರ: ಮತ್ತೆ ಗೆಹ್ಲೋಟ್‌ ಬದಲಾವಣೆ ಗುಸುಗುಸು

ನವದೆಹಲಿ(ನ.13): ರಾಜಸ್ಥಾನ ಸರ್ಕಾರದ (Rajasthan Govt) ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಯುತ್ತಿರುವ ನಡುವೆಯೇ ನಾಯಕತ್ವ ಬದಲಾವಣೆಯ ಗುಲ್ಲು ಮತ್ತೆ ಎದ್ದಿದೆ. ಶುಕ್ರವಾರ ಶಾಸಕ ಹಾಗೂ ಯುವ ನಾಯಕ ಸಚಿನ್‌ ಪೈಲಟ್‌ (Sachin Pilot) ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ (Congress President Sonia Gandhi) ಅವರನ್ನು ಭೇಟಿ ಮಾಡಿದ ಬಳಿಕ ಆಡಿದ ಮಾತು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ (Chief Minister Ashok Gehlot) ಬದಲಾವಣೆಯ ಊಹಾಪೋಹಕ್ಕೆ ನಾಂದಿ ಹಾಡಿವೆ.

ಭೇಟಿ ಬಳಿಕ ಮಾತನಾಡಿದ ಸಚಿನ್‌ ಪೈಲಟ್‌, ‘ಭೇಟಿ ವೇಳೆ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು. ಏನಾದರೂ ‘ಬದಲಾವಣೆ’ ಅಗತ್ಯವಿದ್ದರೆ ಅದನ್ನು ಮಾಡಲೇಬೇಕು’ ಎಂದರು. ಇದು ಕುತೂಹಲ ಕೆರಳಿಸಿದೆ.

ಬಳಿಕ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವಿನ ಮುಸುಕಿನ ಗುದ್ದಾಟ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪಕ್ಷವು 2023ರ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ಗುರುವಾರವಷ್ಟೇ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ಅವರನ್ನು ದೆಹಲಿಗೆ ಕರೆಸಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾತುಕತೆ ನಡೆಸಿದ್ದರು. ಎರಡೂ ಬಣಗಳು ರಾಜ್ಯದಲ್ಲಿ ರಾಜಕೀಯ ಮೇಲಾಟ ನಡೆಸುತ್ತಿವೆ.

ಸರ್ಕಾರ ಉಳಿಸಲು ಪ್ರಿಯಾಂಕಾ ವಾದ್ರಾ ರಂಗಪ್ರವೇಶ

ಕಣ್ಣ ಮುಂದೆಯೇ ಒಂದೊಂದೇ ರಾಜ್ಯದಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Congress Leader Priyanka Gandhi), ಇದೀಗ ರಾಜಸ್ಥಾನ ರಾಜಕೀಯಕ್ಕೆ ರಂಗಪ್ರವೇಶ ಮಾಡಿದ್ದಾರೆ.

ರಾಜಸ್ಥಾನದಲ್ಲಿ ಸಿಎಂ ಅಶೋಕ್‌ ಗೆಹ್ಲೋಟ್‌ ಮತ್ತು ಯುವ ನಾಯಕ ಸಚಿನ್‌ ಪೈಲಟ್‌ ಬಣದ ಮುಸುಕಿನ ಗುದ್ದಾಟ, ಪಕ್ಷಕ್ಕೆ ಮುಳುವಾಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ, ಇಬ್ಬರೂ ನಾಯಕರನ್ನು ದೆಹಲಿಗೆ ಕರೆಸಿರುವ ಪ್ರಿಯಾಂಕಾ, ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ವೇಳೆ ತಕ್ಷಣವೇ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಮಾಡಬೇಕು. ಅದರಲ್ಲಿ ಸಚಿನ್‌ ಬಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗೆಹ್ಲೋಟ್‌ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸ್ವತಃ ರಾಹುಲ್‌ ನಿವಾಸದಲ್ಲೇ ಸಭೆ ನಡೆದರೂ, ರಾಹುಲ್‌ ಗೈರಾಗಿದ್ದರು ಎನ್ನಲಾಗಿದೆ.

ಈ ಹಿಂದೆ ಉತ್ತರಪ್ರದೇಶ ಕಾಂಗ್ರೆಸ್‌ ಕೈತಪ್ಪಿತ್ತು. ಬಳಿಕ ರಾಹುಲ್‌ ವಿಳಂಬ ನೀತಿಗಳಿಂದ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಸರ್ಕಾರ ಪತನವಾಗಿತ್ತು. ಪಂಜಾಬ್‌ನಲ್ಲೂ ಬಿಕ್ಕಟ್ಟು ಉಂಟಾಗಿತ್ತು. ರಾಜಸ್ಥಾನದಲ್ಲೂ ಹೆಚ್ಚು ಕಡಿಮೆ ಅದೇ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ರಾಹುಲ್‌ ನಿರ್ಧಾರಕ್ಕೆ ಕಾಯದೇ ಸ್ವತಃ ತಾವೇ ನಿರ್ಧಾರ ಕೈಗೊಳ್ಳಲು ಪ್ರಿಯಾಂಕಾ ಮುಂದಾಗಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಈ ನಾಲ್ಕೂ ರಾಜ್ಯಗಳಲ್ಲಿ ಪಕ್ಷದ ಈ ಸ್ಥಿತಿಗೆ ರಾಹುಲ್‌ ಕಾರಣ ಎಂಬ ಆರೋಪವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌