ಕೋವ್ಯಾಕ್ಸಿನ್‌ ಶೇ.77.8ರಷ್ಟು ಪರಿಣಾಮಕಾರಿ!

By Kannadaprabha NewsFirst Published Nov 13, 2021, 7:28 AM IST
Highlights

* ಗಂಭೀರ ಅಡ್ಡ ಪರಿಣಾಮಗಳಿಲ್ಲ: ಲ್ಯಾನ್ಸೆಟ್‌ ವರದಿ

* ಕೋವ್ಯಾಕ್ಸಿನ್‌ ಶೇ.77.8ರಷ್ಟು ಪರಿಣಾಮಕಾರಿ

* ರೋಗ ಲಕ್ಷಣ ಇರುವವರಿಗೂ ರಕ್ಷಣೆ

* ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಪಡೆದ ಭಾರತದ ಲಸಿಕೆಯ ವಿಶ್ವಾಸಾರ್ಹತೆ ಹೆಚ್ಚಳ

ಹೈದರಾಬಾದ್‌(ನ.13): ಭಾರತದ ಸ್ವದೇಶಿ ಕೋವಿಡ್‌ ಲಸಿಕೆಯಾಗಿರುವ ಕೋವ್ಯಾಕ್ಸಿನ್‌ನ (XCovaxin Vaccine) ಎರಡೂ ಡೋಸ್‌ ಲಸಿಕೆ ಕೊರೋನಾ ರೋಗ ಲಕ್ಷಣಗಳನ್ನು ಹೊಂದಿರುವವರ ಮೇಲೆ ಶೇ.77.8ರಷ್ಟುಪರಿಣಾಮಕಾರಿಯಾಗಿದೆ. ಈ ಲಸಿಕೆಯನ್ನು ಪಡೆದವರಲ್ಲಿ ಯಾವುದೇ ಗಂಭೀರ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಪ್ರತಿಷ್ಠಿತ ವೈಜ್ಞಾನಿಕ ನಿಯತಕಾಲಿಕೆ ‘ದ ಲ್ಯಾನ್ಸೆಟ್‌’ (The Lancet) ತನ್ನ ಮಧ್ಯಂತರ ವಿಶ್ಲೇಷಣಾ ವರದಿಯಲ್ಲಿ ತಿಳಿಸಿದೆ.

18 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ವಿಶ್ವಾದ್ಯಂತ ಕೋವ್ಯಾಕ್ಸಿನ್‌ (Covaxin) ಬಳಸುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗಷ್ಟೇ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ದ ಲ್ಯಾನ್ಸೆಟ್‌ ತನ್ನ ವರದಿಯಲ್ಲಿ ಲಸಿಕೆ ಸುರಕ್ಷಿತ ಎಂದು ಸಾರಿರುವುದರಿಂದ ಸ್ವದೇಶಿ ಲಸಿಕೆಯ ಮೇಲಿನ ವಿಶ್ವಾಸಾರ್ಹತೆ ಇನ್ನಷ್ಟುಹೆಚ್ಚಾಗುವಂತಾಗಿದೆ.

ಕೋವ್ಯಾಕ್ಸಿನ್‌ ಲಸಿಕೆಯ ಮೂರನೇ ಹಂತದ ಪರೀಕ್ಷಾ ವರದಿಯನ್ನು ದ ಲ್ಯಾನ್ಸೆಟ್‌ ವಿಶ್ಲೇಷಣೆಗೆ ಒಳಪಡಿಸಿ ವರದಿಯನ್ನು ಪ್ರಕಟಿಸಿದೆ. ಆ ಪ್ರಕಾರ, ಕೋವ್ಯಾಕ್ಸಿನ್‌ನ ಎರಡೂ ಡೋಸ್‌ ಪಡೆದವರಲ್ಲಿ ಪ್ರಬಲ ಪ್ರತಿಕಾಯ ಪ್ರತಿಕ್ರಿಯೆ ಉತ್ಪತ್ತಿಯಾಗಿದೆ. ಪ್ರಯೋಗಕ್ಕೆ ಒಳಪಟ್ಟವರಲ್ಲಿ ಗಂಭೀರ ಅಡ್ಡ ಪರಿಣಾಮ ಅಥವಾ ಸಾವು ಕಂಡುಬಂದಿಲ್ಲ. ತಲೆನೋವು, ಆಯಾಸ, ಜ್ವರ, ಲಸಿಕೆ ಪಡೆದ ಸ್ಥಳದಲ್ಲಿ ನೋವು ಕಾಣಿಸಿಕೊಳ್ಳುವುದು ಈ ಲಸಿಕೆಯ ಸಾಮಾನ್ಯ ಅಡ್ಡಪರಿಣಾಮಗಳಾಗಿವೆ. ಲಸಿಕೆ ಪಡೆದ ಏಳು ದಿನದೊಳಗೆ ಮಾತ್ರ ಇವು ಕಾಣಿಸಿಕೊಳ್ಳುತ್ತವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

2020ರ ನ.16ರಿಂದ ಈ ವರ್ಷದ ಮೇ 17ರವರೆಗೆ 18 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರನ್ನು ಆಯ್ಕೆ ಮಾಡಿ ಲಸಿಕೆ ನೀಡಿ ಈ ಪ್ರಯೋಗ ಮಾಡಲಾಗಿದೆ. 8471 ಮಂದಿಗೆ ಲಸಿಕೆ ನೀಡಲಾಗಿದ್ದು, ಆ ಪೈಕಿ 24 ಮಂದಿಯಲ್ಲಿ ಮಾತ್ರ ಕೊರೋನಾ ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.

ದ ಲ್ಯಾನ್ಸೆಟ್‌ ನಿಯತಕಾಲಿಕೆ ಕೋವ್ಯಾಕ್ಸಿನ್‌ ಕುರಿತು ಅಧ್ಯಯನ ವರದಿ ಪ್ರಕಟಿಸಿರುವುದು ನಮ್ಮ ಕಂಪನಿಯ ದತ್ತಾಂಶ ಪಾರದರ್ಶಕತೆಯನ್ನು ತೋರಿಸುತ್ತದೆ. ಈಗಾಗಲೇ 10 ಜರ್ನಲ್‌ಗಳಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ತನ್ಮೂಲಕ ಅತಿ ಹೆಚ್ಚು ವರದಿಗಳನ್ನು ಕಂಡ ವಿಶ್ವದ ಮೊದಲ ಲಸಿಕೆ ನಮ್ಮದಾಗಿದೆ ಎಂದು ಕೋವ್ಯಾಕ್ಸಿನ್‌ ತಯಾರಿಸುವ ಭಾರತ್‌ ಬಯೋಟೆಕ್‌ ಕಂಪನಿ ಮುಖ್ಯಸ್ಥ ಕೃಷ್ಣ ಎಲ್ಲಾ ತಿಳಿಸಿದ್ದಾರೆ.

ವಿಶ್ವಾದ್ಯಂತ ಅತ್ಯಂತ ಪ್ರತಿಷ್ಠಿತವಾಗಿರುವ ದ ಲ್ಯಾನ್ಸೆಟ್‌ನಲ್ಲಿ ಕೋವ್ಯಾಕ್ಸಿನ್‌ನ ಕ್ಷಮತೆ ವರದಿ ಪ್ರಕಟವಾಗಿರುವುದರಿಂದ ಸಂತಸವಾಗಿದೆ ಎಂದು ಐಸಿಎಂಆರ್‌ ಮಹಾನಿರ್ದೇಶಕ ಬಲರಾಮ್‌ ಭಾರ್ಗವ ಹೇಳಿದ್ದಾರೆ.

ಯಾವ ಲಸಿಕೆ ಎಷ್ಟು ಪರಿಣಾಮಕಾರಿ?

* ಸ್ಪುಟ್ನಿಕ್‌ 91.6

* ಕೋವಿಶೀಲ್ಡ್‌ 81.3%

* ಕೋವ್ಯಾಕ್ಸಿನ್‌ 77.8%

2ನೇ ಡೋಸ್‌ ಕೊಟ್ಟ 6 ತಿಂಗಳ ಬಳಿಕ ಬೂಸ್ಟರ್ ಡೋಸ್: ಭಾರತ್ ಬಯೋಟೆಕ್!

 

ವಿಶ್ವಾದ್ಯಂತ ಜನಸಂಖ್ಯೆ ಹೆಚ್ಚಿರುವ ಕೆಲ ಭಾಗಗಳಿಗೆ ಬೂಸ್ಟರ್ ಡೋಸ್‌ಗಳನ್ನು (Booster Dose) ನೀಡುವ ಚರ್ಚೆ ಇದೆ. ಹೀಗಿರುವಾಗ, ಭಾರತ್ ಬಯೋಟೆಕ್ (Bharat Biotech) ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ (Dr Krishna Ella) ಕೊರೋನಾ ಲಸಿಕೆಯ (vaccine) ಎರಡನೇ ಡೋಸ್ ನೀಡಿದ ಆರು ತಿಂಗಳ ಬಳಿಕ ಬೂಸ್ಟರ್ ಡೋಸ್ ನೀಡಬಹುದು ಎಂದು ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದೂ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ

ಇದುವರೆಗೆ ಬೂಸ್ಟರ್ ಡೋಸ್ ತುರ್ತಾಗಿ ಅಗತ್ಯವಿಲ್ಲ ಎಂದು ಸರ್ಕಾರ ಮತ್ತು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದ ಎಲಾ, ಇದಕ್ಕೂ ಮೊದಲು, ಎರಡೂ ಲಸಿಕೆಗಳನ್ನು ನೀಡುವ ಗುರಿಯೇ ಆದ್ಯತೆಯಾಗಿತ್ತು. ಆದಾಗ್ಯೂ, ಕೆಲವು ದೇಶಗಳು ತಮ್ಮ ವಯಸ್ಸಾದ ಜನಸಂಖ್ಯೆಗೆ ಬೂಸ್ಟರ್ ಡೋಸ್‌ಗಳನ್ನು ಪರಿಚಯಿಸಿವೆ ಎಂದು ಟೈಮ್ಸ್ ನೌ ಶೃಂಗಸಭೆ 2021 ರಲ್ಲಿ ಎಲಾ ಇದನ್ನು ಹೇಳಿದ್ದಾರೆ.

click me!