
ನವದೆಹಲಿ(ಫೆ.19): ಉಕ್ರೇನ್ ಯುದ್ಧಾತಂಕದಲ್ಲಿದ್ದರೂ, ದೇಶದಲ್ಲಿನ ಪರಿಸ್ಥಿತಿ ಶಾಂತವಾಗಿದೆ. ಆಂದುಕೊಂಡಷ್ಟುಆತಂಕಕಾರಿ ಆಗಿಲ್ಲ ಎಂದು ಅಲ್ಲಿರುವ ಭಾರತೀಯ ಮೂಲದವರು ಹೇಳಿದ್ದಾರೆ.
‘ನಮ್ಮ ಸುರಕ್ಷತೆ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಉಕ್ರೇನ್‌ನಲ್ಲಿ(Ukraine) ರಸ್ತೆಗಳು ಮತ್ತು ಮಾರುಕಟ್ಟೆಗಳು ಎಂದಿನಂತೆ ಲಗುಬಗೆಯಲ್ಲಿವೆ. ಸಾರ್ವಜನಿಕ ಮತ್ತು ಇತರ ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಭಾರತೀಯರು(Indians) ಸುರಕ್ಷಿತವಾಗಿದ್ದಾರೆ. ಅಲ್ಲದೆ, ಭಾರತೀಯ ದೂತಾವಾಸವು ಸಹಾಯವಾಣಿ ಆರಂಭಿಸಿದ್ದು ಸಕಾಲಿಕ ನೆರವು ನೀಡುತ್ತಿದೆ’ ಎಂದು ವಿದ್ಯಾಭ್ಯಾಸಕ್ಕೆಂದು ಅಲ್ಲಿರುವ 24 ವರ್ಷದ ಭಾರತೀಯ ಯುವಕ ಶ್ರೇಯ್ ಸಿಂಘಾನಿಯಾ ಸ್ಪಷ್ಟಪಡಿಸಿದ್ದಾರೆ.
‘ನನ್ನ ಸುರಕ್ಷತೆ ಬಗ್ಗೆ ಆತಂಕಕ್ಕೀಡಾಗಿರುವ ಭಾರತದಲ್ಲಿರುವ ನನ್ನ ತಾಯಿಗೆ ಹಲವು ರಾತ್ರಿಗಳು ನಿದ್ದೆಯಿಲ್ಲ. ಪ್ರತೀ ಗಂಟೆಗೊಮ್ಮೆ ಕರೆ ಮಾಡುತ್ತಿರುವ ಆಕೆ ನನ್ನ ಸುರಕ್ಷತೆ ಬಗ್ಗೆ ವಿಚಾರಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
Russia Ukraine Crisis: ನಮಗೆ ಯುದ್ಧ ಬೇಡ, ಹಿಂದೆ ಸರಿದ ರಷ್ಯಾದ ಮುಂದಿನ ಹೆಜ್ಜೆ!
ಭಾರತೀಯರ ಸುರಕ್ಷತೆಗಾಗಿ ಉಕ್ರೇನ್‌ನಲ್ಲಿರುವ ಭಾರತೀಯ ದೂತವಾಸ, ವಿದ್ಯಾರ್ಥಿಗಳು ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಟ್ಟಿದೆ. ಪೂರ್ವ ಯೂರೋಪ್ ಭಾಗದಲ್ಲಿರುವ ಭಾರತೀಯರ ನೆರವಿಗಾಗಿ 24 ಗಂಟೆ ಸಹಾಯವಾಣಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಒಂದು ವೇಳೆ ಬಿಕ್ಕಟ್ಟು ಸೃಷ್ಟಿಯಾದಲ್ಲಿ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಕಾಲೇಜು ಆಡಳಿತ ಮಂಡಳಿ ಭರವಸೆ ನೀಡಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ನಮ್ಮ ನಾಗರಿಕರ ರಕ್ಷಣೆ ನಮ್ಮ ಮೊದಲ ಆದ್ಯತೆ: ಭಾರತ
ಯುದ್ಧ ಭೀತಿ ಎದುರಿಸುತ್ತಿರುವ ಉಕ್ರೇನ್‌ನಲ್ಲಿನ ನಮ್ಮ 20000 ಜನರ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ಉಕ್ರೇನ್ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಪ್ರತಿಪಾದಿಸಿದೆ.
Russia Ukraine Crisis : ಯುದ್ಧಕ್ಕೆ ಸಜ್ಜಾದ ರಷ್ಯಾ, ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ!
ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಮಾತನಾಡಿದ ಟಿ.ಎಸ್.ತಿರುಮೂರ್ತಿ, ‘ಪ್ರತಿಯೊಂದು ದೇಶಗಳ ಕಾನೂನುಬದ್ಧ ಭದ್ರತಾ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಇಡೀ ವಲಯದಲ್ಲಿ ದೀರ್ಘಕಾಲಿನ ಶಾಂತಿಸ್ಥಾಪನೆ ಮತ್ತು ಸ್ಥಿರತೆ ಸ್ಥಾಪಿಸಲು ತಕ್ಷಣವೇ ಬಿಕ್ಕಟ್ಟು ಪರಿಹಾರಕ್ಕೆ ಎಲ್ಲಾ ಸದಸ್ಯ ದೇಶಗಳು ಮುಂದಾಗಬೇಕು. ಮಿನ್ಸ್$್ಕ ಒಪ್ಪಂದವು ಬಿಕ್ಕಟ್ಟಿಗೆ ಪರಿಹಾರ ನೀಡಲು ಸೂಕ್ತ ವೇದಿಕೆಯಾಗಬಲ್ಲದು ಎಂಬುದು ಭಾರತದ ಅಭಿಮತ. ಮಾತುಕತೆ, ಸಂಧಾನದ ಮೂಲಕವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಬೇಕು ಎಂದು ಕರೆಕೊಟ್ಟರು. ಇದೇ ವೇಳೆ ಶಿಕ್ಷಣ, ಉದ್ಯೋಗದ ನಿಮಿತ್ತ ಉಕ್ರೇನ್‌ನಲ್ಲಿರುವ 20000 ಭಾರತೀಯರ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.
ರಷ್ಯಾದ ಸೇನಾ ಹಿಂಪಡೆತ ಹೇಳಿಕೆಗೆ ವ್ಯತಿರಿಕ್ತ ಬೆಳವಣಿಗೆ ಪತ್ತೆ
ಸಂಧಾನ ಮಾತುಕತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಉಕ್ರೇನ್ ಗಡಿಯಿಂದ ಸೇನೆ ಹಿಂಪಡೆತ ಆರಂಭಿಸಿದ್ದಾಗಿ ಹೇಳಿದ್ದ ರಷ್ಯಾದ ಮಾತುಗಳಿಗೆ ವ್ಯತಿರಿಕ್ತವಾದ ಬೆಳವಣಿಗೆಗಳು ಉಕ್ರೇನ್ ಗಡಿಯಲ್ಲಿ ಕಂಡುಬಂದಿವೆ. ಉಪಗ್ರಹ ಚಿತ್ರದಲ್ಲಿ ರಷ್ಯಾ, ಉಕ್ರೇನ್ ಗಡಿಗೆ ಮತ್ತಷ್ಟುಯೋಧರ ಕಳಿಸುರುವುದು ಕಂಡುಬಂದಿದೆ. ಇದರ ನಡುವೆಯೇ ಹಲವು ದಿನಗಳಲ್ಲಿ ಯುದ್ಧ ಆರಂಭವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ರಷ್ಯಾದ 1.5 ಲಕ್ಷ ಯೋಧರು ಉಕ್ರೇನ್ ಗಡಿಯಲ್ಲಿದ್ದಾರೆ ವಿಶಸಂಸ್ಥೆಗೆ ಅಮೆರಿಕ ದೂರಿದೆ.ಹೀಗಾಗಿ ಮತ್ತೆ ಯುದ್ಧಭೀತಿ ಆವರಿಸಿದೆ.
ಅಮೆರಿಕದ ಖಾಸಗಿ ಉಪಗ್ರಹವೊಂದು ಕಳೆದ 48 ಗಂಟೆಗಳ ಅವಧಿಯಲ್ಲಿ ಸೆರೆಹಿಡಿದ ಹಲವು ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬೆಲಾರಸ್, ಉಕ್ರೇನ್ ಗಡಿಯಲ್ಲಿ ಸಶಸ್ತ್ರ ವಾಹನಗಳು, ಹೆಲಿಕಾಪ್ಟರ್, ಯೋಧರ ನಿಯೋಜನೆ, ಹೊಸ ಸೇತುವೆ ನಿರ್ಮಾಣ, ಯೋಧರಿಗೆ ತರಬೇತಿ, ಯೋಧರಿಗಾಗಿ ಆಸ್ಪತ್ರೆ ನಿರ್ಮಿಸಿರುವುದು ಕಂಡುಬಂದಿದೆ. ಹೀಗಾಗಿ ಸೇನೆ ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಬಗ್ಗೆ ರಷ್ಯಾ ಬಿಡುಗಡೆ ಮಾಡಿದ್ದ ವಿಡಿಯೋ ಸಾಚಾತನದ ಬಗ್ಗೆ ಅನುಮಾನಗಳು ಮೂಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ