
ಮಾಸ್ಕೋ: ಇತ್ತೀಚೆಗಷ್ಟೇ ವಿಶ್ವದ ಯಾವುದೇ ಮೂಲೆಯನ್ನು ತಲುಪಬಲ್ಲ ವಿಶ್ವದ ಮೊದಲ ಅಣುಚಾಲಿತ ಕ್ಷಿಪಣಿಯ ಪರೀಕ್ಷೆ ನಡೆಸಿದ್ದ ರಷ್ಯಾ ಇದೀಗ ಸಮುದ್ರದೊಳಗೆ ಸಾಗಿ ಸುನಾಮಿಯನ್ನೇ ಸೃಷ್ಟಿಸಬಲ್ಲ ಪರಮಾಣು ಚಾಲಿತ ‘ಪೊಸೈಡನ್’ ಡ್ರೋನ್‌ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಈ ವಿಚಾರವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಖಚಿತಪಡಿಸಿದ್ದಾರೆ.
ವಾರದ ಹಿಂದೆಯಷ್ಟೇ ಪುಟಿನ್ ಅವರು ಪರಮಾಣು ಚಾಲಿತ ಬ್ಯೂರೆವೆಸ್ಟ್ನಿಕ್ ಕ್ಷಿಪಣಿಯ ಅಂತಿಮ ಪರೀಕ್ಷೆಯ ಕುರಿತು ಘೋಷಿಸಿದ್ದರು. ಈ ಬಗ್ಗೆ ಬಹಿರಂಗವಾಗಿಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಶಸ್ತ್ರಾಸ್ತ್ರ ಪರೀಕ್ಷೆ ಬದಲು ಉಕ್ರೇನ್ ಯುದ್ಧ ಕೊನೆಗಾಣಿಸಲು ರಷ್ಯಾ ಆದ್ಯತೆ ನೀಡಬೇಕು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಅಣುಚಾಲಿತ ಅಸ್ತ್ರದ ಪರೀಕ್ಷೆ ನಡೆಸಲಾಗಿದೆ.
ಈ ಡ್ರೋನ್ ಸಾಂಪ್ರದಾಯಿಕ ಸಬ್‌ಮರೀನ್‌ಗಿಂತಲೂ ವೇಗವಾಗಿ ಚಲಿಸಿ ವಿಶ್ವದ ಯಾವುದೇ ಮೂಲೆಯನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದ್ದು, ಸಮುದ್ರದಲ್ಲಿ ಸುನಾಮಿಯನ್ನೇ ಸೃಷ್ಟಿಸುತ್ತದೆ ಎಂದು ಪುಟಿನ್ ಹೇಳಿದ್ದಾರೆ. ಈ ಡ್ರೋನ್‌ಗೆ ಸರಿಸಾಟಿ ಯಾವುದೂ ಇಲ್ಲ. ಸದ್ಯೋ ಭವಿಷ್ಯದಲ್ಲಿ ಇಂಥ ಡ್ರೋನ್ ಯಾರೂ ಅಭಿವೃದ್ಧಿಪಡಿಸಲು ಸಾಧ್ಯವೂ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇದೊಂದು ಅತ್ಯಾಧುನಿಕ ಡ್ರೋನ್ ಆಗಿದ್ದು, ಮುಂದಿನ ತಲೆಮಾರಿನ ಯುದ್ಧಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.
ಈ ಡ್ರೋನ್ ನೀರಿನಡಿ 1 ಕಿ.ಮೀ.ಗಿಂತಲೂ ಹೆಚ್ಚಿನ ಆಳದಲ್ಲಿ ಕಾರ್ಯನಿರ್ವಹಿಸಬಲ್ಲುದಾಗಿದೆ ಹಾಗೂ ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಸದ್ಯದ ಪರಿಸ್ಥಿತಿಯಲ್ಲಿ ಈ ಡ್ರೋನ್‌ಅನ್ನು ಪತ್ತೆಹಚ್ಚುವ ಸಾಮರ್ಥ್ಯ ಯಾವುದೇ ದೇಶಕ್ಕಿಲ್ಲ. ಇದು ಸುಮಾರು 2 ಮೆಗಾ ಟನ್‌ನಷ್ಟು ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲದು.
2018ರಲ್ಲಿ ಪುಟಿನ್ ಅವರು ಪಾಶ್ಚಿಮಾತ್ಯ ದೇಶಗಳ ವಿರುದ್ಧ ಮಾಡಿದ್ದ ಭಾಷಣದಲ್ಲಿ ಪೊಸೈಡನ್ ಮತ್ತು ಬ್ಯೂರೆವೆಸ್ಟ್ನಿಕ್ ಬಗ್ಗೆ ಪ್ರಸ್ತಾಪಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ