ವಿಮಾನ ದುರಂತ ನಡೆದ ನಿಮಿಷದೊಳಗೆ ಸ್ಥಳಕ್ಕೆ ದೌಡಾಯಿಸಿದ ಕಲ್ಲಿಕೋಟೆ ಸ್ಥಳೀಯರು| ಸಿಬ್ಬಂದಿ ಜೊತೆ ಸೇರಿ ರಕ್ಷಣಾ ಕಾರ್ಯದಲ್ಲಿ ಸಹಾಯ| ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ರು, ಆಂಬುಲೆನ್ಸ್ ತೆರಳಲು ಟ್ರಾಫಿಕ್ ಕ್ಲಿಯರ್ ಮಾಡಿದ್ರು| ರಕ್ತದ ಕೊರತೆ ಎದುರಾದಾಗ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದ್ರು| ದೇವರ ನಾಡಿನಲ್ಲಿ ಮಾನವೀಯತೆ, ಒಗ್ಗಟ್ಟು ಪ್ರದರ್ಶನ
ಕಲ್ಲಿಕೋಟೆ(ಆ.08): ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನವೊಂದು ಶುಕ್ರವಾರ ಸಂಜೆ ಕೇರಳದ ಕಲ್ಲಿಕೋಟೆಯಲ್ಲಿ ಅಪಘಾತಕ್ಕೀಡಾಗಿ, ಇಪ್ಪತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಕೇರಳಕ್ಕೆ ಒಂದೇ ದಿನ ಸಿಕ್ಕ ಎರಡನೇ ಕಹಿ ಸುದ್ದಿಯಾಗಿತ್ತು. ಇದಕ್ಕೂ ಮುನ್ನ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಗೆ ಕೇರಳದ ಇಡುಕ್ಕಿಯಲ್ಲಿ ಗುಡ್ಡವೊಂದು ಕುಸಿದು 14 ಮಂದಿ ಸಾವನ್ನಪ್ಪಿದ್ದು, 50 ಮಂದಿ ನಾಪತ್ತೆಯಾಗಿದ್ದಾರೆ. ಈ ಪ್ರಮಾಣದ ಮಳೆ ಸುರಿಯುತ್ತಿದ್ದರೂ ವಿಮಾನ ದುರಂತದ ಸುದ್ದಿ ಸಿಗುತ್ತಿದ್ದಂತೆಯೇ ಅಲ್ಲಿನ ಸ್ಥಳೀಯರು ದುರಂತ ನಡೆದ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡು ಮಾನವೀಯತೆ ಹಾಗೂ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಕೇರಳ ವಿಮಾನ ದುರಂತ, 40 ಮಂದಿ ಪ್ರಯಾಣಿಕರಿಗೆ ಕೊರೋನಾ!
undefined
ಹೌದು ಕಲ್ಲಿಕೋಟೆಯ ವಿಮಾನ ದುರಂತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಅನೇಕ ಮಂದಿ ಸ್ಥಳೀಯರು ಘಟನಾ ಸ್ಥಳದತ್ತ ತೆರಳಿದ್ದಾರೆ. ಅಲ್ಲದೇ ಅಲ್ಲಿದ್ದ ಅಗ್ನಿ ಶಾಮಕ ಸಿಬ್ಬಂದಿಗೆ ಸಹಾಯ ಮಾಡುತ್ತಾ ವಿಮಾನದೊಳಗೆ ಸಿಲುಕಿದವರನ್ನು ಹೊರ ಕರೆತಂದಿದ್ದಾರೆ. ಪೈಲಟ್ ಹಾಗೂ ಕೋ-ಪೈಲಟ್ ಸೇರಿ ಸುಮಾರು 30ಕ್ಕೂ ಅಧಿಕ ಮಂದಿಯನ್ನು ಇಲ್ಲಿನ ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಹೀಗಿರುವಾಗ ಇನ್ನಿತರರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದರೆ, ಮತ್ತೆ ಕೆಲವರು ಆಂಬುಲೆನ್ಸ್‌ಗಳು ಯಾವುದೇ ತೊಡಕಿಲ್ಲದೇ ಶೀಘ್ರವಾಗಿ ಆಸ್ಪತ್ರೆಗೆ ತೆರಳಲು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ಚಿತ್ತ ಹರಿಸಿದ್ದಾರೆ. ಇನ್ನು ಆರಂಭದಲ್ಲಿ ಸ್ಥಳೀಯರು ಗಾಯಾಳುಗಳನ್ನು ಕೋವಿಡ್ ಆಸ್ಪತ್ರೆಯಾಗಿ ಘೋಷಿಸಿರುವ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದರು.
ಏನಿದು ಟೇಬಲ್‌ಟಾಪ್ ರನ್‌ವೇ? ಮಂಗಳೂರು ದುರಂತ ನೆನಪಿಸಿದ ಕಲ್ಲಿಕೋಟೆ ವಿಮಾನ ಅಪಘಾತ!
ಆಸ್ಪತ್ರೆಯಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಹಾಗೂ ಗಂಭೀರ ಪರಿಸ್ಥಿತಿಯಲ್ಲಿದ್ದವರನ್ನು ಕರೆ ತರುತ್ತಿದ್ದಂತೆಯೇ ರಕ್ತದ ಆಭಾವ ತಲೆದೋರಿದೆ. ಈ ಸುದ್ದಿ ಸಿಗುತ್ತಿದ್ದಂತೆಯೇ ನೂರಾರು ಮಂದಿ ಆಸ್ಪತ್ರೆಯತ್ತ ರಕ್ತದಾನ ಮಾಡಲು ಧಾವಿಸಿದ್ದಾರೆ. ಕೇರಳಿಗರ ಈ ಮಾನವೀಯ ನಡೆಯಿಂದ ಅತಿ ವಿರಳವಾಗಿ ಸಿಗುವ ಗುಂಪಿನ ರಕ್ತವೂ ತಾಸಿನೊಳಗೆ ಇಲ್ಲಿ ಲಭ್ಯವಾಗಿದೆ.
ಸೋಶಿಇಯಲ್ ಮೀಡಿಯಾದಲ್ಲೂ ಕೇರಳಿಗಗರು, ಕಲ್ಲಿಕೋಟೆಯ ಸ್ಥಳೀಯರು ತೋರಿದ ಈ ಸಮಯಪ್ರಜ್ಞೆಯ ಫೋಟೋಗಳು ಭಾರೀ ವೈರಲ್ ಆಗಿವೆ. ದೇವರ ನಾಡಿನ ಜನತೆಯ ಮಾನವೀಯ ನಡೆ ಹಾಗೂ ಪ್ರದರ್ಶಿಸಿದ ಒಗ್ಗಟ್ಟಿಗೆ ಸದ್ಯ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.