16 ವರ್ಷ ಮೇಲ್ಪಟ್ಟ ಅಪ್ರಾಪ್ತ ಬಾಲಕಿಯರ ಪ್ರೇಮಪಾಶದಲ್ಲಿ ಬಿದ್ದು ಓಡಿಹೋಗಿ, ಈ ಮಧ್ಯೆ ಹುಡುಗನ ಜತೆ ‘ಸಮ್ಮತಿಯ ಲೈಂಗಿಕ ಕ್ರಿಯೆ’ ನಡೆಸಿದ ಪ್ರಕರಣಗಳು ನ್ಯಾಯಾಲಯದ ಮುಂದೆ ಇವೆ. ಹೀಗಾಗಿ ‘ಸಮ್ಮತಿಯ ವಯಸ್ಸು’ ಬಗ್ಗೆ ಕಾನೂನು ಆಯೋಗವು ಕೇಂದ್ರದಿಂದ ಅಭಿಪ್ರಾಯ ಬಯಸಿರುವುದಕ್ಕೆ ಮಹತ್ವ ಬಂದಿದೆ.
ನವದೆಹಲಿ (ಜೂನ್ 17, 2023): ಬಹು ಚರ್ಚೆಗೆ ಒಳಗಾಗಿರುವ ‘ಸಮ್ಮತಿಯ ವಯಸ್ಸಿನ’ ಬಗ್ಗೆ 22ನೇ ಕಾನೂನು ಆಯೋಗವು, ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವಾಲಯದಿಂದ ಅಭಿಪ್ರಾಯ ಹಾಗೂ ಮಾಹಿತಿ ಬಯಸಿದೆ. ಸದ್ಯ 18 ವರ್ಷ ವಯಸ್ಸಿಗಿಂತ ಕೆಳಗಿನವರನ್ನು ‘ಅಪ್ರಾಪ್ತರು’ ಎಂದು ಪರಿಗಣಿಸಲಾಗುತ್ತದೆ. ಪೋಕ್ಸೋ ಕಾಯಿದೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಎಲ್ಲ ಲೈಂಗಿಕ ಕ್ರಿಯೆಗಳನ್ನು ‘ಅಪರಾಧ’ ಎಂದು ಪರಿಗಣಿಸುತ್ತದೆ. ಆದರೆ ಅಪ್ರಾಪ್ತರು ಲೈಂಗಿಕ ಕ್ರಿಯೆಗೆ ‘ಪರಸ್ಪರ ಸಮ್ಮತಿ’ಸಿದ್ದರೆ ಎಂಬುದನ್ನು ಕಾನೂನು ಲೆಕ್ಕಿಸುವುದಿಲ್ಲ.
ಆದರೆ, 16 ವರ್ಷ ಮೇಲ್ಪಟ್ಟ ಅಪ್ರಾಪ್ತ ಬಾಲಕಿಯರ ಪ್ರೇಮಪಾಶದಲ್ಲಿ ಬಿದ್ದು ಓಡಿಹೋಗಿ, ಈ ಮಧ್ಯೆ ಹುಡುಗನ ಜತೆ ‘ಸಮ್ಮತಿಯ ಲೈಂಗಿಕ ಕ್ರಿಯೆ’ ನಡೆಸಿದ ಪ್ರಕರಣಗಳು ನ್ಯಾಯಾಲಯದ ಮುಂದೆ ಇವೆ. ಹೀಗಾಗಿ ‘ಸಮ್ಮತಿಯ ವಯಸ್ಸು’ ಬಗ್ಗೆ ಕಾನೂನು ಆಯೋಗವು ಕೇಂದ್ರದಿಂದ ಅಭಿಪ್ರಾಯ ಬಯಸಿರುವುದಕ್ಕೆ ಮಹತ್ವ ಬಂದಿದೆ. ಇದೇ ವೇಳೆ ಸಚಿವಾಲಯದ ಮೂಲಗಳು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ವಿಷಯವನ್ನು ಅಧ್ಯಯನ ಮಾಡಲಾಗುತ್ತಿದೆ. ಅದನ್ನು ಶೀಘ್ರದಲ್ಲೇ ಕಾನೂನು ಆಯೋಗಕ್ಕೆ ಸಚಿವಾಲಯ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಹೇಳಿವೆ.
ಇದನ್ನು ಓದಿ: ಅಪ್ರಾಪ್ತ ಬಾಲಕಿ ರೇಪ್ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ
ಹೈಕೋರ್ಟ್ಗಳು ಈ ಬಗ್ಗೆ ಹೇಳಿದ್ದೇನು?:
ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟು, ‘16 ವರ್ಷಕ್ಕಿಂತ ಮೇಲ್ಪಟ್ಟಅಪ್ರಾಪ್ತ ಬಾಲಕಿಯರ ಪ್ರಿಯಕರನ ಜತೆ ಓಡಿ ಹೋದ, ಲೈಂಗಿಕ ಸಂಪರ್ಕ ಮಾಡಿದ ಹಲವಾರು ಪ್ರಕರಣಗಳು ನಮ್ಮ ಮುಂದೆ ಬಂದಿವೆ. ಹೀಗಾಗಿ ಸಮ್ಮತಿಯ ಮಾನದಂಡಗಳ ಬಗ್ಗೆ ಕಾನೂನು ಆಯೋಗ ಮರುಚಿಂತನೆ ಮಾಡಬೇಕು. ವಸ್ತುಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು’ ಎಂದು ಹೇಳಿತ್ತು.
ಇನ್ನು ಮಧ್ಯಪ್ರದೇಶ ಹೈಕೋರ್ಟ್, ‘ಪೋಕ್ಸೋ ಕಾಯ್ದೆಗೆ ತಿದ್ದುಪಡಿ ಮಾಡುವ ಬಗ್ಗೆ ಸಂಸತ್ತಿಗೆ ಸಲಹೆ ನೀಡಿ’ ಎಂದು ಕಾನೂನು ಆಯೋಗಕ್ಕೆ ಕೋರಿತ್ತು.
ಇದನ್ನೂ ಓದಿ: ಅರೇಬಿಕ್ ಶಾಲೆಯಲ್ಲಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್: 6 ತಿಂಗಳ ಮೊದಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ವಿದ್ಯಾರ್ಥಿನಿ!
ಕಳೆದ ವರ್ಷ ದೆಹಲಿ ಹೈಕೋರ್ಟ್, ‘ಪೋಕ್ಸೋ ಕಾಯ್ದೆಯ ಹಿಂದಿನ ಉದ್ದೇಶವು ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವುದಾಗಿದೆ. ಆದರೆ ಇದು ‘ಯುವ ವಯಸ್ಕರ’ ನಡುವಿನ ‘ಸಹಮತದ ಪ್ರಣಯ ಸಂಬಂಧ’ಕ್ಕೆ ಅಪರಾಧ ಪಟ್ಟ ಕಟ್ಟುವ ಉದ್ದೇಶ ಹೊಂದಿಲ್ಲ’ ಎಂದಿತ್ತು.
ಈ ಉಲ್ಲೇಖಗಳ ಹಿನ್ನೆಲೆಯಲ್ಲಿ ಕಾನೂನು ಆಯೋಗವು ಈ ವಿಷಯದ ಬಗ್ಗೆ ಕಾನೂನಿನ ನಿಬಂಧನೆಗಳ ಪರಿಶೀಲನೆ ಪ್ರಾರಂಭಿಸಿದೆ. ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಷಯದ ಬಗ್ಗೆ ವಿವರಗಳನ್ನು ಕೇಳಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
ಇದನ್ನೂ ಓದಿ: ಸಹೋದರಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನ ಮೇಲೆ ಚಾಕು ಹಾಕಿದ ಯುವಕ