ಸಂಯಮ ಅಥವಾ ನಾಶ: ಇರಾನ್ ದಾಳಿಯ ಬಳಿಕ ಇಸ್ರೇಲ್ ಮುಂದಿರುವ 4 ಆಯ್ಕೆಗಳು

By Suvarna News  |  First Published Oct 3, 2024, 2:52 PM IST

ಇಸ್ರೇಲಿನ ನಾಲ್ಕು ಆಯ್ಕೆಗಳಲ್ಲಿ ಮೊದಲನೇ ಆಯ್ಕೆಯೆಂದರೆ, ಇರಾನಿನ ತೈಲ ಉದ್ಯಮವನ್ನು ಗುರಿಯಾಗಿಸುವುದು. ಇದು ಬಹುತೇಕ ಸರಳ ಕ್ರಮವಾಗಿದ್ದು, ಇರಾನಿನ ಬಹುತೇಕ ತೈಲ ವ್ಯವಸ್ಥೆಗಳು ಪರ್ಷಿಯನ್ ಕೊಲ್ಲಿಯ ಖಾರ್ಗ್ ದ್ವೀಪದಲ್ಲಿದೆ. ಇದಕ್ಕೆ ಹಾನಿಯಾದರೆ, ಅದರ ಪರಿಣಾಮ ಗಂಭೀರವಾಗಲಿದೆ.


ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಇರಾನ್ ಇಸ್ರೇಲ್ ಮೇಲೆ ಅತ್ಯಂತ ಬೃಹತ್ತಾದ ಕ್ಷಿಪಣಿ ದಾಳಿ ನಡೆಸಿದ ಬಳಿಕ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮುಂದೆ ಒಂದು ಕಷ್ಟಕರವಾದ ಸನ್ನಿವೇಶ ನಿರ್ಮಾಣವಾಗಿದೆ. ನೆತನ್ಯಾಹು ಅವರ ಬೆಂಬಲಿಗರು ಇರಾನ್ ಆಕ್ರಮಣಕ್ಕೆ ಅತ್ಯಂತ ಗಂಭಿರ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಇಸ್ರೇಲ್‌ನ ಮಿತ್ರ ರಾಷ್ಟ್ರವಾದ ಅಮೆರಿಕಾ ಸರ್ಕಾರ ಮಾತ್ರ ಈ ಸನ್ನಿವೇಶವನ್ನು ಪೂರ್ಣ ಪ್ರಮಾಣದ ಪ್ರಾದೇಶಿಕ ಯುದ್ಧದ ರೂಪ ತಾಳುವಂತೆ ಮಾಡಬೇಡಿ ಎಂದು ಸಲಹೆ ನೀಡುತ್ತಿದೆ.

Tap to resize

Latest Videos

undefined

ಇಸ್ರೇಲ್ ನಾಯಕರು ಇರಾನ್ ತಮ್ಮ ದೇಶದ ಮೇಲೆ ಮಂಗಳವಾರ ಸಂಜೆ ಪ್ರಯೋಗಿಸಿದ ಬಹುತೇಕ 200 ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಹೇಗೆ ಪ್ರತಿಕ್ರಿಯೆ ನೀಡುವುದು ಎಂಬ ಆಲೋಚನೆಯಲ್ಲಿ ತೊಡಗಿದ್ದರೆ, ಇಸ್ರೇಲ್ ನಾಗರಿಕರು ಅಕ್ಟೋಬರ್ 2, ಬುಧವಾರದಿಂದ ಆರಂಭಗೊಳ್ಳುವ ಹೀಬ್ರೂ ಹೊಸ ವರ್ಷವಾದ ರಾಷ್ ಹಶಾನಾದ ಆಚರಣೆಗೆ ಸಿದ್ಧರಾಗುತ್ತಿದ್ದಾರೆ.

ಕಳೆದ ಹೀಬ್ರೂ ವರ್ಷ ಇಸ್ರೇಲಿನ ಇತಿಹಾಸದಲ್ಲೇ ಒಂದು ಅತ್ಯಂತ ಹಿಂಸಾತ್ಮಕ ವರ್ಷವಾಗಿದ್ದರಿಂದ, ವರ್ಷದ ಕೊನೆಯಾಯಿತೆಂದು ಜನರಲ್ಲಿ ಯಾವುದೇ ಬೇಸರಗಳಿಲ್ಲ. ಇದೆಲ್ಲವೂ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ  ಆಕ್ರಮಣದಿಂದ ಆರಂಭಗೊಂಡು, ಹಮಾಸ್ ಮತ್ತು ಹೆಜ್ಬೊಲ್ಲಾಗಳ ಜೊತೆಗಿನ ಯುದ್ಧವಾಗಿ, ಅಂತಿಮವಾಗಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯೊಂದಿಗೆ ವರ್ಷಾಂತ್ಯ ಕಂಡಿದೆ. ಅಂದರೆ, ಇಷ್ಟೊಂದು ಸವಾಲಿನದಾದ, ಹಿಂಸಾತ್ಮಕವಾದ ವರ್ಷ ಮುಕ್ತಾಯ ಕಂಡಿತೆಂದು ಇಸ್ರೇಲಿಗರು ಈಗ ನಿರಾಳವಾಗಿದ್ದಾರೆ.

ಇಸ್ರೇಲಿನ ಭದ್ರತೆಯನ್ನು ಭೇದಿಸಿ, ಇಸ್ರೇಲ್ - ಗಾಜಾ ಗಡಿಯಾದ್ಯಂತ ದಾಳಿ ನಡೆಸಿದ್ದ ಹಮಾಸ್, ಆರಂಭದಲ್ಲಿ ಇಸ್ರೇಲ್ ಪಾಲಿನ ಅತಿದೊಡ್ಡ ಅಪಾಯ ಎಂಬಂತೆ ಭಾಸವಾಗಿತ್ತು.

ಹೆಜ್ಬೊಲ್ಲಾ ಹಮಾಸ್‌ಗಿಂತಲೂ ದೊಡ್ಡ ಅಪಾಯ ಎಂಬಂತೆ ತೋರಿದ್ದರೂ, ಅದು ಲೆಬನಾನಿನ ಗಡಿಯಾಚೆಯಿಂದ ಇಸ್ರೇಲಿ ಪಡೆಗಳೊಡನೆ ಚಕಮಕಿಯಲ್ಲಷ್ಟೇ ನಿರತವಾಗಿ ಬೆಂಬಲ ಸೂಚಿಸಿತ್ತು.

ಆದರೆ, ಕೆಲವು ವಾರಗಳ ಹಿಂದೆ ಪರಿಸ್ಥಿತಿ ಬದಲಾಯಿತು. ಗಾಜಾದಲ್ಲಿ ಹಮಾಸ್ ಬಹುತೇಕ ಸೋಲು ಕಂಡಿದ್ದು, ಇಸ್ರೇಲಿನ ಮುಖ್ಯ ಗಮನ ಈಗ ಹಮಾಸ್ ಮೇಲಿಲ್ಲ.

ಇಸ್ರೇಲಿನ ಗಮನ ಈಗ ಹೆಜ್ಬೊಲ್ಲಾ ಮೇಲೆ ಹರಿದಿದ್ದು, ಅದರ ವಿರುದ್ದ ಹಲವು ಪ್ರಮುಖ ಗೆಲುವುಗಳನ್ನು ಇಸ್ರೇಲ್ ದಾಖಲಿಸಿದೆ. ಹೆಜ್ಬೊಲ್ಲಾದ ಬಹುಪಾಲು ನಾಯಕತ್ವವನ್ನು ಇಸ್ರೇಲ್ ಅಳಿಸಿ ಹಾಕಿದ್ದು, ಹೆಜ್ಬೊಲ್ಲಾ ಸಂಘಟನೆಯ ಆಯುಧ ಸಂಗ್ರಹಕ್ಕೆ ಹಾನಿ ಉಂಟುಮಾಡಿದೆ.

ಮಂಗಳವಾರ, ಅಕ್ಟೋಬರ್ 1ರ ಸಂಜೆ, ಹೆಜ್ಬೊಲ್ಲಾದ ಪ್ರಮುಖ ಬೆಂಬಲಿಗನಾದ ಇರಾನ್ ಸಹ ಯುದ್ಧ ರಂಗಕ್ಕೆ ಇಳಿಯಿತು.

ಇರಾನ್ ಇಸ್ರೇಲ್ ಮೇಲೆ ಬಹಳಷ್ಟು ಕ್ಷಿಪಣಿಗಳನ್ನು ಪ್ರಯೋಗಿಸಿದರೂ, ಅಮೆರಿಕಾದ ಬೆಂಬಲದೊಡನೆ ಇಸ್ರೇಲಿನ ವಾಯು ರಕ್ಷಣಾ ವ್ಯವಸ್ಥೆ ಬಹುತೇಕ ಕ್ಷಿಪಣಿಗಳನ್ನು ಹೊಡೆದುರುಳಿಸಲು ಯಶಸ್ವಿಯಾಯಿತು.

ಕೆಲವು ಕ್ಷಿಪಣಿಗಳು ಇಸ್ರೇಲಿನ ಒಳನುಗ್ಗಲು ಯಶಸ್ವಿಯಾಗಿ, ಒಂದಷ್ಟು ಹಾನಿ ಉಂಟುಮಾಡಿದವು. ಆದರೆ, ಜೆರಿಕೋದ ಬಳಿ ಕ್ಷಿಪಣಿಯೊಂದರ ಅವಶೇಷ ಬಿದ್ದು ಓರ್ವ ಪ್ಯಾಲೆಸ್ತೀನಿಯನ್ ನಾಗರಿಕ ಸಾವನ್ನಪ್ಪಿದ್ದರ ಹೊರತಾಗಿ, ಇಸ್ರೇಲಿಗರು ಯಾರೂ ಸಾವಿಗೀಡಾಗಲಿಲ್ಲ.

ಇಸ್ರೇಲಿ ವಾಯು ಸೇನೆಯ ವಿಮಾನಗಳಿಗೆ ಯಾವುದೇ ಹಾನಿಯಾಗಿಲ್ಲ. ಇರಾನ್ ದಾಳಿಯಲ್ಲಿ ಇಸ್ರೇಲಿನ ಸೇನಾ ಸಾಮರ್ಥ್ಯವೂ ಕುಂಠಿತವಾಗಿಲ್ಲ.

ತನ್ನ ಪ್ರಮುಖ ಆಯುಧಗಳನ್ನು ಪ್ರಯೋಗಿಸಿದ ಇರಾನ್

ಎಪ್ರಿಲ್ 14ರಂದು ನಡೆಸಿದ ಮೊದಲ ದಾಳಿಯಲ್ಲಿ, ಇರಾನ್ ಇಸ್ರೇಲ್ ಮೇಲೆ 110 ಬ್ಯಾಲಿಸ್ಟಿಕ್ ಕ್ಷಿಪಣಿಗಳು, ನಿಧಾನವಾಗಿ ಸಾಗುವ ಕ್ರೂಸ್‌ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಪ್ರಯೋಗಿಸಿತ್ತು. ಆದರೆ ಇಸ್ರೇಲ್ ಅವುಗಳಲ್ಲಿ ಬಹುತೇಕ ಕ್ಷಿಪಣಿಗಳನ್ನು ತಡೆಗಟ್ಟಲು ಯಶಸ್ವಿಯಾಗಿತ್ತು. ಈ ಬಾರಿ ಇರಾನ್ ಕೇವಲ 12 ನಿಮಿಷಗಳಲ್ಲಿ ಇಸ್ರೇಲ್ ತಲುಪುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿತ್ತು.

ಭಾರತದ ರಾಷ್ಟ್ರೀಯ ಬಾಹ್ಯಾಕಾಶ ದಿನ: ಚಂದ್ರನಂಗಳ ದಾಟಿ, ಜನಜೀವನದಲ್ಲಿ ಬದಲಾವಣೆ ತರುವ ಸಾಧನೆ

"ಇರಾನಿಯನ್ನರು ಪರಿಸ್ಥಿತಿಯನ್ನು ಅಧ್ಯಯನ ನಡೆಸುವ, ವಿಶ್ಲೇಷಿಸುವ ಕೌಶಲ ಹೊಂದಿದ್ದಾರೆ" ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಇಸ್ರೇಲಿ ಭದ್ರತಾ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ತಮ್ಮ ಹಿಂದಿನ ತಪ್ಪುಗಳಿಂದ ಪಾಠ ಕಲಿತ ಇರಾನಿಯನ್ನರು ಈ ಬಾರಿ ದಾಳಿ ನಡೆಸಲು ಹೆಚ್ಚು ಭಾರವಾದ, ಹೆಚ್ಚು ನಿಖರವಾದ, ವೇಗವಾಗಿ ಸಾಗಬಲ್ಲ ಕ್ಷಿಪಣಿಗಳನ್ನು ಆಯ್ಕೆ ಮಾಡಿಕೊಂಡರು.

ಕೆಲವು ಕ್ಷಿಪಣಿಗಳಾದರೂ ಇಸ್ರೇಲಿನ ಭದ್ರತಾ ವ್ಯವಸ್ಥೆಯನ್ನು ಭೇದಿಸಿ, ಇಸ್ರೇಲ್ ಒಳನುಗ್ಗಿ, ತಮ್ಮ ಗುರಿಗಳಿಗೆ ಅಪ್ಪಳಿಸಬಹುದು ಎಂದು ಅವರು ಭಾವಿಸಿದ್ದರು.

ಇಸ್ರೇಲ್ ಆಗಸದೊಳಗೆ ಬರುತ್ತಿದ್ದ ಇರಾನಿ ಕ್ಷಿಪಣಿಗಳನ್ನು ಕತ್ತಲಿನ ಆಕಾಶದಲ್ಲಿ ಇಸ್ರೇಲಿನ ಆ್ಯರೋ ಇಂಟರ್‌ಸೆಪ್ಟರ್‌ಗಳು ಹೊಡೆದುರುಳಿಸತೊಡಗಿದವು. ಆಗ ಲಕ್ಷಾಂತರ ಇಸ್ರೇಲಿಗರು ಬಾಂಬ್ ಆಶ್ರಯ ಕೇಂದ್ರಗಳಲ್ಲಿ ರಕ್ಷಣೆ ಪಡೆಯುವಂತಾಯಿತು.

"ಒಂದು ವೇಳೆ ಇರಾನ್ ಈಗಾಗಲೇ ಅಣ್ವಸ್ತ್ರ ಸಜ್ಜಿತವಾಗಿದೆ ಎಂದು ಊಹಿಸಿಕೊಳ್ಳಿ. ಹಾಗಿರುವಾಗಿ, ಇರಾನ್ ಪ್ರಯೋಗಿಸಿದ ಒಂದು ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿದ್ದು, ಅದು ಇಸ್ರೇಲ್ ಒಳ ನುಗ್ಗಿದರೆ ಪರಿಸ್ಥಿತಿ ಏನಾಗಬಹುದು? ಇರಾನ್ ಏನಾದರೂ ಅಣ್ವಸ್ತ್ರ ರಾಷ್ಟ್ರವಾದರೆ, ನಾವು ಅದರ ಒಂದೇ ಒಂದು ಕ್ಷಿಪಣಿಯನ್ನೂ ಒಳ ಪ್ರವೇಶಿಸಲು ಬಿಡಲಾಗದು" ಎಂದು ಇಸ್ರೇಲಿನ ಹಿರಿಯ ರಾಜಕೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ನಮಗೆ ಈಗ ಮಧ್ಯ ಪೂರ್ವವನ್ನು ಮರು ರೂಪಿಸುವ ಒಂದು ಅಪೂರ್ವ ಅವಕಾಶವಿದೆ. ಇರಾನಿನ ಅಣ್ವಸ್ತ್ರ ಅಪಾಯವನ್ನು ತೊಡೆದು ಹಾಕಿ, ತಲೆಮಾರುಗಳ ಕಾಲ ಇಸ್ರೇಲನ್ನು ರಕ್ಷಿಸುವ ವ್ಯವಸ್ಥೆ ರೂಪಿಸಬಹುದು" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಇದನ್ನು ಕಾರ್ಯಗತಗೊಳಿಸುವುದು ಹೇಳಿದಷ್ಟು ಸುಲಭವಲ್ಲ. ಅಕ್ಟೋಬರ್ 1 ಮಂಗಳವಾರದಂದು, ನೂತನವಾಗಿ ಆರಂಭವಾದ ಭೂಗತ ಬಂಕರ್‌ನಲ್ಲಿ ಭದ್ರತಾ ಸಚಿವ ಸಂಪುಟದ ಸಭೆ ನಡೆಸಿದ ನೆತನ್ಯಾಹು ಅವರು, ಇರಾನ್ ಒಂದು ಗಂಭೀರ ತಪ್ಪು ಮಾಡಿದ್ದು, ಇದಕ್ಕೆ ಸೂಕ್ತ ಪರಿಣಾಮಗಳನ್ನು ಎದುರಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

"ಇರಾನಿನ ಆಡಳಿತ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ವಿಚಾರದಲ್ಲಿ ಎಷ್ಟು ಬದ್ಧತೆ ಹೊಂದಿದ್ದೇವೆ ಎಂಬುದನ್ನು ಅರಿತಿಲ್ಲ. ನಾವು ನಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಮತ್ತು ಶತ್ರುವಿನ ಮೇಲೆ ಪ್ರತಿದಾಳಿ ನಡೆಸಲು ಬದ್ಧವಾಗಿದ್ದೇವೆ" ಎಂದು ನೆತನ್ಯಾಹು ಹೇಳಿದ್ದಾರೆ. ಅವರು ಹೆಜ್ಬೊಲ್ಲಾ ಮುಖಂಡ ಹಸನ್ ನಸ್ರಲ್ಲಾ ಸೇರಿದಂತೆ, ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಹಮಾಸ್ ಮತ್ತು ಹೆಜ್ಬೊಲ್ಲಾ ಸಂಘಟನೆಗಳ ಮುಖಂಡರ ಪಟ್ಟಿಯನ್ನೇ ನೀಡಿದ್ದಾರೆ.

"ಇಂದಿಗೂ ಟೆಹರಾನ್‌ನಲ್ಲಿ ಒಂದಷ್ಟು ಜನರಿಗೆ ನಾವೇನು ಮಾಡಬಲ್ಲೆವು ಎಂದು ತಿಳಿದಿಲ್ಲ. ಆದರೆ ಅವರಿಗೆ ಅದು ಅರ್ಥವಾಗುವ ದಿನ ಸನಿಹದಲ್ಲಿದೆ" ಎಂದು ನೆತನ್ಯಾಹು ಹೇಳಿದ್ದಾರೆ.

ನೆತನ್ಯಾಹು ಅವರ ಹೇಳಿಕೆಯನ್ನು ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ, ಇತರ ನಾಯಕರಿಗೆ ನೇರ ಎಚ್ಚರಿಕೆ ಎಂದು ಪರಿಗಣಿಸಲಾಗಿದೆ. ಖಮೇನಿ ಸೆಪ್ಟೆಂಬರ್ 27ರ ನಸ್ರಲ್ಲಾ ಹತ್ಯೆಯ ಬಳಿಕ ಬಚ್ಚಿಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟದೊಡನೆ ಇಸ್ರೇಲಿನ ಮುಂದಿನ ಹೆಜ್ಜೆಗಳನ್ನು ಚರ್ಚಿಸಿದ ನೆತನ್ಯಾಹು, ತನ್ನ ನಂಬಿಕಾರ್ಹ ಅಧಿಕಾರಿಗಳೊಡನೆಯೂ ಸಮಾಲೋಚನೆ ನಡೆಸಿದ್ದಾರೆ.

ಅವರು ಶ್ವೇತ ಭವನವನ್ನೂ ಸಂಪರ್ಕಿಸಿ, ಇರಾನ್ ವಿರುದ್ಧದ ಕ್ರಮದಲ್ಲಿ ಕೈ ಜೋಡಿಸುತ್ತೀರಾ ಎಂದು ವಿಚಾರಿಸಿದ್ದಾರೆ.

"ಇರಾನ್‌ಗೆ ನಾವು ಗಂಭೀರ ಪ್ರತಿಕ್ರಿಯೆ ನೀಡಬೇಕು ಎನ್ನುವುದು ಅಮೆರಿಕಾಗೂ ತಿಳಿದಿದೆ. ಆದರೆ, ಅಮೆರಿಕಾ ಇದರಲ್ಲಿ ನೇರವಾಗಿ ಪಾಲ್ಗೊಳ್ಳುತ್ತದೆ ಎನ್ನಲು ಸಾಧ್ಯವಿಲ್ಲ" ಎಂದು ಇಸ್ರೇಲಿ ರಾಜಕೀಯ ಮೂಲಗಳು ತಿಳಿಸಿವೆ.

ಇಸ್ರೇಲಿನ ಮುಂದಿನ ನಾಲ್ಕು ಆಯ್ಕೆಗಳು

ಇಸ್ರೇಲ್ ಮುಂದೆ ಈಗ ನಾಲ್ಕು ಪ್ರಮುಖ ಆಯ್ಕೆಗಳಿವೆ.

ಮೊದಲನೇ ಆಯ್ಕೆಯೆಂದರೆ, ಇರಾನಿನ ತೈಲ ಉದ್ಯಮವನ್ನು ಗುರಿಯಾಗಿಸುವುದು. ಇದು ಬಹುತೇಕ ಸರಳ ಕ್ರಮವಾಗಿದ್ದು, ಇರಾನಿನ ಬಹುತೇಕ ತೈಲ ವ್ಯವಸ್ಥೆಗಳು ಪರ್ಷಿಯನ್ ಕೊಲ್ಲಿಯ ಖಾರ್ಗ್ ದ್ವೀಪದಲ್ಲಿದೆ. ಇದಕ್ಕೆ ಹಾನಿಯಾದರೆ, ಅದರ ಪರಿಣಾಮ ಗಂಭೀರವಾಗಲಿದೆ.

ಎರಡನೇ ಆಯ್ಕೆಯೆಂದರೆ, ಇರಾನಿನ ಆಡಳಿತದ ಪ್ರಮುಖ ಸಂಕೇತಗಳ ಮೇಲೆ ದಾಳಿ ನಡೆಸುವುದು. (ಇಲ್ಲಿ ಆಡಳಿತ ಸಂಕೇತಗಳೆಂದರೆ ಸರ್ಕಾರಿ ಕಟ್ಟಡಗಳು, ನಾಯಕತ್ವದ ಕೇಂದ್ರಗಳು, ಅಥವಾ ಇರಾನಿನ ಸಾಮರ್ಥ್ಯ ಮತ್ತು ಅಧಿಕಾರವನ್ನು ಪ್ರತಿನಿಧಿಸುವ, ರಾಯಭಾರ ಕಚೇರಿಗಳಂತಹ ಕಟ್ಟಡಗಳು).

ಇನ್ನು ಮೂರನೇ ಆಯ್ಕೆ ಎಂದರೆ, ಇರಾನಿನ ಅತ್ಯುನ್ನತ ಹಂತದ ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಸುವುದು.

ನಾಲ್ಕನೇ ಆಯ್ಕೆಯಾಗಿ, ಇರಾನಿನ ಪರಮಾಣು ವ್ಯವಸ್ಥೆಗಳನ್ನು ಗುರಿಯಾಗಿಸಿ, ಇರಾನಿನ ಪರಮಾಣು ಕೇಂದ್ರ ಮತ್ತು ವ್ಯವಸ್ಥೆಗಳನ್ನು ಇಲ್ಲವಾಗಿಸುವುದು.

ರಾಜತಾಂತ್ರಿಕ ಮೂಲಗಳ ಪ್ರಕಾರ, ಇಸ್ರೇಲ್ ಜೊತೆಗಿನ ಮಾತುಕತೆಯಲ್ಲಿ ಅಮೆರಿಕನ್ ಅಧಿಕಾರಿಗಳು ಇಸ್ರೇಲಿಗರಿಗೆ ತಮ್ಮ ಪ್ರತಿಕ್ರಿಯೆಯನ್ನು ಮಿತಿಯಲ್ಲಿಟ್ಟು, ಇರಾನ್‌ಗೆ ಅದನ್ನು ನಿರ್ವಹಿಸಲು ಸಾಧ್ಯವಾಗುವಂತೆ ನೋಡಿಕೊಳ್ಳುವ ಸಲಹೆ ನೀಡಿದ್ದಾರೆ.

ಇಸ್ರೇಲ್ ನೇರವಾಗಿ ಇರಾನಿನ ತೈಲೋದ್ಯಮದ ಮೇಲೆ ದಾಳಿ ನಡೆಸುವುದನ್ನು ಅಮೆರಿಕಾ ವಿರೋಧಿಸಿದೆ. ಇದರಿಂದಾಗಿ ಇಸ್ರೇಲಿನ ಪ್ರಾದೇಶಿಕ ಸಹಯೋಗಿಗಳಿಗೆ ತೈಲ ಮತ್ತು ಅನಿಲ ವ್ಯವಸ್ಥೆಯನ್ನು ಇರಾನ್ ನಿರಾಕರಿಸಿ, ಜಾಗತಿಕ ಇಂಧನ ಸಮಸ್ಯೆ ತಲೆದೋರಬಹುದು ಎಂಬುದು ಅಮೆರಿಕಾದ ಕಳವಳವಾಗಿದೆ.

ನೆತನ್ಯಾಹು ಅವರಿಗೆ ತಮ್ಮ ಹಿಂದಿನ ಕೆಲವು ಮುಖಂಡರು ಎದುರಿಸಿದಂತಹ ಸವಾಲುಗಳು ಎದುರಾಗಿವೆ. ಒಂದು ವೇಳೆ ಗಂಭೀರ ಮಿಲಿಟರಿ ದಾಳಿ ನಡೆಸಿ, ಇರಾನಿನ ಆಡಳಿತ ಮತ್ತು ಆರ್ಥಿಕತೆಗೆ ಹಾನಿ ಉಂಟುಮಾಡಿದರೆ, ಅದರ ಪರಿಣಾಮವಾಗಿ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗಬಹುದು.

ಇನ್ನೊಂದೆಡೆ, ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಜನರು ನೆತನ್ಯಾಹು ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಹಮಾಸ್ ಮತ್ತು ಹೆಜ್ಬೊಲ್ಲಾಗಳ ವಿರುದ್ಧದ ಗುಪ್ತಚರ ಮತ್ತು ಮಿಲಿಟರಿ ಯಶಸ್ಸೂ ಕಾರಣವಾಗಿದೆ.

2024ರಲ್ಲಿ, ನೆತನ್ಯಾಹು ಹಿಂದೆಂದಿಗಿಂತಲೂ ಧೈರ್ಯಶಾಲಿಯಾಗಿದ್ದಾರೆ. ಅವರು ಹಿಂದೆ ಪರಿಗಣಿಸದಿದ್ದ ತೀವ್ರ ಕ್ರಮಗಳನ್ನು ಕೈಗೊಳ್ಳಲೂ ಈಗ ಸಿದ್ಧರಾಗಿದ್ದಾರೆ. ಇದಕ್ಕೆ ಲೆಬನಾನ್ ಮೇಲೆ ಅವರು ಕೈಗೊಂಡ ಆಕ್ರಮಣವೂ ಸಾಕ್ಷಿಯಾಗಿದೆ. ಅವರು ಅಕ್ಟೋಬರ್ 7ರ ದಾಳಿಯ ಅವಮಾನವನ್ನು ತೊಡೆದು ಹಾಕಲು ಎಂತಹ ಕ್ರಮಕ್ಕೂ ಸಿದ್ಧರಾಗಿದ್ದಾರೆ ಎಂದು ಅವರ ವಿರೋಧಿಗಳು ಹೇಳುತ್ತಿದ್ದಾರೆ.

ಈಗಿನ ಸವಾಲೆಂದರೆ, ಅನಗತ್ಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳದೆ, ಇದನ್ನು ಸಾಧಿಸುವುದು ಹೇಗೆ ಎನ್ನುವುದಾಗಿದೆ. ಇರಾನ್ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ನಡೆಸುವುದು ದುಡುಕಿನ ನಿರ್ಧಾರವಾಗಬಹುದು. ಹಾಗೆಂದು ಇಸ್ರೇಲ್ ಈ ನಿರ್ಧಾರ ಕೈಗೊಳ್ಳದು ಎನ್ನಲೂ ಸಾಧ್ಯವಿಲ್ಲ. ಆದರೆ ಇರಾನ್, ಮಂಗಳವಾರದ ತನ್ನ ಕ್ಷಿಪಣಿ ದಾಳಿ ಇಸ್ರೇಲ್ ಜೊತೆಗಿನ ತನ್ನ ಲೆಕ್ಕಾಚಾರವನ್ನು ಸರಿಯಾಗಿಸಿದೆ ಎಂದಿದೆ.

ಬಂಗಾಳ ಕೊಲ್ಲಿಯಲ್ಲಿ ತಳಮಳ: ಸೈಂಟ್ ಮಾರ್ಟಿನ್ಸ್ ದ್ವೀಪ ಮತ್ತು ಶೇಖ್ ಹಸೀನಾ ಪದಚ್ಯುತಿ ನಡುವೆ ಒಳಸಂಚು?

"ಇರಾನ್ ಮಧ್ಯ ಪೂರ್ವದಲ್ಲಿ ಉಳಿದಿರುವ ತನ್ನ ಚೂರುಪಾರು ಗೌರವವನ್ನು ಕಾಪಾಡಿಕೊಂಡಿದೆ" ಎಂದು ಹಿರಿಯ ಇಸ್ರೇಲಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಕೆಲವೊಂದು ಬಾರಿ ಉಭಯ ಪಕ್ಷಗಳಿಗೆ ಅವಶ್ಯಕತೆ ಇಲ್ಲದಿದ್ದರೂ ಯುದ್ಧ ನಡೆದುಬಿಡುತ್ತದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಈಗಿನ ಪರಿಸ್ಥಿತಿಯೂ ಇದಕ್ಕೆ ಉದಾಹರಣೆಯಾಗಿದೆ. ಹೀಬ್ರೂ ಹೊಸ ವರ್ಷ ಇರಾನ್ - ಇಸ್ರೇಲ್ ನಡುವೆ ಇನ್ನಷ್ಟು ತೀಕ್ಷ್ಣ ಸಮರಕ್ಕೂ ಸಾಕ್ಷಿಯಾಗಬಹುದು, ಅಥವಾ ಅವೆರಡರ ನಡುವಿನ ಉದ್ವಿಗ್ನತೆ ನಿಧಾನವಾಗಿ ತಣ್ಣಗಾಗಲೂಬಹುದು.

click me!