ಕೋವಿಡ್‌ 3ನೇ ಅಲೆ ಮಕ್ಕಳಿಗೆ ಭೀಕರ: 2ನೇ ಅಲೆಗಿಂತ 7 ಪಟ್ಟು ಹೆಚ್ಚು ಸೋಂಕು!

By Kannadaprabha NewsFirst Published Sep 6, 2021, 8:18 AM IST
Highlights

* ಕೋವಿಡ್‌ 3ನೇ ಅಲೆ ಮಕ್ಕಳಿಗೆ ಭೀಕರ, ಏಳು ಪಟ್ಟು ಹೆಚ್ಚು ಚಿಣ್ಣರಿಗೆ ಸೋಂಕು?

* ಮುಂಜಾಗ್ರತೆ ಇಲ್ಲದಿದ್ದರೆ ಹೆಚ್ಚು ಬಾಧೆ, ಆದರೆ ಗಂಭೀರ ಅನಾರೋಗ್ಯವಿಲ್ಲ

* ಐಐಎಸ್‌ಸಿ, ಐಐಪಿಎಚ್‌ ಅಧ್ಯಯನ ಲಸಿಕೆ ಹೆಚ್ಚಿಸಿದರೆ ಅಪಾಯ ಕಡಿಮೆ

ಬೆಂಗಳೂರು(ಸೆ.06): ರಾಜ್ಯದ ಮಕ್ಕಳಲ್ಲಿ ಕೊರೋನಾ ಸೋಂಕು ಪ್ರಮಾಣ ಕಡಿಮೆಯಾಗಿ ನಿಟ್ಟುಸಿರು ಬಿಡುತ್ತಿರುವ ಹೊತ್ತಿನಲ್ಲೇ ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಸೋಂಕಿಗೆ ತುತ್ತಾಗಲಿದ್ದಾರೆ ಎಂದು ವಿಜ್ಞಾನಿಗಳು ನಡೆಸಿದ ಅಧ್ಯಯನದ ವರದಿಯಲ್ಲಿ ಎಚ್ಚರಿಸಲಾಗಿದೆ.

 

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಹೆಲ್ತ್‌ (ಐಐಪಿಎಚ್‌) ಸಹಯೋಗದಲ್ಲಿ ನಡೆಸಿರುವ ಇನ್ನೂ ಪ್ರಕಟವಾಗದ ಅಧ್ಯಯನದ ವರದಿಯಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಕೊರೋನಾ ಮಾರ್ಗಸೂಚಿ ಪಾಲನೆಯಾಗದಿದ್ದರೆ ಹಾಗೂ ಎಲ್ಲ ವಯಸ್ಕರಿಗೂ ಲಸಿಕೆ ನೀಡದಿದ್ದರೆ ಮಕ್ಕಳಲ್ಲಿ ಎರಡನೇ ಅಲೆಗಿಂತ ಏಳು ಪಟ್ಟು ಹೆಚ್ಚು ಪ್ರಕರಣಗಳು ಮೂರನೇ ವೇಳೆ ಉಂಟಾಗಬಹುದು ಎಂದು ಅಂದಾಜಿಸಿದೆ.

ಆದರೆ, ಇದು ಸರಾಸರಿ ಸಾಧ್ಯತೆಯ ವರದಿಯಾಗಿದ್ದು, ಲಸಿಕೆ ನೀಡಿಕೆ, ಮುಂಜಾಗ್ರತಾ ಕ್ರಮಗಳ ಪಾಲನೆ ಇತ್ಯಾದಿ ಅಂಶಗಳ ಮೇಲೆ 3ರಿಂದ 7 ಪಟ್ಟಿನವರೆಗೆ ಏರಿಳಿತವಾಗಬಹುದು ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಹಾಗೂ ಐಐಪಿಎಚ್‌ ಮುಖ್ಯಸ್ಥ ಡಾ.ಗಿರಿಧರ್‌ ಬಾಬು ಹೇಳಿದ್ದಾರೆ.

ಮಕ್ಕಳಲ್ಲಿ ಸೋಂಕು ಉಂಟಾದರೂ ಗಂಭೀರ ಅನಾರೋಗ್ಯ ಇರುವುದಿಲ್ಲ

0-11 ವರ್ಷ ಮತ್ತು 12-17 ವರ್ಷದ ಮಕ್ಕಳಲ್ಲಿನ ಸೋಂಕು ಪ್ರಮಾಣದ ಬಗ್ಗೆ ಅಂದಾಜು ಮಾಡಲಾಗಿದೆ. ಇದು ಹೆದರಿಸುವ ನಿಟ್ಟಿನಲ್ಲಿ ನೀಡಿರುವ ವರದಿ ಅಲ್ಲ. ಬದಲಿಗೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ನೆರವಾಗುವ ವರದಿ. ಜೊತೆಗೆ ಮಲ್ಟಿಸಿಸ್ಟಮ್‌ ಇನ್‌ಫ್ಲೆಮೇಟರಿ ಸಿಂಡ್ರೋಮ್‌ ಪತ್ತೆಗೆ ಈಗಿನಿಂದಲೇ ವ್ಯವಸ್ಥೆ ಮಾಡಿಕೊಳ್ಳಬಹುದು. ಮಕ್ಕಳ ಐಸಿಯುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಲಾಗಿದೆ. ಕೊರೋನಾ ಸೋಂಕು ಉಂಟಾದರೂ ಗಂಭೀರ ಪ್ರಮಾಣದ ಅನಾರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಬಹುತೇಕರಿಗೆ ಆಸ್ಪತ್ರೆಯ ಬೆಡ್‌ ಅಗತ್ಯವಿರುವುದಿಲ್ಲ ಎಂದೂ ಹೇಳಿದ್ದಾರೆ.

ಅಧ್ಯಯನ ನಡೆಸಿದ್ದು ಹೀಗೆ:

‘ಸ್ಟ್ರಾಟಜೀಸ್‌ ಟು ಮಿಟಿಗೇಟ್‌ ಕೋವಿಡ್‌-19 ರೆಸರ್ಜೆನ್ಸ್‌, ಅಸ್ಯೂಮಿಂಗ್‌ ಇಮ್ಯುನಿಟಿ ವೇನಿಂಗ್‌’ ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಅಧ್ಯಯನ ನಡೆಸಲಾಗಿದೆ. ಮೇ ತಿಂಗಳಿಂದ ಸೆಪ್ಟೆಂಬರ್‌ವರೆಗಿನ ಲಸಿಕೆ ಪಡೆದವರು, ಸೋಂಕಿತರು, ಸಕ್ರಿಯ ಪ್ರಕರಣಗಳು ಸೇರಿದಂತೆ ಐದು ಅಂಶಗಳನ್ನು ಇಟ್ಟುಕೊಂಡು ಮೂರು ಮಾದರಿಗಳಲ್ಲಿ ಅಧ್ಯಯನ ನಡೆಸಲಾಗಿದೆ. ರಾಜ್ಯದ 29 ಜಿಲ್ಲೆಗಳನ್ನು ತಲಾ ಒಂದೊಂದು ಘಟಕವಾಗಿ ಹಾಗೂ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರು ನಗರವನ್ನು 9 ಘಟಕಗಳಾಗಿ ವಿಂಗಡಿಸಿ ಒಟ್ಟು 38 ಘಟಕಗಳ ಅಂಕಿ-ಅಂಶಗಳನ್ನು ಇಟ್ಟುಕೊಂಡು ಮುಂದಿನ ಕೊರೋನಾ ಸೋಂಕಿನ ಬಗ್ಗೆ ಅಂದಾಜು ಮಾಡಲಾಗಿದೆ.

ತಜ್ಞರ ಸಲಹೆಗಳು:

ಅಧ್ಯಯನದ ಪ್ರಕಾರ ರಾಜ್ಯಕ್ಕೆ 9.8ರಿಂದ 12.6 ಕೋಟಿ ಡೋಸ್‌ ಲಸಿಕೆ ಅಗತ್ಯವಿದೆ. ಡಿಸೆಂಬರ್‌ ವೇಳೆಗೆ ಸಂಪೂರ್ಣ ಮಂದಿಗೆ ಲಸಿಕೆ ಹಾಕಬೇಕು. ಲಸಿಕೆ ದ್ವಿಗುಣಗೊಳಿಸಿ ಕೊರೋನಾ ಮಾರ್ಗಸೂಚಿ ಪಾಲಿಸಿದರೆ ಮೂರನೇ ಅಲೆ ತಡೆಯಬಹುದು. ಜನರ ಅನಗತ್ಯ ಸಂಚಾರ ನಿರ್ಬಂಧ, ದೈಹಿಕ ಅಂತರ ಹಾಗೂ ಮಾಸ್ಕ್‌ ಕಡ್ಡಾಯ, ಸಾಮೂಹಿಕವಾಗಿ ಜನ ಸೇರುವುದನ್ನು ನಿಷೇಧಿಸುವ ಮೂಲಕ ಮೂರನೇ ಅಲೆ ಬರದಂತೆ ನೋಡಿಕೊಳ್ಳಬಹುದು.

ಮಾರ್ಗಸೂಚಿ ಪಾಲಿಸಿ ಲಾಕ್‌ಡೌನ್‌ ಮಾದರಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಿದರೆ ಹೊಸ ರೂಪಾಂತರಿ ವೈರಾಣು ಸೃಷ್ಟಿಯಾದರೂ ಮೂರನೇ ಅಲೆ ಬರುವುದನ್ನು ತಕ್ಕ ಮಟ್ಟಿಗೆ ತಡೆಯಬಹುದು. ಸಂಪೂರ್ಣ ನಿಯಮಗಳನ್ನು ಪಾಲಿಸಿದರೆ ಹೊಸ ರೂಪಾಂತರಿ ವೈರಾಣು ಸೃಷ್ಟಿಯಾದರೂ ಮುಂದಿನ ವರ್ಷ ಅದು ಪ್ರಭಾವ ಬೀರಬಹುದು ಎಂದು ಅಂದಾಜಿಸಲಾಗಿದೆ.

ಅಧ್ಯಯನ ವರದಿ ಇನ್ನೂ ಪ್ರಕಟವಾಗಿಲ್ಲ

ಸಂಶೋಧನಾ ಲೇಖನ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಜತೆಗೆ ವರದಿಯನ್ನು ಅಂತಿಮ ಪರಾಮರ್ಶೆಗೆ ಒಳಪಡಿಸಿಲ್ಲ. ಐಐಎಸ್ಸಿ ವೆಬ್‌ಸೈಟ್‌ನಲ್ಲಿ ಮಾಹಿತಿಗಷ್ಟೇ ಪ್ರಕಟಿಸಿದ್ದು, ಹೊಸ ವೈದ್ಯಕೀಯ ಸಂಶೋಧನೆ ಅಥವಾ ಕ್ಲಿನಿಕಲ್‌ ಪ್ರಾಕ್ಟಿಸ್‌ಗೆ ಬಳಕೆ ಮಾಡುವಂತಿಲ್ಲ ಎಂದು ವೆಬ್‌ಸೈಟ್‌ನಲ್ಲಿ ಸೂಚನೆ ನೀಡಲಾಗಿದೆ.

ಈ ತಿಂಗಳು ಸೋಂಕು ನಿಯಂತ್ರಿಸಿದರೆ ಬಚಾವ್‌

ಇದೊಂದು ಮಾಡೆಲಿಂಗ್‌ ಅಧ್ಯಯನ. ಲಸಿಕೆ ವಿತರಣೆ ದುಪ್ಪಟ್ಟು ಮಾಡಿ, ಕೊರೋನಾ ಮಾರ್ಗಸೂಚಿ ಸ್ಪಷ್ಟವಾಗಿ ಪಾಲನೆ ಮಾಡಿದರೆ ಎಷ್ಟುಪ್ರಕರಣ ವರದಿಯಾಗುತ್ತದೆ, ನಿರ್ಲಕ್ಷಿಸಿದರೆ ಎಷ್ಟುಪ್ರಕರಣ ವರದಿಯಾಗುತ್ತದೆ ಎಂಬಿತ್ಯಾದಿ 167 ಮಾದರಿಗಳಲ್ಲಿ ಅಧ್ಯಯನ ನಡೆದಿದೆ. ಇದರ ಸರಾಸರಿ ಆಧಾರದ ಮೇಲೆ ಎರಡನೇ ಅಲೆಗಿಂತ 3ನೇ ಅಲೆಯಲ್ಲಿ ಮಕ್ಕಳಿಗೆ 3ರಿಂದ 7 ಪಟ್ಟು ಸೋಂಕು ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್‌ನಲ್ಲಿ ಸೋಂಕು ನಿಯಂತ್ರಿಸಿದರೆ ಬಹುತೇಕ 3ನೇ ಅಲೆಯಲ್ಲಿನ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.

- ಡಾ.ಗಿರಿಧರ ಬಾಬು, ಐಐಪಿಎಚ್‌ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ

ವರದಿಯಲ್ಲೇನಿದೆ?

- 2ನೇ ಅಲೆಗಿಂತ 3ನೇ ಅಲೆಯಲ್ಲಿ ಹೆಚ್ಚಿನ ಮಕ್ಕಳಿಗೆ ಸೋಂಕು

- ನಿಯಮ ಮೀರಿದರೆ, ವಯಸ್ಕರಿಗೆ ಲಸಿಕೆ ನೀಡದಿದ್ದರೆ ಅಪಾಯ

- ಮಕ್ಕಳಲ್ಲಿ 2ನೇ ಅಲೆಗಿಂತ 7 ಪಟ್ಟು ಅಧಿಕ ಪ್ರಕರಣ ಪತ್ತೆ ಸಾಧ್ಯತೆ

ಪರಿಹಾರ ಏನು?

- ಲಸಿಕೆ ಪ್ರಮಾಣ ದ್ವಿಗುಣಗೊಳಿಸಬೇಕು

- ಡಿಸೆಂಬರ್‌ ವೇಳೆಗೆ ಎಲ್ಲರಿಗೂ ಲಸಿಕೆ ನೀಡಬೇಕು

- ಅನಗತ್ಯ ಸಂಚಾರ ನಿರ್ಬಂಧಿಸಬೇಕು

- ಸಾಮೂಹಿಕವಾಗಿ ಜನ ಸೇರುವುದನ್ನು ನಿಷೇಧಿಸಬೇಕು

click me!