ಅನ್ನಪೂರ್ಣೇಶ್ವರಿ ನಗರ ಪೋಲೀಸ್ ಠಾಣೆಗೆ ಶಾಮಿಯಾನ ಹಾಕಿರುವ ಫೋಟೋ ಹಂಚಿಕೊಂಡಿರುವ ನಟ, ನಿರ್ದೇಶಕ ಉಪೇಂದ್ರ ಸಾರ್ವಜನಿಕ ವ್ಯಕ್ತಿಗಳ ಕೇಸ್ ವಿಚಾರಣೆಯ ವಿಡಿಯೋವನ್ನು ಸಾರ್ವಜನಿಕಗೊಳಿಸುವ ವ್ಯವಸ್ಥೆ ಬೇಕೆಂದು ಆಗ್ರಹಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಪಾರದರ್ಶಕ ವಿಚಾರಣೆ ಇರಬೇಕೆಂದು ನಟ, ನಿರ್ದೇಶಕ ಉಪೇಂದ್ರ ಆಗ್ರಹಿಸಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಪೋಲೀಸ್ ಠಾಣೆಗೆ ಶಾಮಿಯಾನ ಹಾಕಿರುವ ಫೋಟೋ ಹಂಚಿಕೊಂಡಿರುವ ನಟ, ಕಾನೂನು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಬೇಕಾದ ಸುಧಾರಣೆಗಳ ಬಗ್ಗೆ ತಮ್ಮ ಚಿಂತನೆಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಯಾವುದೇ ಕೇಸ್ ಆದರೂ ಆ ಕೇಸ್ ನ ವಿಚಾರಣೆಯ ವೀಡಿಯೋ ಧಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೋಲೀಸರು ಸಂಬಂದ ಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಸಾರ್ವಜನಿಕ ವ್ಯಕ್ತಿಯ ಕೇಸ್ ಆಗಿದ್ದರೆ, ಆತನ ವಿಚಾರಣೆಯ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕು. ಕಾನೂನಿನಲ್ಲಿ ಇಂಥ ಬದಲಾವಣೆ ತಂದರೆ ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಬೀಳುತ್ತದೆ ಎಂದು ಉಪ್ಪಿ ಹೇಳಿದ್ದಾರೆ.
undefined
ಉಪ್ಪಿ ಹೇಳಿದ್ದೇನು?
ದರ್ಶನ್ - ರೇಣುಕಾ ಸ್ವಾಮಿ - ಪಾರದರ್ಶಕ ವಿಚಾರಣೆ ಎಂಬ ತಲೆಬರಹ ನೀಡಿರುವ ಉಪೇಂದ್ರ, 'ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದರ್ಶನ್ ಬಂಧನ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮತ್ತು ಅದರ ವಿಚಾರಣೆ ಇಡೀ ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಬೆರಗಾಗಿ ನೋಡುತ್ತಿದೆ.
ಈ ಹೈ ಪ್ರೊಫೈಲ್ ಕೇಸ್ ನ ವಿಚಾರಣೆಯಲ್ಲಿ ನಿಷ್ಪಕ್ಷವಾದ ನಿರ್ಣಯ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ರೇಣುಕಾ ಸ್ವಾಮಿ ಕುಟುಂಬದಲ್ಲಿ, ಜನರಲ್ಲಿ, ಟೀವಿ ಮಾಧ್ಯಮಗಳಲ್ಲಿ ಮತ್ತು ದರ್ಶನ್ ಅಭಿಮಾನಿಗಳಲ್ಲಿ ಏನೇನೋ ಆತಂಕ, ಅನುಮಾನಗಳು ಕಾಡುತ್ತಿದೆ, ಊಹಾಪೋಹಗಳು ಹುಟ್ಟಿಕೊಳ್ಳುತ್ತಿದೆ. ಏಕೆಂದರೆ…… ಯಾವುದೇ ಕೇಸ್ ಆದರೂ ಆ ಕೇಸ್ ನ ವಿಚಾರಣೆಯ ವೀಡಿಯೋ ಧಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೋಲೀಸರು ಸಂಬಂದ ಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಅದು ಕಾನೂನಾಗಬೇಕು. ( ಹಿಂದೆಲ್ಲಾ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದು ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು )( ಕಾನೂನು ಸುಧಾರಣೆಗಳು #CriminalJusticeReforms )'
ಅದೇ ರೀತಿ ಒಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಕೇಸ್ ಆಗಿದ್ದರೆ ಆ ಕೇಸ್ ನ ವಿಚಾರಣೆಯ ವೀಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಪೋಲೀಸರು ಆಗಾಗ ಸಾರ್ವಜನಿಕವಾಗಿ ತೆರೆದಿಡಬೇಕು ಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು, ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ.
ಆಗ ರೇಣುಕಾ ಸ್ವಾಮಿ ಕುಟುಂಬಕ್ಕೆ, ಜನರಿಗೆ, ಟೀವಿ ಮಾಧ್ಯಮಗಳಿಗೆ ಮತ್ತು ದರ್ಶನ್ ಅಭಿಮಾನಿಗಳಿಗೆ ಮನಸಿನಲ್ಲಿ ಗೊಂದಲಗಳಿಲ್ಲದೆೇ ಪೋಲೀಸ್ ಮತ್ತು ಟೀವಿ ಮಾಧ್ಯಮಗಳ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಮತ್ತು ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬರುತ್ತದೆ' ಎಂದು ಹೇಳಿದ್ದಾರೆ.
ನಟನ ಈ ಅಭಿಪ್ರಾಯಕ್ಕೆ ಕಾಮೆಂಟ್ ಸೆಕ್ಷನ್ನಲ್ಲಿ ಹಲವರು ಸರಿಯಾದ ಚಿಂತನೆ ಎಂದು ತಲೆದೂಗಿದ್ದಾರೆ. ಮತ್ತೆ ಕೆಲವರು, ಹೀಗೆ ಮಾಡಿದರೆ ಹೊರಗಿರುವ ಆರೋಪಿಗಳ ಪರ ವಹಿಸುವವರು ಸಾಕ್ಷಿ ನಾಶ ಮಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲ ಬಳಕೆದಾರರು ಫೋಟೋದತ್ತ ತಮ್ಮ ಚಿತ್ತ, ಚಿಂತನೆ ಹರಿಬಿಟ್ಟಿದ್ದು- ಇದೇನು ಪೋಲೀಸ್ ಠಾಣೆಯೋ ಶಾಮಿಯಾನ ಅಂಗಡಿಯೋ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ಫೋಟೋ ನೋಡಿದರೆ ಇಲ್ಲೇನೋ ಕಾರ್ಯಕ್ರಮದ ಊಟ ಇರುವಂತಿದೆ ಎಂದಿದ್ದಾರೆ.
'ಸ್ಟೇಶನ್ ಗೆ ಶಾಮಿಯಾನ ಹಾಕಿ ಪಾರದರ್ಶಕ ತನಿಖೆ ಮುಂದುವರಿಸಿದ್ದಾರೆ' ಎಂದೊಬ್ಬರು ವ್ಯಂಗ್ಯವಾಡಿದ್ದಾರೆ.