ಕೋವಿಡ್‌ ಗೆದ್ದವರಿಗೊಂದು ಗುಡ್‌ ನ್ಯೂಸ್, ಬಯಲಾಯ್ತು ಅಚ್ಚರಿಯ ಮಾಹಿತಿ!

By Kannadaprabha NewsFirst Published Jan 25, 2021, 8:18 AM IST
Highlights

ಕೋವಿಡ್‌ ಗೆದ್ದವರಿಗೆ ಕನಿಷ್ಠ ತಿಂಗಳು ಸೋಂಕು ಬರಲ್ಲ| ದೇಹದಲ್ಲಿ ಪ್ರಬಲ ರೋಗನಿರೋಧಕ ಶಕ್ತಿ ಸೃಷ್ಟಿ| ಆಫ್ರಿಕಾ ಮಾದರಿ ವೈರಸ್‌ನಿಂದಲೂ ರಕ್ಷಣೆ| ಅಮೆರಿಕ ವಿಜ್ಞಾನಿಗಳ ಅಧ್ಯಯನದಲ್ಲಿ ಬಹಿರಂಗ

ನ್ಯೂಯಾರ್ಕ್(ಜ.25): ಕೊರೋನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡವರಿಗೆ ಕನಿಷ್ಠ ಆರು ತಿಂಗಳ ಕಾಲ ಕೋವಿಡ್‌ನಿಂದ ರಕ್ಷಣೆ ದೊರೆಯುತ್ತದೆ ಎಂಬ ಕುತೂಹಲಕರ ಮಾಹಿತಿ ಅಮೆರಿಕದ ಸಂಶೋಧರು ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ಕೊರೋನಾ ಗೆದ್ದವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುತ್ತದೆ. ಅದು ವಿಕಾಸವಾಗುತ್ತಲೇ ಇರುತ್ತದೆ. ಈ ಶಕ್ತಿಯು ದಕ್ಷಿಣ ಆಫ್ರಿಕಾ ಮಾದರಿಯ ಸೋಂಕನ್ನೂ ತಡೆಯಬಲ್ಲದು ಎಂಬ ಸಂಶೋಧನಾ ವರದಿ ಪ್ರಸಿದ್ಧ ವೈಜ್ಞಾನಿಕ ನಿಯತಕಾಲಿಕೆ ನೇಚರ್‌ನಲ್ಲಿ ಪ್ರಕಟಗೊಂಡಿದೆ.

ಕೊರೋನಾದಿಂದ ಸಂಪೂರ್ಣ ಗುಣಮುಖರಾದವರ ಕರುಳಿನ ಅಂಗಾಂಶಗಳಲ್ಲಿ ವೈರಸ್‌ನ ಅವಶೇಷಗಳು ಉಳಿದಿರುತ್ತವೆ. ಅದರ ವಿರುದ್ಧ ಹೋರಾಡಲು ದೇಹದಲ್ಲಿ ರೋಗನಿರೋಧಕ ಕೋಶಗಳು ಆ್ಯಂಟಿಬಾಡಿ (ಪ್ರತಿಕಾಯ)ಗಳನ್ನು ಉತ್ಪಾದಿಸುತ್ತಲೇ ಇರುತ್ತವೆ ಎಂದು ಅಮೆರಿಕದ ರಾಕ್‌ಫೆಲ್ಲರ್‌ ವಿಶ್ವವಿದ್ಯಾಲಯದವರೂ ಸೇರಿದಂತೆ ಹಲವು ವಿಜ್ಞಾನಿಗಳು ತಿಳಿಸಿದ್ದಾರೆ.

ವಿಶೇಷ ಎಂದರೆ, ದೇಹದ ರೋಗನಿರೋಧಕ ವ್ಯವಸ್ಥೆ ಕೊರೋನಾ ವೈರಸ್‌ ಅನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಸೋಂಕಿನ ತೀವ್ರತೆ ಕಡಿಮೆಯಾದರೂ ಅತ್ಯಂತ ಗುಣಮಟ್ಟದ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಮತ್ತೊಮ್ಮೆ ವೈರಸ್‌ ಕಾಣಿಸಿಕೊಂಡರೆ ದೇಹ ನೀಡುವ ಪ್ರತಿಕ್ರಿಯೆ ಅತ್ಯಂತ ವೇಗ ಹಾಗೂ ಪರಿಣಾಮಕಾರಿಯಾಗಿರುತ್ತದೆ. ಹೀಗಾಗಿ ಮರುಸೋಂಕು ತಪ್ಪುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

87 ಕೊರೋನಾಪೀಡಿತರಲ್ಲಿ ಸೋಂಕು ಕಾಣಿಸಿಕೊಂಡ 1 ಹಾಗೂ 6 ತಿಂಗಳ ಬಳಿಕ ಕಂಡುಬಂದ ಪ್ರತಿಕಾಯ ಪ್ರತಿಕ್ರಿಯೆಯನ್ನು ಆಧರಿಸಿ ಈ ಸಂಶೋಧನಾ ವರದಿ ಸಿದ್ಧಪಡಿಸಲಾಗಿದೆ

click me!