ಕೃಷಿ ಕಾಯ್ದೆ ರದ್ದು ಮಾಡಿಸಿ: ಮೋದಿ ತಾಯಿಗೆ ರೈತನ ಪತ್ರ!

By Suvarna NewsFirst Published Jan 25, 2021, 8:03 AM IST
Highlights

ಕೃಷಿ ಕಾಯ್ದೆ ರದ್ದು ಮಾಡಿಸಿ| ಮೋದಿ ತಾಯಿಗೆ ರೈತನ ಪತ್ರ| ಕಾಯ್ದೆ ರದ್ದಾದರೆ ಇಡೀ ದೇಶ ನಿಮಗೆ ಕೃತಜ್ಞತೆ ಸಲ್ಲಿಸಲಿದೆ

ನವದೆಹಲಿ(ಜ.25): ಕೃಷಿ ಕಾಯ್ದೆ ರದ್ದುಪಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು 2 ತಿಂಗಳಿನಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಇದೀಗ, ‘ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿಸಿ ಕಾಯ್ದೆ ರದ್ದು ಮಾಡಿಸಿ’ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಾಯ್ದೆ ರದ್ದು ಮಾಡಿಸಿದರೆ ದೇಶವೇ ನಿಮಗೆ ಕೃತಜ್ಞತೆ ಸಲ್ಲಿಸಲಿದೆ ಎಂದಿದ್ದಾರೆ.

ಈ ಕುರಿತು ಹೀರಾಬೆನ್‌ ಅವರಿಗೆ ಪತ್ರ ಬರೆದಿರುವ ಪಂಜಾಬ್‌ ಮೂಲದ ರೈತ ಹರ್‌ಪ್ರೀತ್‌ಸಿಂಗ್‌ ‘ನಾನು ಭಾರವಾದ ಹೃದಯದಿಂದ ಈ ಪತ್ರ ಬರೆಯುತ್ತಿದ್ದೇನೆ. ನಿಮಗೆ ಗೊತ್ತಿರುವ ದೇಶಕ್ಕೆ ಅನ್ನ ಉಣ್ಣಿಸುವ ಅನ್ನದಾತ ಇದೀಗ ದೆಹಲಿಯ ಮೈಕರಗುವ ಚಳಿಯಲ್ಲಿ ಬೀದಿಯಲ್ಲಿ ಮಲಗುವ ಸ್ಥಿತಿ ಬಂದಿದೆ. 90-95 ವರ್ಷದ ವೃದ್ಧರು, ಮಕ್ಕಳು, ಮಹಿಳೆಯರು ಕೂಡಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ತೀವ್ರ ಚಳಿ ಜನರನ್ನು ಅನಾರೋಗ್ಯಕ್ಕೆ ತುತ್ತು ಮಾಡುತ್ತಿದೆ. ಪರಿಣಾಮ ಹಲವರು ಸಾವನ್ನಪ್ಪಿದ್ದಾರೆ. ಇದು ನಮಗೆಲ್ಲಾ ಆತಂಕದ ಸಂಗತಿ’ ಎಂದಿದ್ದಾರೆ.

‘ಅದಾನಿ, ಅಂಬಾನಿ ಮತ್ತು ಇತರೆ ಕಾರ್ಪೊರೆಟ್‌ ಕುಳಗಳ ಪರವಾಗಿ ಈ ಮೂರು ಕರಾಳ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ಅದರ ವಿರುದ್ಧವಾಗಿ ನಾವೆಲ್ಲಾ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ಹೀಗಾಗಿ ನೀವು ಓರ್ವ ತಾಯಿಯಾಗಿ ನಿಮ್ಮೆಲ್ಲಾ ಶಕ್ತಿಯನ್ನು ಬಳಸಿ, ಕಾಯ್ದೆ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ಮನಸ್ಸು ಬದಲಿಸುವಂತೆ ಮಾಡಿ. ಹಾಗಾದಲ್ಲಿ ಇಡೀ ದೇಶ ನಿಮಗೆ ಕೃತಜ್ಞತೆ ಸಲ್ಲಿಸಲಿದೆ’ ಎಂದು ಮನವಿ ಮಾಡಿದ್ದಾರೆ.

click me!