
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಬುಧವಾರ ಪ್ರಕಟಿಸಿದೆ. ಪ್ರಮುಖ ಬ್ಯಾಂಕಿಂಗ್ ಬಡ್ಡಿದರವಾದ 'ರೆಪೊ ದರ'ವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಇದರಿಂದಾಗಿ ಹಾಲಿ ಇರುವ ಶೇ. 5.25 ರಷ್ಟಿದ್ದ ರೆಪೊ ದರವು ಶೇ. 5.50 ಕ್ಕೆ ಏರಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಚಿಲ್ಲರೆ ಹಣದುಬ್ಬರ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಮುಂಬರುವ ಜಾಗತಿಕ ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ, ಈ ಬಾರಿ ಆರ್‌ಬಿಐ ಬಡ್ಡಿದರವನ್ನು 25 ಮೂಲಾಂಕಗಳಷ್ಟು (0.25%) ಹೆಚ್ಚಿಸಿ ಶೇ 5.50 ಗೆ ಏರಿಸಿದೆ.
ಸುಮಾರು ಮೂರೂವರೆ ವರ್ಷಗಳ ನಂತರ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಕೊನೆಯದಾಗಿ ಫೆಬ್ರವರಿ 2023 ರಲ್ಲಿ ರೆಪೊ ದರವನ್ನು ಶೇ. 6.50 ಕ್ಕೆ ಏರಿಸಲಾಗಿತ್ತು. ತದನಂತರ ದರವನ್ನು ಕಡಿತಗೊಳಿಸುತ್ತಾ ಬಂತು ಪ್ರಸ್ತುತ ಜಾಗತಿಕ ಪರಿಸ್ಥಿತಿಯಿಂದಾಗಿ ಮತ್ತೆ ದರ ಏರಿಕೆಯ ಹಾದಿ ತುಳಿಯುವುದು ಅನಿವಾರ್ಯವಾಗಿದೆ.
ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಮೂರು ದಿನಗಳ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗವರ್ನರ್ ಸಂಜಯ್ ಮಲ್ಹೋತ್ರಾ, 2026-27ನೇ ಹಣಕಾಸು ವರ್ಷದಲ್ಲಿ ದೇಶದ ನೈಜ ಜಿಡಿಪಿ (GDP) ಬೆಳವಣಿಗೆ ಶೇ. 7.1 ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಸಿಪಿಐ (CPI) ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ. 5.2 ರಷ್ಟಿರಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಆರ್‌ಬಿಐ ತನ್ನ ಆರ್ಥಿಕ ನೀತಿ ನಿಲುವನ್ನು ತಟಸ್ಥ ಸ್ಥಿತಿಯಿಂದ ಮಾಪನಾಂಕ ನಿರ್ಣಯ ಬಿಗಿಗೊಳಿಸುವಿಕೆಗೆ ಬದಲಾಯಿಸಿದೆ. 2018 ರ ನಂತರ ರಿಸರ್ವ್ ಬ್ಯಾಂಕ್ ಈ ಮಾದರಿಯ ನಿಲುವಿಗೆ ಮರಳಿರುವುದು ಇದೇ ಪ್ರಥಮ ಬಾರಿಯಾಗಿದೆ.
ಪಶ್ಚಿಮ ಏಷ್ಯಾದಲ್ಲಿ (ಇರಾನ್ ಯುದ್ಧ ಹಾಗೂ ಇತರ ಸಂಘರ್ಷಗಳು) ಉಂಟಾಗಿರುವ ಉದ್ವಿಗ್ನತೆಯು ಜಾಗತಿಕ ಇಂಧನ ಪೂರೈಕೆ ಮತ್ತು ವಾಣಿಜ್ಯ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿದೆ. ಆರ್‌ಬಿಐ ಗವರ್ನರ್ ಮಲ್ಹೋತ್ರಾ ಮಾತನಾಡಿ, ಜಾಗತಿಕವಾಗಿ ಹಣದುಬ್ಬರ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳಿವೆ. ಜಾಗತಿಕ ಮಾರುಕಟ್ಟೆಯ ಆರ್ಥಿಕ ಮಂದಗತಿ ಹಾಗೂ ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮವು ಪೂರೈಕೆ ಸರಣಿಯನ್ನು ಅಡ್ಡಿಪಡಿಸಿದೆ. ಹೆಚ್ಚುತ್ತಿರುವ ತೈಲ ಬೆಲೆಗಳು ಹಾಗೂ ರೂಪಾಯಿ ಮೌಲ್ಯದ ಕುಸಿತದ ನಡುವೆಯೂ ಭಾರತದ ಆರ್ಥಿಕತೆಯು ಬಲಿಷ್ಠವಾಗಿದ್ದು, ಸ್ಥಿರತೆಯನ್ನು ಕಾಯ್ದುಕೊಂಡಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಡ್ಡಿದರ ಕಡಿತಗೊಳಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇಲ್ಲಿಯವರೆಗೆ ಆರ್‌ಬಿಐ 'ತಟಸ್ಥ' ನಿಲುವನ್ನು ಹೊಂದಿತ್ತು. ಅಂದರೆ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಡ್ಡಿದರವನ್ನು ಹೆಚ್ಚಿಸುವ ಅಥವಾ ಕಡಿತಗೊಳಿಸುವ ಮುಕ್ತ ಅವಕಾಶವನ್ನು ಕಾಯ್ದುಕೊಂಡಿತ್ತು. ಆದರೆ, 'ಮಾಪನಾಂಕ ನಿರ್ಣಯ ಬಿಗಿಗೊಳಿಸುವಿಕೆ'ಯೆಂದರೆ, ಮುಂಬರುವ ದಿನಗಳಲ್ಲಿ ಶೀಘ್ರವಾಗಿ ಬಡ್ಡಿದರ ಕಡಿತವಾಗುವುದಿಲ್ಲ ಎಂಬ ಸ್ಪಷ್ಟ ಸೂಚನೆಯಾಗಿದೆ. ಹಣದುಬ್ಬರ ನಿಯಂತ್ರಣಕ್ಕೆ ಬರದಿದ್ದರೆ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆಯನ್ನು ಇದು ತೆರೆದಿಡುತ್ತದೆ.
ಆರ್‌ಬಿಐನ ಈ ದಿಢೀರ್ ದರ ಏರಿಕೆ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ ದೇಶೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ.
ಬಡ್ಡಿದರ ಏರಿಕೆಗೆ ತಕ್ಷಣವೇ ಸ್ಪಂದಿಸುವ ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಮತ್ತು ಆಟೋಮೊಬೈಲ್ ವಲಯದ ಷೇರುಗಳು ತೀವ್ರ ನಷ್ಟ ಅನುಭವಿಸಿದವು.
ಜಾಗತಿಕ ಯುದ್ಧದ ಭೀತಿ ಹಾಗೂ ಆರ್‌ಬಿಐನ ಕಠಿಣ ನೀತಿಯಿಂದಾಗಿ ಹೂಡಿಕೆದಾರರು ಎಚ್ಚರಿಕೆಯ ಹೂಡಿಕೆ ಹಾದಿ ತುಳಿದಿದ್ದರಿಂದ ಶೇರು ಮಾರುಕಟ್ಟೆಯ ಸೂಚ್ಯಂಕಗಳು ಕೆಳಮುಖವಾಗಿ ವಹಿವಾಟು ಮುಗಿಸಿದವು.
ಒಟ್ಟಾರೆಯಾಗಿ ಆರ್‌ಬಿಐ ಕೈಗೊಂಡಿರುವ ಈ ನಿರ್ಧಾರದಿಂದಾಗಿ ಬ್ಯಾಂಕುಗಳು ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆಯಿದ್ದು, ಸಾಮಾನ್ಯ ಗ್ರಾಹಕರ ಮಾಸಿಕ ಕಂತುಗಳ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ