ಮಂಗಳೂರು ಬಂದರಿಗೆ ಸ್ವಾಯತ್ತೆ ನೀಡುವ ಮಸೂದೆಗೆ ಅನುಮೋದನೆ!

By Suvarna NewsFirst Published Feb 11, 2021, 12:49 PM IST
Highlights

12 ಬಂದರುಗಳಿಗೆ ಸ್ವಾಯತ್ತೆ ನೀಡುವ ಮಹತ್ವದ ಮಸೂದೆಗೆ ಅನುಮೋದನೆ| ‘ಪ್ರಮುಖ ಬಂದರು ಪ್ರಾಧಿಕಾರ ಮಸೂದೆ 2020’ಗೆ ಸಂಸತ್ತಿನ ಉಭಯ ಸದನಗಳ ಅನುಮೋದನೆ 

ನವದೆಹಲಿ(ಫೆ.11): ನವ ಮಂಗಳೂರು ಬಂದರು ಸೇರಿದಂತೆ ದೇಶದ ಪ್ರಮುಖ 12 ಬಂದರುಗಳಿಗೆ ಸ್ವಾಯತ್ತೆ ನೀಡುವ ಮಹತ್ವದ ಮಸೂದೆಗೆ ಬುಧವಾರ ರಾಜ್ಯಸಭೆ ಅನುಮೋದನೆ ನೀಡಿದೆ. ಇದರೊಂದಿಗೆ ‘ಪ್ರಮುಖ ಬಂದರು ಪ್ರಾಧಿಕಾರ ಮಸೂದೆ 2020’ಗೆ ಸಂಸತ್ತಿನ ಉಭಯ ಸದನಗಳ ಅನುಮೋದನೆ ಸಿಕ್ಕಿದಂತಾಗಿದೆ. ಲೋಕಸಭೆಯಲ್ಲಿ 2020ರ ಸೆ.23ರಂದು ಮಸೂದೆಗೆ ಅಂಗೀಕಾರ ಸಿಕ್ಕಿತ್ತು. ಮಸೂದೆ ಅಂಗೀಕಾರದಿಂದ ಬಂದರುಗಳು ತಮ್ಮದೇ ಆದ ನಿರ್ಣಯಗಳನ್ನು ಕೈಗೊಳ್ಳಲು ಸ್ವತಂತ್ರ ಇರರುತ್ತವೆ.

ಬುಧವಾರ ರಾಜ್ಯಸಭೆಯಲ್ಲಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌, ಟಿಎಂಸಿ, ಎಸ್‌ಪಿ, ಆರ್‌ಜೆಡಿ, ಡಿಎಂಕೆ, ಆಪ್‌, ಸಿಪಿಎಂ, ಇದು ಬಂದರುಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ. ತಮ್ಮ ಮಿತ್ರರನ್ನು ಉದ್ಯಮಕ್ಕೆ ತರಲು ಸರ್ಕಾರ ಈ ಯೋಜನೆ ರೂಪಿಸಿದೆ. ಜೊತೆಗೆ ಈ ಕಾಯ್ದೆ ಮೂಲಕ ಬಂದರು ಜಾಗದ ಮೇಲಿನ ರಾಜ್ಯಗಳ ಹಕ್ಕನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳುತ್ತಿದೆ ಎಂದು ಕಿಡಿಕಾರಿದವು.

ಇದಕ್ಕೆ ತಿರುಗೇಟು ನೀಡಿದ ಕೇಂದ್ರ ಹಡಗು ಖಾತೆ ಸಚಿವ ಮಾಂಡವೀಯ, ವಿಪಕ್ಷಗಳು ಆಡಳಿತವಿರುವ ರಾಜ್ಯಗಳು ಈಗಾಗಲೇ ಬಂದರುಗಳನ್ನು ಅಭಿವೃದ್ಧಿಗಾಗಿ ಖಾಸಗಿ ಕಂಪನಿಗಳಿಗೆ ಕೊಟ್ಟಿಲ್ಲವೇ? ಮೋದಿ ಸರ್ಕಾರ ಖಾಸಗಿ ಪಾಲುದಾರಿಕೆಯ ಮೂಲಕ ಈ ಬಂದರುಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡಿ ಅವುಗಳನ್ನು ವಿಶ್ವದರ್ಜೆಗೆ ಏರಿಸುವ ಗುರಿ ಹೊಂದಿದೆ. ಈ ಬಂದರುಗಳಿಗೆ ನೇಮಿಸುವ ಮಂಡಳಿಗಳು ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿರುತ್ತವೆ. ಮಂಡಳಿಗಳಲ್ಲಿ ಸರ್ಕಾರದ ಸದಸ್ಯರೂ ಇರುತ್ತಾರೆ. ಇದು ಬಂದರುಗಳ ಖಾಸಗೀಕರಣ ಅಲ್ಲ. ಕೆಲ ಸಮಯದ ಹಿಂದೆ ನಾವು ಕೋಲ್ಕತಾ ಬಂದರನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆವು. ಪರಿಣಾಮ ನಷ್ಟದಲ್ಲಿದ್ದ ಸಂಸ್ಥೆ ಇದೀಗ ಲಾಭದ ಹಾದಿಯಲ್ಲಿದೆ ಎಂದು ಹೇಳಿದರು.

click me!