* ಮದುವೆಗಿಂತ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟ ವಧು
* ಮದುವೆಗೂ ಮುನ್ನ ಪರೀಕ್ಷಾ ಕೊಠಡಿಗೆ ಹಾಜರ್
* ಪರೀಕ್ಷೆ ಬರೆದು ಮದುವೆ ಮಂಟಪಕ್ಕೆ ತೆರಳಿದ ಶಿವಾಂಗಿ
ರಾಜ್‌ಕೋಟ್(ನ.23): ಮದುವೆ (Wedding) ಮನೆಯಲ್ಲಿ ನಡೆಯುವ ಶಾಸ್ತ್ರಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದರಲ್ಲೂ ವಧುವಿನ ಪಾಲಿಗೆ ಅದು ಬಹಳಷ್ಟು ಬ್ಯೂಸಿ ದಿನ. ಮೇಕಪ್, ಹೇರ್‌ಸ್ಟೈಲ್, ಡ್ರೆಸ್ಸಿಂಗ್ ಹೀಗೆ ಇಡೀ ದಿನವೇ ಕಳೆದು ಹೋಗುತ್ತದೆ. ಅದರಲ್ಲೂ ಇತ್ತೀಚೆಗೆ ಬಹಳಷ್ಟು ಯುವತಿಯರು ಪ್ರೀ ವೆಡ್ಡಿಂಗ್ ಫೋಟೋಶೂಟ್ (Pre-wedding bridal shoot) ಮೊರೆ ಹೋಗುತ್ತಾರೆ. ಆದರೆ ನೀವು ಯಾವತ್ತಾದರೂ ಪ್ರೀ ವೆಡ್ಡಿಂಗ್ ಎಕ್ಸಾಂ (Pre-wedding examination) ಬಗ್ಗೆ ಕೇಳಿದ್ದೀರಾ? ಅರೇ... ಇದೇನಿದು ಅಂತೀರಾ? ಹೌದು ಇತ್ತೀಚೆಗೆ ಸೋಶಿಯಲ್ ಮೀಡಿಯಾ ವೆಡ್ಡಿಂಗ್ ಫೋಟೋಗಳಿಂದ ತುಂಬಿ ತುಳುಕುತ್ತಿರುತ್ತದೆ. ಈ ನಡುವೆ ಕೆಲ ವಿಭಿನ್ನ ಫೋಟೋ ಹಾಗೂ ವಿಡಿಯೋಗಳು ವಿಶೇಷ ಕಾರಣಗಳಿಂದ ವೈರಲ್ ಆಗುತ್ತಿರುತ್ತವೆ. ಸದ್ಯ ಇಂತಹುದೇ ಫೋಟೋ ಒಂದು ವೈರಲ್ ಆಗಿದ್ದು, ಇಲ್ಲಿ ವಧುವೊಬ್ಬಳು ತನ್ನ ಮದುವೆ ದಿನ ಕಾರ್ಯಕ್ರಮಕ್ಕಿಂತ ಹೆಚ್ಚು ಶಿಕ್ಷಣಕ್ಕೆ (Education First) ಆದ್ಯತೆ ನೀಡಿದ್ದಾಳೆ. ಈಕೆಯ ಈ ನಡೆ ನೆಟ್ಟಿಗರ ಮನ ಗೆದ್ದಿದೆ.
ರಾಜ್‌ಕೋಟ್‌ನ (Rajkot) ವಧುವೊಬ್ಬಳು ತನ್ನ ವಿವಾಹ ಸಮಾರಂಭದ ಮೊದಲು ವಿಶ್ವವಿದ್ಯಾನಿಲಯದ ಪರೀಕ್ಷೆಗೆ (university Examination) ಹಾಜರಾಗಿದ್ದಾಳೆ. ಈಕೆ ವಧುವಿನ ಉಡುಪಿನಲ್ಲೇ ಪರೀಕ್ಷೆಗೆ ಹಾಜರಾಗಿರುವುದು ಮತ್ತಷ್ಟು ಸದ್ದು ಮಾಡಿದೆ. ಆಭರಣ ಮತ್ತು ಮೇಕ್ಅಪ್‌ನೊಂದಿಗೆ ಪರೀಕ್ಷಾ ಕೊಠಡಿಯಲ್ಲಿ ಕುಳಿತು ಎಕ್ಸಾಂ ಬರೆದಿದ್ದಾಳೆ. ಈಕೆ ಶಿಕ್ಷಣವನ್ನು ಮದುವೆ ಕಾರ್ಯಕ್ರಮಕ್ಕಿಂತ ಮೇಲಿಟ್ಟು, ಯೂನಿವರ್ಸಿಟಿ ಪರೀಕ್ಷೆಯನ್ನು ಎದುರಿಸಿದ್ದಾಳೆ.
undefined
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿರುವ ವಧುವನ್ನು ಶಿವಂಗಿ ಬಗ್ತಾರಿಯಾ (Shivangi Bagthariya) ಎಂದು ಗುರುತಿಸಲಾಗಿದೆ. ಈಕೆ ತನ್ನ ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು ಬರೆಯಲು ತನ್ನ ಪತಿಯೊಂದಿಗೆ ಗುಜರಾತ್‌ನ ಶಾಂತಿ ನಿಕೇತನ ಕಾಲೇಜಿನ (Shanti Niketan Collegem Gujarat) ಪರೀಕ್ಷಾ ಹಾಲ್‌ಗೆ ಹಾಜರಾಗಿದ್ದಳು. ಮಾಧ್ಯಮ ವರದಿಗಳ ಪ್ರಕಾರ ಅವರು ಸೋಶಿಯಲ್ ವರ್ಕ್‌ನಲ್ಲಿ ಪದವಿ ಪಡೆಯುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಾಂಗಿ ತನ್ನ ಕಾಲೇಜಿನ ಪರೀಕ್ಷೆಯ ವೇಳಾಪಟ್ಟಿಯನ್ನು ಘೋಷಿಸುವ ಮೊದಲೇ ತನ್ನ ಮದುವೆ ದಿನಾಂಕ ನಿಶ್ಚಯವಾಗಿತ್ತು ಎಂದಿದ್ದಾರೆ. ಅವಳ ಮದುವೆ ಮುಹೂರ್ತ ಹಾಗೂ ಪರೀಕ್ಷೆ ಸಮಯವೂ ಒಂದೇ ಆಗಿತ್ತು. ಆದರೆ ಧೈರ್ಯಗೆಡದ ಶಿವಾಂಗಿ ಕುಟುಂಬದವರನ್ನು ಒಪ್ಪಿಸಿ, ಕುಟುಂಬದವರ ಆಶೀರ್ವಾದದೊಂದಿಗೆ, ತನ್ನ ವಧುವಿನ ಉಡುಗೆ ಮತ್ತು ಆಭರಣಗಳನ್ನು ಸಂಪೂರ್ಣವಾಗಿ ಧರಿಸಿ ಮೊದಲು ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದಳು.
ಇನ್ನು ಪರೀಕ್ಷೆ ಮುಗಿಯುತ್ತಿದ್ದಂತೆಯೇ ವಧು ನೇರವಾಗಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮದುವೆ ಮಂಟಪಕ್ಕೆ ತೆರಳಿದ್ದಾಳೆ. ತನ್ನ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ ಶಿವಾಂಗಿ ನಿರ್ಧಾರವು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ವೀಡಿಯೊ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ವೈರಲ್ ಆಗಿದೆ.
ಮದುವೆಗೆ ಮುಂಚೆಯೇ ಪರೀಕ್ಷೆ ಬರೆಯುವ ಆಕೆಯ ನಿರ್ಧಾರವನ್ನು ಅನೇಕ ಜನರು ಶ್ಲಾಘಿಸಿದರು ಮತ್ತು ಭಾರತದಾದ್ಯಂತ ಮಹಿಳೆಯರಿಗೆ ಸ್ಫೂರ್ತಿ ಎಂದು ಕರೆದಿದ್ದಾರೆ.