
ತಿರುವನಂತಪುರಂ (ಏ.2): ಏ.9ರಂದು ಚುನಾವಣೆ ನಡೆಯಲಿರುವ ಕೇರಳವನ್ನು ಕಾಂಗ್ರೆಸ್ ಮುಕ್ತ ಮಾಡುವ ಹೊಣೆಯನ್ನು ಸ್ವತಃ ರಾಹುಲ್ ಗಾಂಧಿ ವಹಿಸಿಕೊಂಡಿದ್ದಾರೆ ಎಂದು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ. ಈ ಮೂಲಕ, ರಾಜ್ಯದಿಂದ ಕಾಂಗ್ರೆಸ್ ಅನ್ನು ತೊಡೆದುಹಾಕಲು ಬಿಜೆಪಿ ಮತ್ತು ಸಿಪಿಐ(ಎಂ) ಕೈಜೋಡಿಸಿವೆ ಎಂಬ ರಾಹುಲ್ ಆರೋಪಕ್ಕೂ ತಿರುಗೇಟು ನೀಡಿದ್ದಾರೆ.
ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ರಾಜೀವ್, ‘ಕೇರಳವನ್ನು ರಾಹುಲ್ ಒಬ್ಬಂಟಿಯೇ ಕಾಂಗ್ರೆಸ್ ಮುಕ್ತ ಮಾಡುತ್ತಿದ್ದಾರೆ. ಆದರೆ ಅವರು ಇದರ ಶ್ರೇಯವನ್ನು ನನಗೆ ಅಥವಾ ನಮಗೆ(ಎನ್‌ಡಿಎ ಕೂಟ) ಕೊಡುತ್ತಿರುವುದು ಸಂತೋಷ. ಆದರೆ ನಮಗದು ಬೇಡ ಜತೆಗೇ ಅವರು ಹರ್ಯಾಣ, ದೆಹಲಿ ಮತ್ತು ಬಿಹಾರಕ್ಕೂ ಕಾಂಗ್ರೆಸ್‌ನಿಂದ ಮುಕ್ತಿ ಕೊಡಿಸುತ್ತಿದ್ದಾರೆ’ ಎಂದರು.
ಇದೇ ವೇಳೆ ಸಿಪಿಐ(ಎಂ) ಜತೆಗಿನ ಮೈತ್ರಿಯ ಆರೋಪವನ್ನು ತಳ್ಳಿಹಾಕಿದ್ದು, ‘ಇದು ಅನೂಹ್ಯ. ನಮ್ಮ ಕಾರ್ಯಕರ್ತರನ್ನು ಕೊಂದ ಪಕ್ಷದೊಂದಿಗೆ ನಾವು ಕೈಜೋಡಿಸುವುದಿಲ್ಲ. ಹಾಗೆ ಮಾಡಿದರೆ, ನಮ್ಮ ಪಕ್ಷಕ್ಕಾಗಿ ಹುತಾತ್ಮರಾದವರಿಗೆ ಅವಮಾನ ಮಾಡಿದಂತೆ’ ಎನ್ನುತ್ತಾ, ‘ಅನ್ಯ ರಾಜ್ಯಗಳಲ್ಲಿ ಎಡ ಪಕ್ಷಗಳ ಜತೆಗಿನ ಕಾಂಗ್ರೆಸ್‌ನ ಮೈತ್ರಿಯನ್ನು ಮುಚ್ಚಿಡಲು ಹೀಗೆ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.
ಮುಂದುವರೆದು, ಶಬರಿಮಲೆ ಚಿನ್ನ ಕಳವಿನ ಬಗ್ಗೆ ಪ್ರಧಾನಿ ಮೌನವನ್ನು ಪ್ರಶ್ನಿಸಿದ್ದಕ್ಕೆ ಸಂಬಂಧಿಸಿದಂತೆ ಉತ್ತರಿಸಿ, ‘ಮೋದಿ ನಿಮಗೆ ಕರೆ ಮಾಡಿ ಈ ಬಗ್ಗೆ ಮಾತಾಡುತ್ತಾರೆ ಅಂದುಕೊಳ್ಳಬೇಡಿ. ಬದಲಿಗೆ ಅವರು ಕೆಲ ವಾರದ ಹಿಂದೆಯೇ ಕೊಚ್ಚಿಯಲ್ಲಿ ಮಾತನಾಡಿ ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು’ ಎಂದು ಆರ್‌ಸಿ ಹೇಳಿದರು. ಜತೆಗೆ, ಆ ಪ್ರಕರಣದ ಆರೋಪಿಯ ಜತೆ ಕಾಂಗ್ರೆಸ್ ವರಿಷ್ಠೆ ಸೋನಿಯಾರ ಸಂಬಂಧದ ಬಗ್ಗೆ ಪ್ರಶ್ನಿಸಿದರು.
ಚುನಾವಣೆಯಲ್ಲಿ ಎನ್‌ಡಿಎ ಕೂಟ ಎಷ್ಟು ಸೀಟುಗಳನ್ನು ಗೆಲ್ಲಬಹುದು ಎಂಬ ನಿಖರ ಸಂಖ್ಯೆಯನ್ನು ಹೇಳಲು ನಿರಾಕರಿಸಿದ ರಾಜೀವ್, ‘ನಾವು ಬಹುತೇಕ ಎಲ್ಲಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದೇವೆ ಹಾಗೂ ಆಡಳಿತವಿರೋಧಿ ಅಲೆಯ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದೇವೆ’ ಎಂದರು. ಜತೆಗೆ, ‘10 ವರ್ಷದ ಆಡಳಿತದಿಂದ ಜನ ಬೇಸತ್ತಿರುವಾಗಲೂ ಸಿಎಂ ಪಿಣರಾಯಿ ವಿಜಯನ್ ಮತ್ತೊಂದು ಅವಧಿಗೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿರುವುದಾದರೂ ಹೇಗೆ?’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ