
ಜೈಪುರ(ಜು.09): ಸಾಮಾನ್ಯವಾಗಿ ಅಪಘಾತದ ಸಂದರ್ಭದಲ್ಲಿ ರಸ್ತೆಯಲ್ಲಿ ಹೋಗುತ್ತಿರುವ ಟ್ರಕ್‌ನಿಂದ ಕೆಲವು ದ್ರವ ಪದಾರ್ಥಗಳು ಸೋರಿಕೆಯಾಗುತ್ತವೆ, ಅದರಲ್ಲಿ ಪೆಟ್ರೋಲ್, ಡೀಸೆಲ್, ಆಹಾರ ತೈಲ ಸೋರಿಕೆಯಾಗುತ್ತದೆ ಎಂಬ ಸುದ್ದಿಯನ್ನು ನಾವು ಅನೇಕ ಬಾರಿ ಕೇಳುತ್ತೇವೆ. ಆದರೆ ಈ ಬಾರಿ ತುಪ್ಪ ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಇದೇ ರೀತಿ ಅಪಘಾತಕ್ಕೀಡಾಗಿದೆ. ವಾಸ್ತವವಾಗಿ, ರಾಜಸ್ಥಾನದಲ್ಲಿ ತುಪ್ಪ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಏಕಾಏಕಿ ನಿಯಂತ್ರಣವಿಲ್ಲದೆ ಪಲ್ಟಿಯಾಗಿದೆ. ಇದರಿಂದ ಟ್ಯಾಂಕರ್‌ನ ಮುಂಭಾಗ ಬೇರ್ಪಟ್ಟು ಹೊಲದಲ್ಲಿ ಬಿದ್ದಿದೆ. ಅದೇ ಟ್ಯಾಂಕರ್‌ನ ಹಿಂಬದಿ ರಸ್ತೆ ಮಧ್ಯದ ಡಿವೈಡರ್ ಮೇಲೆ ಪಲ್ಟಿಯಾಗಿದೆ. ಇದರಿಂದ ಟ್ಯಾಂಕರ್‌ನಿಂದ ತುಪ್ಪ ಸೋರಿಕೆಯಾಗಿ ವಿಭಜಕಗಳ ನಡುವಿನ ಚರಂಡಿಯಲ್ಲಿ ಬೀಳಲಾರಂಭಿಸಿದೆ. ತಕ್ಷಣ ಸುತ್ತಮುತ್ತಲಿನವರಿಗೆ ವಿಷಯ ತಿಳಿದು, ನೂರಾರು ಮಂದಿ ಪಾತ್ರೆಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಏನಿದು ಪ್ರಕರಣ?
ಸಿರೋಹಿ ಜಿಲ್ಲೆಯ ಸರುಪ್‌ಗಂಜ್‌ನಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿ ಏಕಾಏಕಿ ತುಪ್ಪ ತುಂಬಿದ ಟ್ಯಾಂಕರ್ ನಿಯಂತ್ರಣಕ್ಕೆ ಬಾರದೆ ರಸ್ತೆಗೆ ಉರುಳಿದೆ. ಬಳಿಕ ರಸ್ತೆ ಮಧ್ಯೆ ನಿರ್ಮಿಸಿದ್ದ ಚರಂಡಿಯಲ್ಲಿ ಟ್ಯಾಂಕರ್‌ನಿಂದ ತುಪ್ಪ ಸೋರಿಕೆಯಾಗತೊಡಗಿತು. ಈ ವಿಷಯ ಸರುಪ್‌ಗಂಜ್ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಳಿದಾಗ, ಅವರು ಪಾತ್ರೆ, ಮಗ್‌ಗಳೊಂದಿಗೆ ಸ್ಥಳಕ್ಕೆ ತಲುಪಿದರು. ಅಲ್ಲದೇ ಸಾಧ್ಯವಾದಷ್ಟು ತುಪ್ಪ ತಾವು ತಂದಿದ್ದ ಪಾತ್ರೆಗಳಲ್ಲಿ ಸಂಗ್ರಹಿಸತೊಡಗಿದರು. ಸಾರ್ವಜನಿಕರು ಒಂದೆಡೆ ಸೇರಿದ್ದರಿಂದ ವಾಹನ ಸಂಚಾರವೂ ಅಸ್ತವ್ಯಸ್ತವಾಯಿತು. ಸುಮಾರು 30 ನಿಮಿಷಗಳ ನಂತರವೇ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು.
ಜನರನ್ನು ತೆರವುಗೊಳಿಸಲು ಪೊಲೀಸರ ಹರಸಾಹಸ
ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ, ಜನರನ್ನು ಓಡಸಲಾರಂಭಿಸಿದ್ದಾರೆ. ಘಟನೆಯಲ್ಲಿ ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ರಸ್ತೆ ಬದಿಯಲ್ಲಿ ಟ್ಯಾಂಕರ್ ನಿಲ್ಲಿಸಲಾಗಿದೆ. ಪೊಲೀಸರು ಅಪಘಾತದ ಸಂಪೂರ್ಣ ತನಿಖೆಯಲ್ಲಿ ತೊಡಗಿದ್ದಾರೆ. ಟ್ಯಾಂಕರ್ ಚಾಲಕನ ಪ್ರಕಾರ, ಘಟನೆಯ ಬಳಿಕ ಗ್ರಾಮಸ್ಥರು ಬಿದ್ದಿದ್ದ ತುಪ್ಪವನ್ನು ಸಂಗ್ರಹಿಸಿದ್ದಾರೆ. ಇದು 4 ರಿಂದ 5 ಲಕ್ಷ ರೂಪಾಯಿ ಮೌಲ್ಯದ್ದೆಂದು ತಿಳಿಸಿದ್ದಾರೆ.
ಇನ್ನು ಅಪಘಾತದ ವೇಳೆ ಟ್ಯಾಂಕರ್‌ಗೆ ಬೆಂಕಿ ತಗುಲದಿರುವುದು ಬಹುದೊಡ್ಡ ಸಮಾಧಾನದ ವಿಚಾರವಾಗಿದೆ. ಇಲ್ಲದಿದ್ದರೆ ಬಹುದೊಡ್ಡ ದುರಂತವೇ ಸಂಭವಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ