
ನವದೆಹಲಿ (ಜು.11): ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರದ ಸೇನಾ ಕಲ್ಯಾಣ ಖಾತೆಯ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರತಿ ಬಾರಿ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಜುಂಜುನುದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜೇಂದ್ರ ಸಿಂಗ್ ಗುಧಾ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸೋಮವಾರ ರಾತ್ರಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವ ರಾಜೇಂದ್ರ ಸಿಂಗ್ ಗುಧಾ ಈ ವೇಳೆ ನೀಡಿದ್ದ ಹೇಳಿಕೆ ವೈರಲ್ ಆಗಿದೆ. ಮಂಗಳವಾರದ ವೇಳೆ ಅವರ ಹೇಳಿಕೆಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ. ಮೂಲಗಳ ಪ್ರಕಾರ, ರಾಜೇಂದ್ರ ಸಿಂಗ್ ಗುಧಾ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಸೀತಾ ಮಾತೆಯ ಕುರಿತಾಗಿ ವಿವಾದಿತ ಮಾತುಗಳನ್ನು ಆಡಿದ್ದಾರೆ. 'ಸೀತಾ ಮಾತೆ ಬಹಳ ಸುಂದರವಾಗಿದ್ದಳು. ಆಕೆ ಅದೆಷ್ಟು ಸುಂದರವಾಗಿದ್ದಳು ಎಂದರೆ ರಾಮ ಹಾಗೂ ರಾವಣ ಇಬ್ಬರೂ ಆಕೆಯನ್ನೂ ನೋಡಿ ಹುಚ್ಚರಾಗಿದ್ದರು. ಸೀತೆ ಸುಂದರವಾಗಿದ್ದ ಕಾರಣಕ್ಕೆ ರಾಮ ಹಾಗೂ ರಾವಣರ ನಡುವೆ ಯುದ್ಧ ನಡೆದಿತ್ತು' ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
'ಸೀತಾ ಮಾತೆ ಬಹಳ ಸುಂದರವಾಗಿದ್ದಳು. ಆಕೆ ಜನಕರಾಜನ ಮಗಳು. ಬಹಳ ಸುಂದರವಾಗಿದ್ದಳು. ಸೀತಾ ಮಾತೆಯ ಸೌಂದರ್ಯದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ರಾಮ ಹಾಗೂ ರಾವಣ ಇಬ್ಬರೂ ಉತ್ತಮ ವ್ಯಕ್ತಿಗಳು. ಆದರೆ, ಇಬ್ಬರೂ ಕೂಡ ಸೀತಾ ಮಾತೆಗೆ ಹುಚ್ಚರಾಗಿದ್ದರು. ನಿಜಕ್ಕೂ ಸೀತಾ ಮಾತೆ ಸುಂದರವಾಗಿದ್ದಳು. ಇದನ್ನೂ ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ' ಎಂದು ಶಾಸಕ ರಾಜೇಂಧ್ರ ಸಿಂಗ್ ಗುಧಾ ಹೇಳಿದ್ದಾರೆ. ಅಷ್ಟಕ್ಕೆ ನಿಲ್ಲದ ಅವರು, ತಮ್ಮನ್ನೇ ಸೀತಾ ಮಾತೆಗೆ ಹೋಲಿಸಿಕೊಂಡಿದ್ದಾರೆ. ನನ್ನಲ್ಲಿರುವ ಗುಣಗಳ ಕಾರಂದಿಂದಾಗಿಯೇ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಹಾಗೂ ಸಚಿನ್ ಪೈಲಟ್ ಇಬ್ಬರಿಗೂ ನಾನು ಬೇಕಾಗಿದ್ದೇನೆ ಎಂದಿದ್ದಾರೆ.
ವಿಧಾನಸಭಾ ಕ್ಷೇತ್ರದ ಗೋಧಾಜಿ ಸಿಎಚ್‌ಸಿಯಲ್ಲಿ ಡಿಜಿಟಲ್ ಎಕ್ಸ್ ರೇ ಯಂತ್ರದ ಉದ್ಘಾಟನಾ ಸಮಾರಂಭದದಲ್ಲಿ ಭಾಗವಹಿಸಿ ಮಾತನಾಡಿದ್ದ ಸಚಿವ ರಾಜೇಂದ್ರ ಸಿಂಗ್ ಗುಧಾ, ಈ ವೇಳೆ ಸೀತಾ ಮಾತೆಯ ಬಗ್ಗೆ ನಿಂದನಾರ್ಹವಾಗಿ ಮಾತನಾಡಿದ್ದಾರೆ. ಸೀತಾ ಮಾತೆಯ ಸೌಂದರ್ಯ ಯಾವ ರೀತಿ ಇತ್ತೆಂದರೆ, ಸಾಮಾನ್ಯ ಮನುಷ್ಯರಂತಿದ್ದ ರಾಮ ಹಾಗೂ ರಾವಣ ಕೂಡ ಆಕೆಗೆ ಹುಚ್ಚರಾಗಿದ್ದರು ಎಂದಿದ್ದಾರೆ.
ಪ್ರಧಾನಿಯಾಗಲು ರಾಹುಲ್ ಗಾಂಧಿ ಏನ್ ಮಾಡ್ಬೇಕು? ರಾಖಿ ಸಾವಂತ್ ಕೊಟ್ಟ ಟಿಪ್ಸ್ ಇದು
ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ರಾಜೇಂದ್ರ ಸಿಂಗ್ ಗುಧಾ, ಬಿಜೆಪಿಯವರು ಹಿಂದು ಮುಸ್ಲಿಂ ಹೆಸರಿನಲ್ಲಿ, ಮಂದಿರ ಮಸೀದಿ ಹೆಸರಿನಲ್ಲಿ, ಹಿಂದುಸ್ತಾನ್ ಪಾಕಿಸ್ತಾನ್ ಹೆಸರಿನಲ್ಲಿ, ಮೋದಿ-ಯೋಗಿ ಹೆಸರನಲ್ಲಿ ಮತ ಕೇಳುತ್ತಾರೆ. ಆರೆಸ್ಸೆಸ್ ಸಿದ್ಧಾಂತದ ಅವರು ಪ್ರಪಂಚದ ಎಲ್ಲಾ ವಿಷಯಗಳನ್ನು ಹೊಂದಿದ್ದಾರೆ. ಆದರೆ, ರಾಜೇಂದ್ರ ಗುಧಾ ಮಾತ್ರ ತನ್ನ ಕೆಲಸಗಳು ಹಾಗೂ ಅದರ ಸಾಧನೆ ಮೇಲೆ ಮತಗಳನ್ನು ಪಡೆಯುತ್ತಾರೆ ಎಂದಿದ್ದಾರೆ.
ನನಗಾಗಿ ಕಾಯ್ಬೇಡ, ಇನ್ನೊಂದು ಮದ್ವೆಯಾಗು: ಪತ್ನಿಗೆ ಸಂದೇಶ ನೀಡಿದ ಹಂತಕ!
ಇನ್ನೊಂದೆಡೆ ಗುಧಾ ಹೇಳಿಕೆಯನ್ನು ಬಿಜೆಪಿ ಟೀಕೆ ಮಾಡಿದೆ. ಈ ಕಾಂಗ್ರೆಸ್ಸಿಗರು ಹಿಂದೂಗಳನ್ನು ಗೇಲಿ ಮಾಡಲು ಮತ್ತು ಅವರ ಮತ ಬ್ಯಾಂಕ್ ರಾಜಕೀಯವನ್ನು ಇನ್ನಷ್ಟು ಗಟ್ಟಿಮಾಡಲು ಮತ್ತೆಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ? ಭಗವಾನ್ ಶ್ರೀರಾಮನ ಮೇಲಿನ ಭಾರತದ ನಂಬಿಕೆಯನ್ನು ಹುಚ್ಚ ಎಂದು ಬಣ್ಣಿಸಿದ್ದಾರೆ, ರಾಜಸ್ಥಾನ ಸರ್ಕಾರದ ಸಚಿವ ರಾಜೇಂದ್ರ ಗೂಢಾ ಅವರಿಗೆ ಸ್ವಂತ ಅಸ್ತಿತ್ವದ ಬಗ್ಗೆ ನಾಚಿಕೆಯಾಗಲಿಲ್ಲವೇ?ಇದು ಉದ್ದೇಶಪೂರ್ವಕ ಹೇಳಿಕೆ.ಇಂತಹ ಹೇಳಿಕೆಗಳಿಂದಾಗಿ ಇಂದು ಕಾಂಗ್ರೆಸ್ ಪರಿಸ್ಥಿತಿ ಶೂರ್ಪನಖಾ ಎಂಬಂತಾಗಿದೆ.ರಾವಣನ ತಂಗಿಗೆ ಏನಾಗಿದೆ!ಗೆಹ್ಲೋಟ್ ಜಿ, ನಿಮ್ಮ ಸರ್ಕಾರದ ಸಚಿವನಿಗೆ ಇದು ತಿಳಿದಿರಬೇಕು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ