ಜೂ.1ರಿಂದ ದೇಶಾದ್ಯಂತ ರೈಲು ಸಂಚಾರ| ಮೊದಲ ಹಂತದಲ್ಲಿ 200 ನಾನ್ ಎಸಿ ರೈಲುಗಳು ನಿತ್ಯ ಓಡಾಟ| ಶೀಘ್ರ ಬುಕಿಂಗ್ ಆರಂಭ: ಗೋಯಲ್
ನವದೆಹಲಿ(ಮೇ.20): ಲಾಕ್‌ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ರೈಲು ಸಂಚಾರ ಪುನಾರಂಭಿಸಲು ಉದ್ದೇಶಿಸಿರುವ ಭಾರತೀಯ ರೈಲ್ವೆ, ಮೊದಲ ಹಂತದಲ್ಲಿ ಜೂ.1ರಿಂದ 200 ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ. ನಾನ್- ಎಸಿ ರೈಲುಗಳು ಇವಾಗಿರಲಿದ್ದು, ಈ ರೈಲುಗಳ ಟಿಕೆಟ್ ಬುಕಿಂಗ್ ಆನ್‌ಲೈನ್ ಮೂಲಕ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ತಿಳಿಸಿದ್ದಾರೆ.
ವಲಸಿಗ ಕಾರ್ಮಿಕರ ಸಾಗಣೆಗೆ ಸಂಚರಿಸುತ್ತಿರುವ ಶ್ರಮಿಕ ಸ್ಪೆಷಲ್ ರೈಲು ಹಾಗೂ ರಾಜಧಾನಿ ಮಾರ್ಗಗಳಲ್ಲಿ ಸಂಚರಿಸುತ್ತಿರುವ 15 ಜತೆ ವಿಶೇಷ ರೈಲುಗಳ ಜತೆಗೆ 200 ನಾನ್ ಎಸಿ ರೈಲುಗಳ ನಿತ್ಯ ಸಂಚಾರವನ್ನು ಜೂ.1ರಿಂದ ನಿತ್ಯ ಆರಂಭಿಸಲಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಶ್ರಮಿಕ ರೈಲಿನಲ್ಲಿ ಪ್ರಯಾಣ ಮಾಡುವ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆ ಗಿಫ್ಟ್!
ಯಾವ ಮಾರ್ಗಗಳಲ್ಲಿ ರೈಲು ಓಡಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಸಣ್ಣ ಪಟ್ಟಣ ಹಾಗೂ ನಗರಗಳಲ್ಲಿ ಈ ರೈಲುಗಳು ಓಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾ.22ರಿಂದ ದೇಶದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಈ ನಡುವೆ, ಜೂ.30ರವರೆಗೂ ರೈಲ್ವೆ ಇಲಾಖೆ ಟಿಕೆಟ್ ಬುಕಿಂಗ್ ರದ್ದುಗೊಳಿಸಿತ್ತು. ಹೀಗಾಗಿ ಅಲ್ಲಿವರೆಗೂ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿತ್ತು. ಆದರೆ ಈಗ ಜೂ.1ರಿಂದ 200 ರೈಲುಗಳ ಸಂಚಾರ ಆರಂಭಿಸುತ್ತಿರುವುದರಿಂದ ಜನರಿಗೆ ಭಾರಿ ಅನುಕೂಲವಾಗಲಿದೆ.