
ನವದೆಹಲಿ (ಏ.29): ಮಂಗಳವಾರದಿಂದ ನಡೆಯಲಿರುವ ರೈಲ್ವೆ ನೇಮಕಾತಿ ಮಂಡಳಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಧರ್ಮದ ಸಂಕೇತಗಳನ್ನು ತೆಗೆಸದಂತೆ ರೈಲ್ವೆ ಇಲಾಖೆ ಸೂಚನೆ ನೀಡಿದೆ. ಇವುಗಳನ್ನು ನಿರ್ಬಂಧಿಸುವ ಸೂಚನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇಲಾಖೆ ಈ ಕ್ರಮ ಕೈಗೊಂಡಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಖುದ್ದು ಈ ವಿಷಯ ಪ್ರಕಟಿಸಿದ್ದಾರೆ.
ಕರ್ನಾಟಕದ ವಿವಿಧ ಪರೀಕ್ಷಾ ಕೇಂದ್ರಗಳು ಸೇರಿದಂತೆ ದೇಶಾದ್ಯಂತ ಪರೀಕ್ಷೆಗೆ ಸಿದ್ಧತೆ ನಡೆದಿದೆ. ಈ ನಡುವೆ ಅಭ್ಯರ್ಥಿಗಳಿಗೆ ನೀಡಲಾದ ಪ್ರವೇಶಪತ್ರದಲ್ಲಿ ಮಂಗಳಸೂತ್ರ ಹಾಗೂ ಧಾರ್ಮಿಕ ಚಿಹ್ನೆಗಳನ್ನು ಪರೀಕ್ಷಾ ಕೇಂದ್ರದೊಳಗೆ ಧರಿಸುವಂತಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಲಾಗಿತ್ತು. ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು.
ಇದರ ಬೆನ್ನಲ್ಲೇ ದೆಹಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಸಚಿವ ಸೋಮಣ್ಣ, ‘ರೈಲ್ವೆ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳಿಗಾಗಿ ಏ.29ರಿಂದ 3 ದಿನಗಳ ಕಾಲ ಪರೀಕ್ಷೆ ನಡೆಯಲಿದೆ. ಪ್ರವೇಶಪತ್ರದ ವಿಚಾರದಲ್ಲಿ ಸ್ವಲ್ಪ ಗೊಂದಲಗಳಿದ್ದವು. ಈ ವಿಚಾರವಾಗಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರ ಜೊತೆ ಚರ್ಚೆ ನಡೆಸಲಾಗಿದೆ. ಅಭ್ಯರ್ಥಿಗಳು ಮಾಂಗಲ್ಯ ಸರ, ಬಳೆ, ಜನಿವಾರ, ಚೂಡಿದಾರ ಧರಿಸುವ ಕುರಿತು ಗೊಂದಲಗಳಿದ್ದು, ಇದನ್ನು ಸರಿಪಡಿಸಲಾಗಿದೆ. ಅಭ್ಯರ್ಥಿಗಳಿಗೆ ತೊಂದರೆಯಾಗುವ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಈ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ’ ಎಂದು ತಿಳಿಸಿದರು.
ನಿಷೇಧಿತ ವಸ್ತುಗಳು:
ಮೊಬೈಲ್ ಪೋನ್, ಪೇಜರ್, ಗಡಿಯಾರ, ಕ್ಯಾಲ್ಕುಲೇಟರ್, ಬುಕ್ ಇಯರ್‌ಪೋನ್, ಬ್ಲೂಟೂತ್ ಸಾಧನ, ಮೈಕ್, ಹ್ಯಾಂಡ್‌ಬ್ಯಾಗ್, ಪರ್ಸ್, ಪೆನ್, ಪೆನ್ಸಿಲ್, ಇರೇಸರ್, ಪೌಚ್, ಸ್ಕೇಲ್, ಪೇಪರ್, ಕ್ಯಾಮರಾ, ವಾಟರ್ ಬಾಟಲ್, ಪ್ಯಾಕ್ ಮಾಡಿದ ಆಹಾರ ವಸ್ತು, ಎಲೆಕ್ಟ್ರಾನಿಕ್ ಸಾಧನ.ಅನುಮತಿಸಲಾದ ವಸ್ತು:
ಇ-ಕಾಲ್ ಲೆಟರ್ ಮಾತ್ರ. (ಪರೀಕ್ಷಾ ಕೇಂದ್ರದಲ್ಲಿ ಪೆನ್ ಒದಗಿಸಲಾಗುವುದು). ಲೋಹದ ವಸ್ತು, ಜನಿವಾರ, ಧಾರ್ಮಿಕ ಚಿಹ್ನೆಗಳು, ಬಳೆ, ಮಂಗಲಸೂತ್ರ, ಒಡವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ